ಚಿಕ್ಕಬಳ್ಳಾಪುರ: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಬಡವರಿಗೆ ಮುಂದಿನ ಎರಡು ವರ್ಷದೊಳಗೆ ಗ್ರಾಮೀಣ ಆಶ್ರಯ ನಿವೇಶನ ಯೋಜನೆಯಡಿ10ರಿಂದ 15 ಸಾವಿರ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ ತಾಲೂಕಿನ ಹಾರೋಬಂಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಸನಹಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ರಾಮೀಣ ಆಶ್ರಯ ನಿವೇಶನ ಯೋಜನೆಯಡಿ ಗ್ರಾಮದ 66 ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರಗಳನ್ನು ವಿತರಿಸಿ ಮಾತನಾಡಿದರು.
ಕ್ಷೇತ್ರದ ನಿವೇಶನ ರಹಿತ, ವಸತಿ ರಹಿತ ಪ್ರತಿಯೊಬ್ಬ ಬಡವರಿಗೂ ಸ್ವಂತ ಸೂರು ಕಲ್ಪಿಸಿಕೊಡಬೇಕೆಂಬುದು ನನ್ನ ಮೊದಲ ಆಧ್ಯತೆ. ಈ ದಿಸೆಯಲ್ಲಿ ಹಲವು ಕಡೆ ಜಿಲ್ಲಾಡಳಿತದ ವತಿಯಿಂದ ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸರ್ಕಾರಿ ಜಮೀನುಗಳನ್ನು ಗುರ್ತಿಸಿ ಮೀಸಲಿಟ್ಟು ಬಡಾವಣೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಅಲ್ಲದೇ ನಿವೇಶನಗಳ ಹಕ್ಕುಪತ್ರ ವಿತರಣೆಗಾಗಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಕಳುಹಿಸಿಕೊಡಲಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ನಿವೇಶನ ರಹಿತರೆಲ್ಲರಿಗೆ ಉಚಿತವಾಗಿ ನಿವೇಶನ ನೀಡುವುದರ ಜತೆಗೆ ಎಲ್ಲರಿಗೂ ಮನೆ ಕಟ್ಟಿಸಿಕೊಡಲಾಗುವುದು ಎಂದರು.
ಪ್ರತಿಯೊಬ್ಬರಿಗೂ ಸ್ವಂತ ಸೂರು ಎಂಬುದು ಬಹಳ ಮುಖ್ಯ. ನಮ್ಮದು ಅಂತ ಒಂದು ಮನೆ ಇದ್ದರೆ ನೆಮ್ಮದಿ ಜೀವನದ ಜತೆಗೆ ಎಲ್ಲಾ ರೀತಿಯಲ್ಲೂ ಮನಸ್ಸು ನಿರಾಳವಾಗಲಿದೆ, ಈ ಉದ್ದೇಶದಿಂದಲೇ ಎಲ್ಲರಿಗೂ ಮನೆ, ನಿವೇಶನ ಕೊಡಲು ಶ್ರಮಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಸಮಿತಿ ಅಧ್ಯಕ್ಷ ಕೆ.ವಿ.ನಾಗರಾಜು, ಜಿಲ್ಲಾ ಪಂಚಾಯಿತಿ ಸಿಇಒ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ತಾಪಂ ಇಒ ಹರ್ಷವರ್ದನ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.