ರೈತ-ಕಾರ್ಮಿಕರ ಗುಳೆ ತಪ್ಪಿಸುವ ಕಾರ್ಯ ಸರ್ಕಾರಗಳಿಂದಾಗಲಿ: ಪುರುಷೋತ್ತಮ ಕಲಾಲ್ ಬಂಡಿ

0
168

ಬೆಂಗಳೂರು: ರಾಜ್ಯದಲ್ಲಿ ಬರದಿಂದ ತತ್ತರಿಸಿದ ರೈತ-ಕಾರ್ಮಿಕರು ಇಂದು ಬೆಂಗಳೂರು ಸೇರಿದಂತೆ ಪುಣೆ, ಮುಂಬೈನಂತ ದೊಡ್ಡ ಪಟ್ಟಣಗಳಿಗೆ ಗುಳೆ ಬಂದು ಪ್ರಾಣಿಗಳಿಗಿಂತಲೂ ಕೆಳಮಟ್ಟದ ಜೀವನ ನಡೆಸುತ್ತಿರುವುದು ಇಡೀ ಮಾನವ ಸಮಾಜ ತಲೆ ತಗ್ಗಿಸುಂತಹದ್ದಾಗಿದೆ ಎಂದು ಕೆಂಗೇರಿ ವಿಭಾಗದ ಸಿಐಟಿಯು ಪ್ರಧಾನ ಕಾರ್ಯದರ್ಶಿ ಸ್ವಾಮಿರಾಜ ಬೇಸರ ವ್ಯಕ್ತಪಡಿಸಿದರು.

ರವಿವಾರದಂದು ನಗರದ ರಾಜರಾಜೇಶ್ವರಿ ನಗರದ ಜವರೇಗೌಡ ನಗರದಲ್ಲಿ ವಾಸವಾಗಿರುವ ಉತ್ತರ ಕರ್ನಾಟಕದಿಂದ ವಲಸೆ ಬಂದಿದ್ದ ಕಾರ್ಮಿಕರನ್ನುದ್ದೇಶಿ ಅವರು ಮಾತನಾಡಿದರು.

Contact Your\'s Advertisement; 9902492681

ನಮ್ಮನ್ನಾಳುವ ಸರ್ಕಾರಗಳು ಕಟ್ಟಡ ಕಾರ್ಮಿಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದರೂ ಸೌಲಭ್ಯಗಳು ಫಲಾನುಭವಿಗಳಿಗೆ ತಲುಪದಂತೆ ಅವರೇ ಕುತಂತ್ರ ನಡೆಸಿದ್ದಾರೆ. ಆದ್ದರಿಂದ ಕಾರ್ಮಿಕರೆಲ್ಲರೂ ಒಟ್ಟಾಗಿ ಸಂಘಟನೆ ಕಟ್ಟಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಸ್ವಾಮಿರಾಜ್ ಕರೆ ನೀಡಿದರು.

ಬೆಂಗಳೂರು ಸೈನ್ಸ್ ಕಲೆಕ್ಟಿವ್ ನ ಪುರುಷೋತ್ತಮ್ ಕಲಾಲ್ ಬಂಡಿ ಮಾತನಾಡಿ, ಕಾರ್ಮಿಕರೆಲ್ಲರೂ ಸಂಘಟಿತರಾಗಿ ಅಗತ್ಯ ಸೌಲಭ್ಯಗಳನ್ನು ನೀಡಲು ಸರ್ಕಾರದ ಮೇಲೆ ಒತ್ತಡ ಹಾಕೋಣ ಎಂದರು. ಬೆಂಗಳೂರಿಗೆ ಕೇವಲ ಉತ್ತರ ಕರ್ನಾಟಕದಿಂದ ಮಾತ್ರ ವಲಸೆ ಬರುವುದಿಲ್ಲ. ದೇಶದ 21 ರಾಜ್ಯಗಳಿಂದ ಸುಮಾರು ಒಂದು ಕೋಟಿಯಷ್ಟು ಜನ ಕೂಲಿಕಾರರು ವಲಸೆ ಬಂದಿದ್ದಾರೆ. ಆದರೆ ಸರ್ಕಾರ ಈ ಕಾರ್ಮಿಕರ ಹಕ್ಕುಗಳನ್ನು ನೀಡುವಲ್ಲಿ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದೆ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಹರಿಯಾಯ್ದರು.

ವಿಜ್ಞಾನವನ್ನೂ ಕಾರ್ಮಿಕರು ಹರಗಿಸಿಕೊಳ್ಳಬೇಕಿದೆ. ಮಹಿಳೆಯರಿಗೆ ಸಾಬೂನು ಹಾಗೂ ಸಾಬೂನು ಪುಡಿ, ಮೇಣದ ಬತ್ತಿ, ಝಂಡೂಬಾಂಬ್, ಊದುಬತ್ತಿ ಯಂತಹ ಅನೇಕ ವಸ್ತುಗಳನ್ನು ತಯಾರಿಸುವುದು ಹೇಗೆ ಎಂಬ ಸೈನ್ಸ್‌ ನ್ನು ತಮಗೆ ತಿಳಿಸಿ ತರಬೇತುಗೊಳಿಸಲಾಗುವುದು ಎಂದು ಪುರುಷೋತ್ತಮ್ ಕಲಾಲ್ ಬಂಡಿ ಹೇಳಿದರು. ಸಂಘಟಕ ರಮೇಶ್ ವೀರಾಪೂರು ಮಾತನಾಡಿ, ವಲಸೆ ಕಾರ್ಮಿಕರಿಗೆ ಕನಿಷ್ಠ ಶುದ್ಧ ಕುಡಿಯುವ ನೀರು, ಶೌಚಾಲಯ, ವಸತಿ, ಆರೋಗ್ಯ, ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆಗಳಿಲ್ಲದೇ ಚರಂಡಿಯ ಅಕ್ಕಪಕ್ಕದಲ್ಲಿ ಅತ್ಯಂತ ನಿಕೃಷ್ಠ ಬದುಕನ್ನು ಬದುಕುತ್ತಿದ್ದಾರೆ. 15-20 ವರ್ಷ ಬೆಂಗಳೂರಿನಲ್ಲಿಯೇ ಇದ್ದು ಕೂಲಿ ಮಾಡುತ್ತಿದ್ದರೂ ರೇಷನ್ ಕಾರ್ಡ್ ಇನ್ನಿತರ ಗುರುತುಗಳಿಲ್ಲದೇ ಕೆಲಸ ಮಾಡಲು ಇರುವ ಯಂತ್ರದಂತೆ ಬದುಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಆದ್ದರಿಂದ ಎಲ್ಲಾ ವಲಸೆ ಕಾರ್ಮಿಕರು ಒಗ್ಗಟ್ಟಿಂದ ಹೋರಾಟಕ್ಕೆ ಮುನ್ನುಗ್ಗೋಣ. ಈ ಮೂಲಕ ಸರ್ಕಾರದ ಬುಡ ಅಲುಗಾಡಿಸಿ ನಮ್ಮ ಹಕ್ಕುಗಳನ್ನು ಪಡೆಯುವ ಮೂಲಕ ಬದುಕನ್ನು ಸುಧಾರಿಸಿಕೊಳ್ಳೋಣ ಎಂದು ರಮೇಶ್ ವೀರಾಪೂರು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here