ಸುರಪುರ: ದೇವಾಪುರ ಜೆ ಗ್ರಾಮದಿಂದ ಹುಣಸಗಿ ತಾಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಆರೋಪಿಸಿದ್ದಾರೆ.
ಈ ಕುರಿತು ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದು, ೨೦೧೯-೨೦ ನೇ ಸಾಲಿನಲ್ಲಿ ಟೆಂಡರ್ ಕರೆಯಲಾಗಿದ್ದ ಕಾಮಗಾರಿಯ ಟೆಂಡರ್ ಪ್ರಕ್ರೀಯೆ ಮುಗಿದು ಕಾಮಗಾರಿ ಪ್ರಾರಂಭಿಸಿ ಹದಿನೈದು ದಿನಗಳಾಗಿವೆ. ಆದರೆ ಕಾಮಗಾರಿ ನಿರ್ಮಾಣಕ್ಕೆ ಕಳಪೆ ಗುಣ ಮಟ್ಟದ ಸಾಮಗ್ರಿ ಬಳಸಿ ನಿರ್ಮಿಸಿದ್ದಾರೆ. ಈ ವಿಷಯವನ್ನು ಅಲ್ಲಿಯ ಗ್ರಾಮಸ್ಥರು ನನ್ನ ಗಮನಕ್ಕೆ ತಂದಿರುವುದರಿಂದ ನಾನು ಕೂಡ ಇದೇ ಜುಲೈ ೭ ರಂದು ಖುದ್ದಾಗಿ ರಸ್ತೆಗೆಹಾಳಾಗಿರುವ ಬಗ್ಗೆ ಪರಿಶೀಲನೆ ಕೈಗೊಂಡಿದ್ದು ಸಂಪೂರ್ಣ ಕಳಪೆ ಮಟ್ಟದಿಂದ ನಿರ್ಮಿಸಲಾಗಿದೆ ಎಂದು ಕಂಡು ಬಂದಿರುತ್ತದೆ.
ಈ ಕಾಮಗಾರಿಗೆ ಸರ್ಕಾರವು ಸುಮಾರು ೨.೫೦ ಕೋಟಿ ರೂಪಾಯಿಗಳ ವೆಚ್ಚ ಭರಿಸುತ್ತಿದೆ ಆದರೆ ಈ ರಸ್ತೆ ಕಾಮಗಾರಿಯನ್ನು ಟೆಂಡರ್ ಪಡೆದ ಗುತ್ತಿಗೆದಾರರು ಮತ್ತು ಮೇಲ್ವಿಚಾರಣೆ ಮಾಡಬೇಕಾಗಿದ್ದ ಅಧಿಕಾರಿಗಳು ಶಾಮೀಲಾಗಿ ಕಳಪೆ ಮಟ್ಟದಿಂದ ನಿರ್ಮಿಸಿರುತ್ತಾರೆ.
ಆದ್ದರಿಂದ ಹದಿನೈದು ದಿನಗಳಲ್ಲಿ ನಿರ್ಮಾಣ ಮಾಡಿದ ರಸ್ತೆಯು ಸಂಪೂರ್ಣವಾಗಿ ಹಾಳಾಗಿ ಡಾಂಬರೀಕರಣವು ಕಿತ್ತುಹೋಗಿರುತ್ತದೆ. ಈ ರೀತಿಯಾಗಿ ರಸ್ತೆ ನಿರ್ಮಿಸಿ ಬಿಲ್ ಪಾವತಿಗಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸಿರುತ್ತಾರೆ.
ಆದ್ದರಿಂದ ಈ ರಸ್ತೆಯನ್ನು ತಾವುಗಳು ಖುದ್ದಾಗಿ ಪರಿಶೀಲಿಸುವವರೆಗೆ ಬಿಲ್‌ನ್ನು ತಡೆಹಿಡಿದು, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು ಮತ್ತು ಗುತ್ತಿಗೆ ಪಡೆದ ಗುತ್ತಿಗೆದಾರರ ಪರವಾನಿಗೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.