ಕಲಬುರಗಿ : ಜಿಲ್ಲೆಯ ಕಾಳಗಿ ಪಟ್ಟಣ ಹಿರೇಮಠದ ಮಠಾಧಿಪತಿಗಳಾಗಿದ್ದ ಷ.ಬ್ರ . ಶಿವಬಸವ ಶಿವಾಚಾರ್ಯರು ಲಿಂಗೈಕ್ಯರಾಗಿರುವುದರಿಂದ ಅವರ ಸ್ಥಾನಕ್ಕೆ ನೂತನ ಉತ್ತರಾಧಿಕಾರಿಯಾಗಿ ನೀಲಕಂಠ ಸ್ವಾಮಿಗಳನ್ನು ನೇಮಕ ಮಾಡಲಾಗಿದೆ . ಅವರು ಉತ್ತರಾಧಿಕಾರಿಯೇ ಹೊರತು ಪೀಠಾಧಿಪತಿಗಳಲ್ಲ ಎಂದು ಶ್ರೀಮಠದ ಹೊಣೆಗಾರಿಕೆ ವಹಿಸಿಕೊಂಡಿರುವ ಹೊನ್ನಕಿರಣಗಿಯ ಪೂಜ್ಯರಾದ ಚಂದ್ರಗುಂಡ ಶಿವಾಚಾರ್ಯರು ಸ್ಪಷ್ಟಪಡಿಸಿದ್ದಾರೆ.
ನಗರದ ಪತ್ರಿಕಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಳಗಿ ಶ್ರೀಮಠವು ಪುತ್ರವರ್ಗದ ಮಠವಾಗಿರುವುದರಿಂದ ಶ್ರೀಮಠದ ವಂಶಜರ ಕುಡಿಯನ್ನೇ ಉತ್ತರಾಧಿಕಾರಿಯಾಗಿ ನೇಮಕ ಮಾಡಿಕೊಂಡು ಬರುತ್ತಿರುವುದು ನಡೆದು ಬಂದ ಪರಂಪರೆಯಾಗಿದೆ, ನೇಮಕಗೊಂಡ ಉತ್ತರಾಧಿಕಾರಿಗಳಿಗೆಲ್ಲ ಪಟ್ಟಾಭಿಷೇಕ ಮಾಡಲಾಗುತ್ತದೆ ಎಂದರ್ಥವಲ್ಲ . ಅವರಿಗೆ ವೈದಿಕ ಸಂಸ್ಕೃತಿ ಹಾಗು ಸಂಸ್ಕಾರ ನೀಡಿ ಯೋಗ್ಯ ಸನ್ಯಾಸಿಯಾಗಿ ತಯಾರು ಮಾಡಿದ ನಂತರ ಓರ್ವ ಶಿವಾಚಾರ್ಯರಿಗೆ ಇರುವ ಎಲ್ಲ ಅರ್ಹತೆಗಳು ಇರುವುದನ್ನು ಖಚಿತಪಡಿಸಿಕೊಂಡಾದ ಮೇಲೆ ಪಟ್ಟಾಭಿಷೇಕ ಮಾಡಲಾಗುತ್ತದೆ ಎಂದು ತಿಳಿಸಿದರು.
ಸದ್ಯ ನೇಮಕ ಮಾಡಿರುವ ಉತ್ತರಾಧಿಕಾರಿ ಐದು ವರ್ಷದ ಶಿಶುವಾಗಿದ್ದು , ಎಳೆತನದಲ್ಲೇ ಸಂಸ್ಕಾರ ನೀಡುವುದು ಸೂಕ್ತ ಹಾಗು ಸುಲಭ ಎಂಬ ಕಾರಣಕ್ಕಾಗಿ ಪಂಚ ಶಿವಾಚಾರ್ಯರ ಸಮ್ಮತಿ ಮೇರೆಗೆ ಉತ್ತರಾಧಿಕಾರಿ ನೇಮಕ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ನೇಮಕಗೊಂಡ ಉತ್ತರಾಧಿಕಾರಿಗಳಿಗೆ ನೀಲಕಂಠ ಶಿವಾಚಾರ್ಯರು ಹಾಗು ಪೀಠಾಧಿಪತಿಗಳು ಎಂದು ಪದ ಪ್ರಯೋಗ ಮಾಡಿರುವದರಿಂದ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ . ಇದರಲ್ಲೇನು ಅಪಚಾರ ನಡೆದಿಲ್ಲ ಎಂದು ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸೋಮನಾಥ ಶಿವಾಚಾರ್ಯರು, ಪ್ರಶಾಂತ ಡೊಂನೂರ್, ಶಿವಶರಣಪ್ಪ ಕಮಲಾಪುರ್, ಶರಣಗೌಡ ಪೊಲೀಸ್ ಪಾಟೀಲ್ ಇದ್ದರು.