ಸುರಪುರ: ತಾಲೂಕಿನ ವಿವಿಧ ಗ್ರಾಮಗಳ ೪೫ ಜನ ವಿಕಲ ಚೇತನರಿಗೆ ತ್ರೀಚಕ್ರ ವಾಹನಗಳನ್ನು ವಿತರಿಸಲಾಗಿದೆ.ವಿಕಲ ಚೇತನರು ಇವುಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧ್ಯಕ್ಷ ಹಾಗು ಶಾಸಕ ನರಸಿಂಹ ನಾಯಕ (ರಾಜುಗೌಡ) ತಿಳಿಸಿದರು.
ನಗರದ ತಮ್ಮ ಗೃಹ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಕಲ ಚೇತನರಿಗೆ ತ್ರೀಚಕ್ರ ವಾಹನಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ,ವಿಕಲ ಚೇತನರ ಏಳಿಗೆಗಾಗಿ ಸರಕಾರ ಹಲವಾರು ಯೋಜನೆಗಳನ್ನು ನೀಡಿದ ಅವುಗಳ ಸದುಪಯೋಗಪಡಿಸಿಕೊಂಡು ಉನ್ನತಿ ಹೊಂದುವಂತೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಎಲ್ಲರು ಕೊರೊನಾ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು.ಲಾಕ್‌ಡೌನ್ ಅನ್ಲಾಕ್ ಆಗಿದೆ ಎಂದ ಮಾತ್ರಕ್ಕೆ ಕೊರೊನಾ ಹೋಗಿದೆ ಎಂದು ಅರ್ಥವಲ್ಲ.ಆದರೆ ಕೊರೊನಾ ನಮ್ಮ ಮೇಲೆ ಪರಿಣಾಮ ಬೀರದಂತೆ ತಡೆಯಲು ಎಲ್ಲರು ಲಸಿಕೆ ಹಾಕಿಸಿಕೊಳ್ಳುವುದು ಮುಖ್ಯವಾಗಿದೆ.ಆದ್ದರಿಂದ ನಿಮ್ಮ ಊರುಗಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಬರುತ್ತಿದ್ದು,ಆ ಸಂದರ್ಭದಲ್ಲಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ.ಅದರಿಂದ ಏನಾದರು ಅಡ್ಡ ಪರಿಣಾಮಗಳಿವೆ ಎಂದು ಯಾರಾದರೂ ಸುಳ್ಳು ಸುದ್ದಿ ಹಬ್ಬಿಸುತ್ತಾರೆ,ಅದ್ಯಾವದಕ್ಕು ಕಿವಿಗೊಡದೆ ಲಸಿಕೆ ಹಾಕಿಸಿಕೊಳ್ಳುವಂತೆ ಸಲಹೆ ನೀಡಿದರು.
ಇನ್ನು ಮೂರನೇ ಅಲೆ ಬರಲಿದೆ ಎಂದು ಹೇಳಲಾಗುತ್ತಿದೆ,ಆದರೆ ಮೂರನೇ ಅಲೆ ಬರುವ ಮುನ್ನವೆ ಎಲ್ಲರು ಎಚ್ಚೆತ್ತುಕೊಂಡರೆ ಯಾವ ಅಲೆಯೂ ಏನು ಮಾಡುವುದಿಲ್ಲ.ಅಲ್ಲದೆ ಸರಕಾರವೂ ಅದನ್ನು ಸಮರ್ಥವಾಗಿ ನಿಭಾಯಿಸಲಿದೆ ಎಂದರು.
ಕೊರೊನಾ ಸಂದರ್ಭದಲ್ಲಿ ಸಕ್ರೀಯವಾಗಿ ಕೆಲಸ ಮಾಡಿರುವ ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಂಗನವಾಡಿ ಆಶಾ ಕಾರ್ಯಕರ್ತೆಯರು ಪತ್ರಕರ್ತರು ಸೇರಿ ಎಲ್ಲಾ ಕೊರೊನಾ ವಾರಿಯರ್ಸ್‌ಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಟಿಹೆಚ್‌ಒ ಡಾ: ಆರ್.ವಿ.ನಾಯಕ ತಾ.ಪಂ ಇಒ ಅಂಬ್ರೇಶ ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಮುಖಂಡರಾದ ವೇಣುಗೋಪಾಲ ಜೇವರ್ಗಿ ನಗರಸಭೆ ಸದಸ್ಯ ನರಸಿಂಹಕಾಂತ ಪಂಚಮಗಿರಿ ಸೇರಿದಂತೆ ಅನೇಕರಿದ್ದರು.
ನಗರದಲ್ಲಿ ಕುಡಿಯುವ ನೀರಿನ ಅಭಾವದ ವಿಷಯ ಗಂಭೀರವಾಗಿ ತೆಗೆದುಕೊಂಡಿದ್ದೇನೆ.ಸರಕಾರ ನಮ್ಮ ನಗರಕ್ಕೆ ಕುಡಿಯುವ ನೀರಿನ ಕಾಮಗಾರಿಗಾಗಿ ೧೫೬ ಕೋಟಿ ರೂಪಾಯಿಗಳ ಕಾಮಗಾರಿಗೆ ಅನುದಾನ ನೀಡಿದ್ದು ಈಗಾಗಲೆ ಟೆಂಡರ್ ಪ್ರಕ್ರೀಯೆ ಚಾಲ್ತಿಯಲ್ಲಿದ್ದು ಇನ್ನು ಒಂದುವರೆ ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ.ಅಲ್ಲದೆ ಮುಂದಿನ ೧೩ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ.ಇದೇ ರೀತಿ ಶಹಾಪುರದಲ್ಲಿಯೂ ಕುಡಿಯುವ ನೀರಿನ ಕಾಮಗಾರಿ ಆರಂಭವಾಗಲಿದ್ದು ಮುಂದಿನ ೫೦ ವರ್ಷಗಳ ವರೆಗೆ ಕುಡಿಯುವ ನೀರಿನ ಅಭಾವ ಬಾರದಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.ಗ್ರಾಮೀಣ ಪ್ರದೇಶದಲ್ಲಿಯೂ ಜಲ ಜೀವನ ಮಿಷನ್ ಅಡಿಯಲ್ಲಿ ಕುಡಿಯುವ ನೀರಿನ ಕಾಮಗಾರಿ ನಿರ್ಮಿಸಲಾಗುವುದು ಎಂದರು.