ಕಲಬುರಗಿ: ಕಾರ್ಮಿಕ ಇಲಾಖೆಯ ವ್ಯಾಪ್ತಿಗೆ ಬರುವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕಕರಿಗೆ ಎಂ.ಎಲ್.ಸಿ ಅನುದಾನದಡಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಅವರು ನಗರದ ಜಗತ್ ವೃತ್ತದ ಬಳಿಯ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ಆಹಾರ ಸಾಮಗ್ರಿ ವಿತರಿಸಿದರು.
ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಒಳಗೊಂಡಂತೆ ವಿವಿಧ ವೃತ್ತಿಯಲ್ಲಿರುವ ಕಾರ್ಮಿಕರಿಗೆ ಬೆನ್ನೆಲುಬಾಗಿ ನಿಂತಿದ್ದು, ಈಗಾಗಲೇ ಸುಮಾರು 1.50 ಲಕ್ಷ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಇದಲ್ಲದೇ ಕಾರ್ಮಿಕರ ಖಾತೆಗೆ 3000 ರೂ.ಗಳು ನೇರವಾಗಿ ಜಮೆಯಾಗಿದೆ ಎಂದರು.
ಸುಮಾರು 2 ಸಾವಿರ ಕಟ್ಟಡ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ವಿತರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಎಲ್ಲರೂ ಸಾಮಾಜಿಕ ಅಂತರ, ಮಾಸ್ಕ್ ಬಳಸುವಿಕೆ ಹಾಗೂ ಸ್ಯಾನಿಟೈಸರ್ ಬಳಸಬೇಕು ಎಂದರು.
ಆಹಾರಧಾನ್ಯ ಕಿಟ್‍ನಲ್ಲಿ ತೊಗರಿ ಬೇಳೆ 1 ಕೆ.ಜಿ., ಅಡುಗೆ ಎಣ್ಣೆ 1 ಲೀಟರ್, ಗೋಧಿ ಹಿಟ್ಟು 2ಕೆ.ಜಿ., ಅವಲಕ್ಕಿ 1ಕೆ.ಜಿ, ಉಪ್ಪು 1 ಕೆ.ಜಿ, 200 ಗ್ರಾಂ ಸಾಂಬಾರ್ ಪೌಡರ್ ಪ್ಯಾಕೇಟು, 200ಗ್ರಾಂ ಖಾರಪುಡಿ ಪಾಕೇಟು, ಸಕ್ಕರೆ 1ಕೆ.ಜಿ, ರವಾ 1ಕೆ.ಜಿ ಮತ್ತು ಅಕ್ಕಿ 5 ಕೆ.ಜಿ ಒಳಗೊಂಡಿದೆ.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತೆ ಆರತಿ ಪೂಜಾರಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ, ಪ್ರೋಬೆಷನರಿ ಕಾರ್ಮಿಕ ಅಧಿಕಾರಿ ಡಾ. ದತ್ತಾತ್ರೇಯ ಗಾದಾ, ಹಿರಿಯ ಕಾರ್ಮಿಕ ನಿರೀಕ್ಷಕ ರವೀಂದ್ರ ಕುಮಾರ ಬಲ್ಲೂರ್, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.