ಬೆಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಲಿದ್ದೇವೆ ಎಂಬ ಉನ್ನತ ಶಿಕ್ಷಣ ಸಚಿವರ ಹೇಳಿಕೆಯು ಶಿಕ್ಷಣವನ್ನು ಕೇಸರೀಕರಣಗೊಳಿಸಲು ಸಜ್ಜಾಗಿದ್ದೇವೆ ಎಂಬ ಅರ್ಥದಲ್ಲಿದೆ ಎಂಬುದು ಸ್ಪಷ್ಟವಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಧ್ಯಕ್ಷರಾದ ಅಥಾವುಲ್ಲ ಪುಂಜಾಲಕಟ್ಟೆ ಪ್ರತಿಕ್ರಿಯಿಸಿದ್ದಾರೆ.
ಶಿಕ್ಷಣವೆಂಬುದು ದೇಶದ ಸಮವರ್ತಿ ವ್ಯಾಪ್ತಿಗೆ ಬರುವಂತಹದ್ದು, ವಿಕೇಂದ್ರೀಕರಣದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಾದೇಶಿಕತೆಗೆ ಹೆಚ್ಚು ಒತ್ತು ಕೊಡುವ ಬಗ್ಗೆ ಸಂವಿಧಾನವೇ ಪ್ರತಿಪಾದಿಸುತ್ತದೆ. ಆದರೆ ಹೊಸದಾಗಿ ಜಾರಿಗೆ ತರಲು ಹೊರಟಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ಉದ್ದೇಶಪೂರ್ವಕವಾಗಿಯೇ ಪ್ರಾದೇಶಿಕತೆಗೆ ಧಕ್ಕೆ ತರಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆಯನ್ನು ಒಂದು ವರ್ಷಕ್ಕೆ ಸೀಮಿತಗೊಳಿಸಿ ಹಿಂದಿಯನ್ನು ಹಿಂಬದಿಯಿಂದ ಹೇರಿಸಿ ಹಿಂದುತ್ವ ಫ್ಯಾಸಿಸಂನ ಮಾರಕ ಸಿದ್ಧಾಂತದ ಭಾಗವಾಗಿ ಈ ಎಲ್ಲಾ ಪ್ರಯತ್ನಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾಡುತ್ತಿವೆ. ವೈಜ್ಞಾನಿಕ ದೂರದೃಷ್ಟಿ ಇಲ್ಲದೆ ಆಕರ್ಷಕ ಘೋಷಣೆಗಳಿಗೆ ಮಾತ್ರ ಸೀಮಿತವಾಗಿರುವ ಮತ್ತು ದೇಶದ ವೈವಿಧ್ಯತೆಗೆ ಬೆದರಿಕೆಯಾಗಿರುವ ಏಕ ನೀತಿಯನ್ನು ಎತ್ತಿ ಹಿಡಿಯುವ ಈ ಶಿಕ್ಷಣ ನೀತಿಯನ್ನು ಕರ್ನಾಟಕದ ಮಣ್ಣಿನಲ್ಲಿ ಕಾರ್ಯಗತಗೊಳಿಸಲು ಖಂಡಿತವಾಗಿಯೂ ಕ್ಯಾಂಪಸ್ ಫ್ರಂಟ್ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಬಂಡವಾಳಶಾಹಿ ಕಾರ್ಪೊರೇಟ್ ಕುಳಗಳ ಹಿತ ಕಾಪಾಡಲು ತಂದಿರುವ ಈ ಶಿಕ್ಷಣ ನೀತಿಯ ಕರಡನ್ನು ತಿರಸ್ಕರಿಸಿ ಈ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಶಿಕ್ಷಣದಲ್ಲಿ ಸಂವಿಧಾನದ ಮೂಲ ಆಶಯಗಳನ್ನು ಕಾಪಾಡಲಿಕ್ಕೆ ಮುಂದಿನ ದಿನಗಳಲ್ಲಿ ಬೀದಿಗಳಿಂದ ವಿಧಾನ ಸೌಧದ ವರೆಗೂ ನಮ್ಮ ಹೋರಾಟ ತೀವ್ರಗೊಳ್ಳಲಿದೆ ಎಂದು ಅಥಾವುಲ್ಲ ಪುಂಜಾಲಕಟ್ಟೆ ಎಚ್ಚರಿಕೆ ನೀಡಿದ್ದಾರೆ.