ಪತ್ರಿಕಾ ದಿನಾಚರಣೆಯ ಈ ದಿನ ನಾವು ಮಾಡಬೇಕಾಗಿರುವುದು ಏನು?

0
335

ಹಿಂದಣ ಹೆಜ್ಜೆಯನರಿತಲ್ಲದೆ
ನಿಂದ ಹೆಜ್ಜೆಯನರಿಯಬಾರದು
ಮುಂದಣ ಹೆಜ್ಜೆ ಅಳಿದಲ್ಲದೆ
ಒಂದು ಪಾದ ನೆಲೆಗೊಳ್ಳದು
-ಅಲ್ಲಮಪ್ರಭು

ಪ್ರಜಾಪ್ರಭುತ್ವದ ಹಿರಿತನವನ್ನು ಬೆಳಗುವುದರ ಜೊತೆಗೆ ದೇಶದ, ಸಮಾಜದ ಹಿತ ಕಾಪಡುವ ಪ್ರಬಲ ಶಕ್ತಿಯಾಗಿಯಾಗಿದೆ. ಪ್ರಜಾಪ್ರಭುತ್ವದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ನಂತರ ಬರುವ ಈ ಪತ್ರಿಕಾರಂಗವನ್ನು ನಾಲ್ಕನೇ ಅಂಗವೆಂದು ಗುರುತಿಸಲಾಗುತ್ತದೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವ ಪ್ರಜಾಪ್ರಭುತ್ವ ಸರ್ಕಾರದ “ಕಾವಲು ನಾಯಿ” ಆಗಿ ಇದು ಕೆಲಸ ಮಾಡುತ್ತದೆ. ಮೇಲಿನ ಮೂರು ಅಂಗಗಳು ತಮ್ಮ ಪಾವಿತ್ರ್ಯತೆ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಜನತೆ ಪತ್ರಿಕಾರಂಗದ ಮೇಲೆ ಇನ್ನೂ ಅದಮ್ಯ ಆಸೆ ಹೊತ್ತು ಕುಳಿತಿದ್ದಾರೆ.

Contact Your\'s Advertisement; 9902492681

ಪತ್ರಿಕೋದ್ಯಮಕ್ಕೆ ತನ್ನದೇ ಆದ ಇತಿಹಾಸವಿದೆ. ಭಾರತದಲ್ಲಿ ಜೇಮ್ಸ್ ಅಗಸ್ಟಸ್ ಹಿಕ್ಕಿಗೆ ಸಲ್ಲುತ್ತದೆ. ಆತನ ಬೆಂಗಾಲಿ ಗೆಜೆಟ್ ಅಥವಾ “ಕಲ್ಕತ್ತಾ ಜನರಲ್ ಅಡ್ವಟೈಸರ್” ಎಂಬ ಎರಡು ಹಾಳೆಗಳ ವಾರ ಪತ್ರಿಕೆಯನ್ನು ಜನವರಿ ೨೯, ೧೭೮೯ರಲ್ಲಿ ಅಸ್ತಿತ್ವಕ್ಕೆ ತರುತ್ತಾನೆ. ಆಗಿನ ಭಾರತದ ಜನರಲ್ ಗವರ್ನರ್ ಆಗಿದ್ದ ವಾರೆನ್ ಹೇಸ್ಟಿಂಗ್ಸ್ ವಿರುದ್ಧ “ಗಾಳಿ ಸುದ್ದಿ” ಎಂಬ ಅಂಕಣದಲ್ಲಿ ಬರೆದುದ್ದರ ಪರಿಣಾಮವಾಗಿ ಈತ ಜೈಲು ಸೇರಬೇಕಾಯಿತು. ಆದರೆ ಅಲ್ಲಿಯೂ ಆತ ಬರೆಯುವುದನ್ನು ನಿಲ್ಲಿಸಲಿಲ್ಲ. ಕೊನೆಗೆ ಸರ್ಕಾರ ಮುದ್ರಣ ಯಂತ್ರವನ್ನು ಮುಟ್ಟುಗೋಲು ಹಾಕಿತು.

ಇದಾದ ಬಳಿಕ ಕಾಣಿಸಿಕೊಂಡದ್ದು ಬರ್ನಾಡ್ ಮೆಸ್ಸಿಂಕ್ಸ್ ಮತ್ತು ಪೀಟರ್ ರೀಡ್ ಸಂಪಾದಕತ್ವದಲ್ಲಿ “ಇಂಡಿಯನ್ ಗೆಜೆಟ್” ಎಂಬ ಪತ್ರಿಕೆ. ಆ ಮೇಲೆ ೧೭೮೪ರಲ್ಲಿ “ಕಲ್ಕತ್ತಾ ಗೆಜೆಟ್” ಹೊರ ಬರುತ್ತದೆ. ಇದಾದ ಬಳಿಕ ಬಾಂಬೆ ಹೆರಾಲ್ಡ್, ಬಾಂಬೆ ಗೆಜೆಟ್, ಬೆಂಗಾಲ್ ಜರ್ನಲ್, ಬೆಂಗಾಲ್ ಹರ್ಕಾರು ಅನ್ನುವಂತೆಹ ಅನೇಕ ಪತ್ರಿಕೆಗಳು ಹೊರ ಬರುತ್ತವೆ. ಜೇಮ್ಸ್ ಸಿಲ್ಕ್ ಬಕಿಂಗ್ ಹ್ಯಾಮ್ ಎಂಬಾತ ೧೮೧೮ರಲ್ಲಿ “ಕಲ್ಕತ್ತಾ ಜರ್ನಲ್” ಆರಂಭಿಸಿ ಪತ್ರಿಕಾ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತಾನೆ. ನಂತರ ೧೮೨೨ರಲ್ಲಿ ರಾಜಾರಾಮ ಮೋಹನರಾಯ ಪರ್ಶಿಯನ್ ಭಾಷೆಯಲ್ಲಿ ಮೀರತ್-ಉಲ್- ಅಕ್ಬಾರ್ ಎಂಬ ಪತ್ರಿಕೆ ಆರಂಭಿಸಿ ಕ್ರೈಸ್ತ ಮಷಿನರಿಗಳ ನಿಯೋಜಿತ ಪ್ರಚಾರವನ್ನು ಬಯಲಿಗೆಳೆಯುತ್ತಾರೆ.

ಆ ಮೇಲೆ ಗಾಂಧೀಜಿಯವರು ಹರಿಜನ ಮತ್ತು ಯಂಗ್ ಇಂಡಿಯಾ ಪತ್ರಿಕೆಗಳನ್ನು ಪ್ರಾರಂಭಿಸಿ ದಲಿತೋದ್ಧಾರದ ಜೊತೆಗೆ ರಾಷ್ಟ್ರೀಯತೆಯನ್ನು ಬೆಳೆಸಿದರು. ಅದೇರೀತಿಯಾಗಿ ಬಾಲ ಗಂಗಾಧರ ತಿಲಕರು ಕೇಸರಿ ಗರ್ಜನೆ ಎಂಬ ಪತ್ರಿಕೆ ಆರಂಭಿಸಿ ಈ ನೆಲದ ಹೋರಾಟವನ್ನು ತಿಳಿಸಿದರು. ಹಾಗೆಯೇ ಡಾ. ಬಿ.ಆರ್. ಅಂಬೇಡ್ಕರ್ ಅವರು ಮೂಕ ನಾಯಕ (೧೯೨೦, ಜನವರಿ ೩೧), ಬಹಿಷ್ಕೃತ ಭಾರತ (೧೯೨೭, ಏಪ್ರಿಲ್ ೩), ಜನತಾ (೧೯೩೦), ಪ್ರಬುದ್ಧ ಭಾರತ (೧೯೫೬) ಎಂಬ ಪತ್ರಿಕೆಗಳನ್ನು ಆರಂಭಿಸಿ ತನ್ನ ಜನತೆಯ ನೋವು ಕಷ್ಟಗಳನ್ನು ವಿವರಿಸುತ್ತಾರೆ.
ಕರ್ನಾಟಕದಲ್ಲಿ ೧೮೩೪ ಜುಲೈ ೧ರಂದು ಫೆಡ್ರಿಕ್ ಮೊಂಗ್ಲಿಂಗ್ ಎಂಬುವವರು “ಮಂಗಳೂರು ಸಮಾಚಾರ” ಎಂಬ ಪತ್ರಿಕೆ ಮೊಟ್ಟ ಮೊದಲು ಆರಂಭಿಸುತ್ತಾರೆ.

ಹೀಗೆ ಸ್ವಾತಂತ್ರ್ಯಪೂರ್ವದಿಂದ ಸ್ವಾತಂತ್ರ್ಯಾನಂತರದವರೆಗೆ ದೇಶದ ವಿವಿಧ ಭಾಷೆಗಳಲ್ಲಿ ವಿವಿಧ ರೀತಿಯ ಪತ್ರಿಕೆಗಳು ಹೊರ ಬರುತ್ತಿವೆ. ವಿಜ್ಞಾನದ ಕ್ರಾಂತಿಯ ಫಲವಾಗಿ ಇಂದು ಮುದ್ರಣ ಮಾದ್ಯಮ ಹಿಂದೆ ಸರಿದು ವಿದ್ಯುನ್ಮಾದ್ಯಮಗಳು ಮುಂದೆ ಬಂದು ನಿಂತಿವೆ. ಮಾಹಿತಿ ತಂತ್ರಜ್ಞಾನ (ಇಂಟರ್‌ನೆಟ್) ಸುದ್ದಿ ಸಂಗ್ರಹಕ್ಕೆ ವೇಗ ನೀಡಿದೆ. ಜಗತ್ತನ್ನು ಕುಳಿತಲ್ಲೇ ನೋಡಬಹುದು. ಇಲ್ಲವೇ ತಿರುಗಾಡುತ್ತ ನೋಡಬಹುದು. ಈಗಿನ ಸೋಷಿಯಲ್ ಮೀಡಿಯಾಗಳಿಂದಾಗಿ ಕ್ಷಣಾರ್ಧದಲ್ಲೇ ನಮ್ಮ ಬೆರಳತುದಿಯಲ್ಲೇ ಜಗತ್ತಿನ ಸುದ್ದಿಗಳನ್ನು ನೋಡಬಹುದಾಗಿದೆ.

ಬಂಡವಾಳಶಾಹಿಗಳ ಕೈಯಲ್ಲಿ ಮಾದ್ಯಮರಂಗ: ಮುದ್ರಣ ಮಾಧ್ಯಮ ಇಲ್ಲವೇ ಎಲೆಕ್ಟ್ರಾನಿಕ್ ಮೀಡಿಯಾಗಳ ಮೂಲಕ ಮಾಹಿತಿ, ಸಂದೇಶ, ಛಾಯಾಚಿತ್ರ, ವಿಡಿಯೊ, ಜಾಹೀರಾತು ಬಳಸಿ ವ್ಯಾಪಾರ ಮಾಡುವ ಮಾರಾಟದ ಸರಕು ಆಗಿ ಪರಿಣಮಿಸಿದೆ ಮಾತ್ರವಲ್ಲ; ಬೃಹತ್ ಉದ್ದಿಮೆಯಾಗಿ ಬೆಳೆದಿದೆ. ಹೀಗಾಗಿ ದುಡ್ಡಿದ್ದವರೆಲ್ಲ ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿ ಲಾಭ ಪಡೆಯುವ ಉದ್ಯಮವಾಗಿ ಬೆಳೆದು ನಿಂತಿದೆ. ಈ ಮೀಡಿಯಾಗಳ ಮಾಲೀಕರು ದೊಡ್ಡ ದೊಡ್ಡ ಉದ್ಯಮಿಗಳು ಹಾಗೂ ರಾಜಕಾರಣಿಗಳಾಗಿದ್ದಾರೆ. ಅವರುಗಳು ಸಹಜವಾಗಿಯೇ ಮೀಡಿಯಾಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಪತ್ರಕರ್ತರಿಗೂ ಮನಸ್ಸಿದೆ…

ಹೀಗಾಗಿಯೇ ಹಲವು ಸುದ್ದಿ ಸಂಸ್ಥೆಯಲ್ಲಿ ಕೆಲಸ ಮಾಡುವ ಪತ್ರಕರ್ತರು ಕೂಡ ಇಂದು ತಮ್ಮ ಬಣ್ಣ (ಚಾರ್ಮಿಂಗ್) ಕಳೆದುಕೊಳ್ಳುತ್ತಿದ್ದಾರೆ. ಬದುಕು ಬಣ್ಣದ ಚಿತ್ತಾರ ಅನ್ನುವ ಹಾಗೆಯೇ ಪತ್ರಕರ್ತರ ಬದುಕು ಕೂಡ ದಿನಕ್ಕೊಂದು ಚಿತ್ತಾರ. ಒಮ್ಮೆ ಮುಖವಾಡ ಹಾಕಿ, ಇನ್ನೂಮ್ಮೆ ಕಳಚಿದ ಮುಖವಾಡದೊಂದಿಗೆ ತನ್ನದೇ ಆದ ಸುಖ, ದುಃಖ, ದುಮ್ಮಾನಗಳನ್ನು ದೂರ ಸರಿಸಿ ಸಮಾಜದ ಆಗು ಹೋಗುಗಳಿಗೆ ದುಡಿವ, ಕನ್ನಡಿ ಹಿಡಿಯುವ ಪತ್ರಕರ್ತರಿಗೂ ಒಂದು ಮನಸ್ಸಿದೆ, ಭಾವನೆಗಳಿವೆ, ಕರ್ತವ್ಯಗಳಿವೆ ಮತ್ತು ಅವರದ್ದೇ ಆದ ಒಂದು ಪುಟ್ಟ ಕನಸಿನ ಬದುಕಿದೆ ಎಂಬುದು ಸುದ್ದಿ ಸಂಸ್ಥೆಯ ಮಾಲೀಕರಿಗೆ ಸೇರಿದಂತೆ ಬಹಳಷ್ಟು ಜನರಿಗೆ ಅರ್ಥವಾಗುವುದೇ ಇಲ್ಲ. ಪತ್ರಕರ್ತರು ಇಂದು ಸಾಕಷ್ಟು ಸಮಸ್ಯೆ-ಸವಾಲುಗಳನ್ನು ಎದುರಿಸುತ್ತಿದ್ದಾರೆ. ಗ್ರಾಮೀಣ ಮಟ್ಟದ ಪತ್ರಕರ್ತರ ಪರಿಸ್ಥಿತಿಯಂತೂ ಆ ದೇವರೇ ಬಲ್ಲ ಎನ್ನುವಂತಿದೆ.

ಪತ್ರಕರ್ತ ಯಾರು? ಆತನ ಲಕ್ಷಣಗಳೇನು?

ಪತ್ರಕರ್ತ ಎಂದರೆ ಈತ ಒಮ್ಮೆಲೆ ಮುಗಿಲಿನಿಂದ ದುಬಕ್ಕನೆ ಉಚಿಗೊಂಡು ಬಿದ್ದವನಲ್ಲ. ಆತನಿಗೆ ವಿಶೇಷ “ಕೋಡ್” ಅಥವಾ ಕೋಡು ಮೂಡಿರುವುದಿಲ್ಲ. ಸಾಮಾನ್ಯನಿಗಿರುವಷ್ಟು ಸ್ವಾತಂತ್ರ್ಯ ಆತನಿಗಿದೆ. ಬರೆಯುವವನಿಗೆ ಸಾಮಾಜಿಕ ಕಾಳಜಿ, ಕಳಕಳಿ ಹಾಗೂ ಜವಾಬ್ದಾರಿ ಇರಬೇಕಾಗುತ್ತದೆ. ಭಾಷೆಯ ಮೇಲಿನ ಹಿಡಿತವಿರಬೇಕು, ಕಿರಿದರಲ್ಲಿ ಹಿರಿದನ್ನು ತೋರಿಸಬೇಕು, ಕುತೂಹಲ, ಸಮಯಪ್ರಜ್ಞೆ, ತಾಳ್ಮೆ, ಶ್ರದ್ಧೆ ಇರಬೇಕು. ಸರ್ಕಾರ ಮತ್ತು ಸಮಾಜದ ಮಧ್ಯೆ ಕೊಂಡಿಯಾಗಿ ತನ್ನ ಕಾರ್ಯ ನಿರ್ವಹಿಸಬೇಕಾಗುತ್ತದೆ. ಸುದ್ದಿ ಮಾಡುವವ ಹದ್ದಿನ ಕಣ್ಣಾಗಿರಬೇಕು. ವರದಿಗಾರನಿಗೆ ಮೈಯೆಲ್ಲ ಕಿವಿಯಾಗಿರಬೇಕು, ಸಮಾಜದ ಹಿತರಕ್ಷಣೆಯಲ್ಲಿ ಕಾವಲು ನಾಯಿಯಂತೆ ಕಾರ್ಯನಿರ್ವಹಿಸಬೇಕು. ಶಿಕ್ಷಣ, ಅರಿವು, ಜಾಗೃತಿ ಮೂಡಿಸುವ ಕೆಲಸ ಅತ್ಯಂತ ಪ್ರಾಮಾಣಿಕ ಮತ್ತು ಪಾರದರ್ಶಕ ರೀತಿಯಲ್ಲಿ ನಿರ್ವಹಿಸಬೇಕು. ಸಂವಿಧಾನಕ್ಕೆ ಬದ್ಧವಾಗಿ ದೇಶದ ಸಾಮಾಜಿಕ, ರಾಜಕೀಯ, ಸೌಹಾರ್ದ ಬದುಕಿಗೆ ಮುನ್ನುಡಿ ಬರೆಯುವಂತಿರಬೇಕು.

ಅರ್ಥ ಕಳೆದುಕೊಂಡ ಪತ್ರಿಕಾರಂಗ: ಈ ಮಧ್ಯೆ ಬರವಣಿಗೆಯ ಗಂಧ-ಗಾಳಿ ಗೊತ್ತಿಲ್ಲದ ಹಲವು ಅಯೋಗ್ಯರು ಪತ್ರಿಕಾರಂಗವನ್ನು ಪ್ರವೇಶ ಮಾಡಿದ್ದಾರೆ. ಹೀಗಾಗಿ ಇವರುಗಳು ರಾಜಕಾರಣಿ, ಉದ್ಯಮಿ ಇಲ್ಲವೇ ರಿಯಲ್ ಎಸ್ಟೇಟ್‌ಗಳ ಏಜೆಂಟರುಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭ್ರಷ್ಟಾಚಾರವನ್ನು ಬಯಲಿಗೆಳೆಯಬೇಕಾದ ಇವರುಗಳೇ ಸಾಕಷ್ಟು ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿದ್ದಾರೆ. ಜನತಂತ್ರ ವ್ಯವಸ್ಥೆಯಲ್ಲಿ ಮಾಧ್ಯಮಗಳು ಜನಾಭಿಪ್ರಾಯ ರೂಪಿಸುವ ವೇದಿಕೆಗಳಾಗಬೇಕು ಖರೆ! ಆದರೆ ಅದರ ಬದಲು ತಮ್ಮ ಬಾಲಂಗೋಚಿಗಳಿಗೆ ಸ್ಥಳಾವಕಾಶ, ಸಮಯಾವಕಾಶ ನೀಡುತ್ತಿದ್ದಾರೆ. ಇಂಥವರಿಂದಾಗಿಯೇ ಸಮೂಹ ಮಾಧ್ಯಮಗಳ ಮೇಲಿನ ಜನತೆಯ ವಿಶ್ವಾಸ ಕಡಿಮೆಯಾಗುತ್ತಿದೆ.

ಪತ್ರಿಕಾ ದಿನಚಾರಣೆಯ ಈ ದಿನ: ಪ್ರತಿ ವರ್ಷ ಪತ್ರಿಕಾ ದಿನಾಚರಣೆ ಆಚರಿಸುವ ನಾವುಗಳು ಈ ಕ್ಷೇತ್ರದಲ್ಲಿದ್ದು ಎಷ್ಟು ಜನರಿಗೆ ಒಳ್ಳೆಯದು ಮಾಡಿದ್ದೇವೆ? ಇನ್ನೆಷ್ಟು ಜನರ ಜೀವ ತಿಂದಿದ್ದೇವೆ? ನಮ್ಮಿಂದ ಸಮಾಜದ ಜನರಿಗೆ ಯಾವ ರೀತಿಯ ಸಹಾಯ ಆಗಿದೆ? ನಾವು ಪ್ರದರ್ಶಿಸಿದ ಪ್ರಾಮಾಣಿಕತೆ ಹಾಗೂ ವೃತ್ತಿ ಬದ್ಧತೆ ಎಂಥದು? ಎಂಬುದರ ಕುರಿತು ಪ್ರಾಂಜಲ ಮನಸ್ಸಿನಿಂದ ಯೋಚಿಸಬೇಕಿದೆ. ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಅಂದಾಗ ಮಾತ್ರ ಪತ್ರಿಕಾ ದಿನಾಚರಣೆಗೆ ಅರ್ಥ ಬರುತ್ತದೆ ಹೌದಲ್ಲವೇ?

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here