ಕಲಬುರಗಿ: ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮತ್ತು ಎ.ಐ.ಯು.ಟಿ.ಯು.ಸಿ ಇವರ ಸಂಯುಕ್ತ ಆಶ್ರಯದಲ್ಲಿ ನೈರ್ಮಲೀಕರಣ ಸುರಕ್ಷಾ ಹಾಗೂ ಆಹಾರ ಧಾನ್ಯ ಸಾಮಾಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮಕ್ಕೆ ಉಧ್ಘಾಟಕರಾಗಿ ಆಗಮಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಲಬುರಗಿ ಕೆ. ಸುಬ್ರಮಣ್ಯ ಉಧ್ಘಾಟಿಸಿ ಮಾತನಾಡುತ್ತಾ, ಕಟ್ಟಡ ಕಾರ್ಮಿಕರಿಗೆ ವಿತರಿಸುತ್ತಿರುವ ಸುರಕ್ಷಾ ಹಾಗೂ ಆಹಾರ ಕಿಟ್ ಸರಕಾರದ ಒಳ್ಳೆ ಕಾರ್ಯಕ್ರಮವಾಗಿದೆ. ಕರೋನಾದ ಈ ಕಾಲಘಟ್ಟದಲ್ಲಿ ಇದು ಕಾರ್ಮಿಕರಿಗೆ ಸಹಾಯದ ಹಸ್ತವಾಗಿದೆ ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುಶಾಂತ ಎಮ್. ಚೌಗಲೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಲಬರುಗಿ ಇವರು ಮಾತನಾಡುತ್ತಾ, ನಮ್ಮ ದೇಶದಲ್ಲಿ ದುಡಿಯುವ ಕಾರ್ಮಿಕರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚು ಇದೆ. ಬಿಸಿಲು, ಮಳೆ, ಚಳಿ ಎನ್ನದೆ ಕಟ್ಟಡ ಕಾರ್ಮಿಕರು ಕೆಲಸ ಮಾಡುವುದರಿಂದ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ, ಸರಕಾರದ ಹಾಗೂ ಕಾರ್ಮಿಕ ಇಲಾಖೆಯ ಈ ಕೆಲಸ ಬಹಳ ಶ್ಲಾಘನೀಯ ಎಂದು ನುಡಿದರು.
ಪ್ರಾಸ್ತಾವಿಕವಾಗಿ ಕಾರ್ಮಿಕ ಇಲಾಖೆಯ ಉಪ ಕಾರ್ಮಿಕ ಆಯುಕ್ತರಾದ ನಾಗೇಶ ಡಿ.ಜಿ. ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಸಹಾಯಕ ಕಾರ್ಮಿಕ ಆಯುಕ್ತರಾದ ಶ್ರೀಮತಿ ಆರತಿ ಪೂಜಾರಿ ವಹಿಸಿಕೊಂಡಿದ್ದರು. ವೇದಿಕೆ ಮೇಲೆ ಎ.ಐ.ಯು.ಟಿ.ಯು.ಟಿ ಯ ಜಿಲ್ಲಾ ಅಧ್ಯಕ್ಷರಾದ ವಿ.ಜಿ.ದೇಸಾಯಿ, ಕಾರ್ಯದರ್ಶಿಗಳಾದ ಎಸ್.ಎಂ. ಶರ್ಮಾ. ಹಾಗೂ ಕಲಬುರಗಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಶ್ರೀ ಶ್ರೀಹರಿ ದೇಶಪಾಂಡೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷರಾದ ರಾಘವೇಂದ್ರ ಎಂ. ಜಿ. ರವರು ನಿರೂಪಿಸಿದರು. ಸಾಂಕೇತಿಕವಾಗಿ ೩೦೦ ಕಟ್ಟಡ ಕಾರ್ಮಿಕರಿಗೆ ಕಿಟ್‌ನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಕಾರ್ಮಿಕ ನಿರೀಕ್ಷಕರು ರವಿಂದ್ರಕುಮಾರ, ಬಾಗಣ್ಣ ಬುಕ್ಕ, ಶರಣು ಹೇರೂರ, ರಾಧಾ ಸೇರಿದಂತೆ ನೂರಾರು ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು.