ಭಾರತದ ಒಲಿಂಪಿಕ್ಸ್ ಬೆಳ್ಳಿ‌ ಹಿಂದಿನ ಅಕ್ಕಿ: ಮಾಣಿಕ್ಯವನ್ನು‌ ಹಡೆದ ಮಣಿಪುರದ ಕಥೆ

0
26

ಇದು ಮೀರಾಬಾಯಿ ಎನ್ನುವ ಮಾಣಿಕ್ಯವನ್ನು‌ ಹಡೆದ ಮಣಿಪುರದ ಕಥೆ

‘ಕೌನ್ಸಿ‌ ಚಕ್ಕಿ ಕಾ ಆಟಾ ಕಿಲಾತೆ ಹೋ’… ಇದು‌ ಜುಲೈ 13 ರಂದು ಪ್ರಧಾನಿ ಮೋದಿ, ಹರಿಯಾಣದ ಕುಸ್ತಿ ಪಟು ವಿನೇಶ್ ಪೋಗಟ್ ಅವರ ತಂದೆಗೆ ಕೇಳಿದ್ದ ತಮಾಷೆಯ ಪ್ರಶ್ನೆ. ಇದರ ಪದಶಃ ಅರ್ಥ ಯಾವ ಗಿರಣಿಯ ಹಿಟ್ಟು ತಿನ್ನಿಸುತ್ತೀರಿ ಅನ್ನೋದು.. ಇದರ ಸರಳ‌ ಅರ್ಥ ಯಾವ ಗೋಧಿ ಹಿಟ್ಟು ತಿನ್ನಿಸುತ್ತೀರಿ ಅನ್ನೋದು.

Contact Your\'s Advertisement; 9902492681

ಒಲಿಂಪಿಕ್ಸ್ ಗೆ ಹೊರಟು ನಿಂತಿದ್ದ ಭಾರತದ ತಂಡದ ಜೊತೆ ಮಾತನಾಡುವಾಗ ಮೋದಿ ಕೇಳಿದ ಈ ಪ್ರಶ್ನೆ ಗೋಧಿ ತಿನ್ನುವವರು ಮಾತ್ರ ಬಲಿಷ್ಠರು ಎನ್ನುವ ಮಿಥ್ ನ ಮುಂದುವರಿದ ಭಾಗದಂತಿತ್ತು. ಮೋದಿಯ ಈ ಪ್ರಶ್ನೆ ಗೆ ಜುಲೈ 24 ರಂದು ಮಣಿಪುರದ ಸೈಖೋಮ್ ಮೀರಾಬಾಯಿ ಚಾನು ಅಕ್ಕಿಯ ಉತ್ತರ ನೀಡಿದ್ದಾರೆ. ಆಟಾ ಬದಲು ಅಕ್ಕಿ ತಿಂದು ಬೆಳೆದ ಗುಡ್ಡಗಾಡಿನ ಕುವರಿ ಮೀರಾಬಾಯಿ ಟೋಕಿಯೋದಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡಿದ್ದೇ ಆ ಉತ್ತರ.

2 ದಶಕಗಳ ಕಾಲ‌ ಒಲಿಂಪಿಕ್ಸ್ ನ ಭಾರ ಎತ್ತುವ ಸ್ಪರ್ಧೆಯಲ್ಲಿ ಪದಕವಿಲ್ಲದೆ ಬಾಯಾರಿ ನಿಂತಿದ್ದ
ಭಾರತಕ್ಕೆ ಮೀರಿಬಾಯಿ ಬೆಳ್ಳಿಯ ಬೆಲ್ಲ ತಿನ್ನಿಸಿ, ಪದಕದ ದಾಹ ನೀಗಿಸಿದ್ದಾರೆ. 49 ಕೆಜಿ ತೂಕದ ಯುವತಿ ಒಟ್ಟು 202 ಕೆಜಿ ತೂಕ ಎತ್ತುವ ಸಾಹಸ ಸಣ್ಣದಲ್ಲ. ಅದಕ್ಕೆ ಒಲಿಂಪಿಕ್ಸ್ ಪದಕವೇ ಪುರಾವೆ. ಹಾಗಾದರೆ, ಈ ಸಾಧಕಿಯ‌ ಹಿಂದಿನ ಶಕ್ತಿ ಏನ್ ಗೊತ್ತಾ? ಮಣಿಪುರದ ಕ್ರೀಡಾ ಪ್ರೇಮ ಮತ್ತು ಅಕ್ಕಿಯ ಜಿಗುಟು.

ಮಣಿಪುರ ಎನ್ನುವ ಪುಟ್ಟ ಗುಡ್ಡಗಾಡು ರಾಜ್ಯ‌ ತನ್ನ ಮಡಿಲಲ್ಲಿ ಪುಟಿಚೆಂಡಿನಂತಹ ಕ್ರೀಡಾಪಟುಗಳನ್ನು ಅರಳಿಸುತ್ತಿದೆ. ಮಣಿಪುರದಲ್ಲಿ‌‌ 90 ರ ದಶಕದಲ್ಲಿ‌ ಶುರುವಾದ ಕ್ರೀಡಾ ಕ್ಲಬ್ ಪರಂಪರೆ ಮೀರಾಬಾಯಿಯಂತಹ ವರ್ಲ್ಡ್ ಕ್ಲಾಸ್ ವೇಟ್ ಲಿಫ್ಟರ್ ಗಳನ್ನು ಸೃಷ್ಟಿಸಿದೆ. ಈ ಕ್ಲಬ್ ಗಳು ಮಣಿಪುರಿಗಳ‌ ಕ್ರೀಡಾ ಪ್ರೇಮದ ಫಲ.

ಮಣಿಪುರದಲ್ಲಿರುವ ಕ್ರೀಡಾ ಕ್ಲಬ್ ಗಳು ಬಾಲ್ಯದಲ್ಲೇ ಮಕ್ಕಳ ಮುಂದೆ ಎರಡು ಆಯ್ಕೆಗಳನ್ನು ಸ್ಪಷ್ಟವಾಗಿ ಇಡುತ್ತಿವೆ‌. ನೀನು ಕ್ಲಾಸ್ ರೂಮಿನಲ್ಲಿ ಕೂತು ಓದುತ್ತಿಯೋ? ಅಂಗಳಕ್ಕೆ ಬಂದು ಆಡುತ್ತಿಯೋ ಅನ್ನೋ ಆಯ್ಕೆಗಳವು.. ಈ ಕ್ಲಬ್ ಗಳಲ್ಲಿ‌ ಆಡುವ ಮಕ್ಕಳು ಹದಿ ವಯಸ್ಸಿಗೆ ಬರುತ್ತಲೇ ವೃತ್ತಿಪರ ಕ್ರೀಡಾಪಟುಗಳಿಗೆ ಬೇಕಾದ ಶಿಸ್ತು ಮೈಗೂಡಿಸಿಕೊಂಡಿರುತ್ತಾರೆ. ಇಂತಹ ಮಣಿಪುರದ ಮೀರಾಬಾಯಿ ಅಂಗಳದಲ್ಲಿ‌ ಆಡುವ ಆಯ್ಕೆಯ ಹಿಂದೆ ಹೋದ‌ ಹುಡುಗಿ.

12 ರ ಎಳೆ ವಯಸ್ಸಿನಲ್ಲೇ ಮೀರಾಬಾಯಿ ತೋಳುಗಳಲ್ಲಿ ಭಾರ ಎತ್ತುವ ಶಕ್ತಿ‌ Instinct ಅಂತಾರಲ್ಲ‌ ಹಾಗಿತ್ತು.‌ ಬೆಟ್ಟಗುಡ್ಡಗಳಲ್ಲಿ ತನ್ನ ಅಣ್ಣನಿಗಿಂತ ಹೆಚ್ಚು ಭಾರದ ಕಟ್ಟಿಗೆ ಹೊತ್ತು ಸಾಗುತ್ತಿದ್ದ ಮೀರಾಬಾಯಿ ತಾಕತ್ತು ಜಗತ್ತಿಗೆ ಈಗ ಗೊತ್ತಾಗಿದೆಯಷ್ಟೇ.. ಬಿಲ್ಲುಗಾರಿಕೆ ಕಲಿಯಲು ಹೋಗಿದ್ದ ಮೀರಾ, ಭಾರ ಎತ್ತುವ ಮೋಹಕ್ಕೆ ಬಿದ್ದಿದ್ದು‌ ಸಹ ಆಕಸ್ಮಿಕವೇ.

2004 ರ ಅಥೆನ್ಸ್ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಣಿಪುರದವರೇ ಆದ ಕುಂಜಾರಾಣಿ ದೇವಿಯನ್ನು ನೋಡಿದ ಮೇಲೆ ಅಂದಿಗೆ 10 ವರ್ಷದ ಬಾಲೆ ಮೀರಾಗೆ ವೇಟ್ ಲಿಫ್ಟರ್ ಆಗುವ ಹುಚ್ಚು ಹಿಡಿದಿದ್ದು ಭಾರತದ ಪಾಲಿನ ಅದೃಷ್ಟ. ದೊಡ್ಡ ಮರದ ದಿಮ್ಮಿಗಳನ್ನು ಸುಲಭವಾಗಿ ಎತ್ತುತ್ತಿದ್ದ ಪುಟ್ಟ ಮೀರಾಳನ್ನು ಕಂಡು ಮಾಜಿ ಅಂತಾರಾಷ್ಟ್ರೀಯ ವೇಟ್ ಲಿಫ್ಟರ್ ಅನಿತಾ ಚಾನು, She has killer instinct ಎಂದಿದ್ದರಂತೆ.

ಸದ್ಯ ಇದೇ ಹುಡುಗಿ ಭಾರತಕ್ಕೆ ಬೆಳ್ಳಿ ಗೆದ್ದು ಕೊಟ್ಟಿದ್ದಾಳೆ.‌ 2000 ರಲ್ಲಿ ಸಿಡ್ನಿಯಲ್ಲಿ ಕರ್ಣಂ ಮಲ್ಲೇಶ್ವರಿ ಕಂಚು ಗೆದ್ದಿದ್ದು ಬಿಟ್ಟರೆ ಭಾರತಕ್ಕೆ ಒಲಿಂಪಿಕ್ಸ್ ವೇಟ್ ಲಿಫ್ಟಿಂಗ್ ಪದಕ ಮರೀಚಿಕೆಯೇ ಆಗಿತ್ತು. ಮೀರಾ ಆ ಮರೀಚಿಕೆಯನ್ನೇ ಹಿಡಿದು ಭಾರತಕ್ಕೆ ಬೆಳ್ಳಿಯ ಹಾರ ಹಾಕಿದ್ದಾರೆ. ಅಕ್ಕಿಯ ಜಿಗುಟನ್ನು ತೋರಿಸಿದ್ದಾರೆ.

ಮೀರಾ ಬಾಯಿ‌ ಐದಡಿಯೂ ಇಲ್ಲದ ಹುಡುಗಿ. ಮರಡೋನಾ, ಮೆಸ್ಸಿಯ ಮ್ಯಾಜಿಕ್ ನೋಡಿದ್ಮೇಲೂ ನಮ್ಮಲ್ಲಿ‌ ಎಷ್ಟೋ‌ ದೈಹಿಕ ಶಿಕ್ಷಕರು ಕ್ರೀಡೆಗೆ ಮಕ್ಕಳನ್ನು‌ ಆರಿಸುವಾಗ ನೀಳ ಕಾಯದವರನ್ನು ಮಾತ್ರ ಮುಂದೆ ಕರೆಯುತ್ತಾರೆ. ಅಂತಹ ಮುಠ್ಠಾಳರ ತಲೆಗೆ 4.11 ಅಡಿ ಎತ್ತರದ ಮೀರಾ, ತನ್ನ ಬೆಳ್ಳಿ‌ ಪದಕದಿಂದಲೇ ಮೊಟಕಿದ್ದಾಳೆ.

ಕಡಿಮೆ‌ ಎತ್ತರದ ಕ್ರೀಡಾಪಟುಗಳಿಗೆ Low Center of Gravity ಅನ್ನೋದು ಯಾವಾಗಲೂ ಸಹಾಯಕ. ಮೀರಾ ಐದು ಸಫಲ ಯತ್ನಗಳಲ್ಲಿ ತನ್ನ ದೇಹದ ತೂಕಕ್ಕಿಂತ ನಾಲ್ಕು ಪಟ್ಟು ಭಾರ ಎತ್ತಲು ಕಡಿಮೆ‌ ಗುರುತ್ವಾಕರ್ಷಣೆಯ ಕೊಡುಗೆಯೂ ಇದೆ. ಮಣಿಪುರದ ಕ್ರೀಡಾಪಟುಗಳು ವೇಟ್ ಲಿಫ್ಟಿಂಗ್, ಬಾಕ್ಸಿಂಗ್ ಮತ್ತು ಫುಟ್ಬಾಲ್ ನಲ್ಲಿ‌ ಮಿಂಚುತ್ತಿರೋದಕ್ಕೆ ಅವರ ಕಡಿಮೆ ಎತ್ತರವೂ ಒಂದು ಕಾರಣ.. ಮತ್ತೊಂದು ಕಾರಣ ಅವರು ಸೇವಿಸುವ ಅಕ್ಕಿ..

ಮಣಿಪುರದವರ ಆಹಾರದ ಪ್ರಮುಖ ಭಾಗ ಅವರು ಸೇವಿಸುವ ಅಕ್ಕಿ.. ಅವರ ಶಕ್ತಿಯ ಮೂಲವೂ ಹೌದು.. ಮಣಿಪುರದ ಬಹುತೇಕರು ಹೆಚ್ಚಾಗಿ ಅಕ್ಕಿ ಸೇವಿಸುತ್ತಾರೆ. ಅಕ್ಕಿ ಕ್ರೀಡಾಪಟುಗಳ ನಿತ್ಯದ ಕಸರತ್ತಿಗೆ ಬೇಕಾದ ಕಾರ್ಬೋಹೈಡ್ರೇಟ್ಸ್ ನ್ನು ಹೇರಳವಾಗಿ ನೀಡುವ ಹಗುರ ಆಹಾರ. ಹಗುರ ಯಾಕಂದ್ರೆ, ಅಕ್ಕಿ ಸುಲಭವಾಗಿ ಜೀರ್ಣವಾಗುತ್ತೆ. ತೀವ್ರ ತರದ ತಾಲೀಮು ನಡೆಸುವ ವೃತ್ತಿಪರ ಕ್ರೀಡಾಪಟುಗಳ ದೇಹಕ್ಕೆ ದಣಿವಿನಿಂದ ಬೇಗ ಚೇತರಿಸಿಕೊಳ್ಳುವ ಶಕ್ತಿ ನೀಡುತ್ತೆ.

ಇದಕ್ಕೆ ಮಣಿಪುರಿಗಳ ಶಕ್ತಿ ಅವರ ಅಕ್ಕಿಯ ಜಿಗುಟಿನಲ್ಲಿದೆ ಎಂದಿದ್ದು. ಅಕ್ಕಿಯ ಈ ಶಕ್ತಿಯನ್ನು ನಾವು ಚೀನಾ ಮತ್ತು ದಕ್ಷಿಣ ಕೊರಿಯಾದ ಕಡಿಮೆ ತೂಕದ ವಿಭಾಗಗಳಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳಲ್ಲೂ ಕಾಣಬಹುದು. ಕಡಿಮೆ ತೂಕದ ವಿಭಾಗಗಳಲ್ಲಿ ಈ ದೇಶಗಳ ಗಿಡ್ಡಾಳುಗಳನ್ನು ಎದುರಿಸುವವರುಂಟೆ? ಮೀರಾಗಿಂತ 8 ಕೆಜಿ ತೂಕ‌ ಜಾಸ್ತಿ ಎತ್ತಿ ಬಂಗಾರ ಗೆದ್ದ ಚೀನಾದ ಹುಡುಗಿ ಜೌ ಝಿಹುಯಿ‌ ಸಹ ಅಕ್ಕಿ‌ ತಿಂದವಳೇ!

ಮಣಿಪುರದ ಕ್ರೀಡಾ ಕ್ಲಬ್ ಗಳು, ಅಕ್ಕಿ ಊಟ, ಕಡಿಮೆ ಎತ್ತರ, ಮಣಿಪುರಿಗಳ‌ ಕ್ರೀಡಾ ಪ್ರೇಮ, ಎಲ್ಲವೂ ಒಟ್ಟಾಗಿ ಭಾರತಕ್ಕೆ ಮೀರಾಬಾಯಿಯನ್ನು ನೀಡಿವೆ. ಕಳೆದ ಎರಡು ದಶಕಗಳಲ್ಲಿ ಮೀರಾ ಅವರಂತ ಮಣಿಪುರದ ಸಾಕಷ್ಟು ವೇಟ್ ಲಿಫ್ಟರ್ ಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಈಶಾನ್ಯದವರು ಅಂದ್ರೆ ಚೀನಿಯರಂತೆಯೇ ಕಾಣುವ ಹಲವರಿಗೆ ಮಣಿಪುರಿಗಳು ತಾವು ನಿಮಗಿಂತ ಹೆಚ್ಚು ನಾಡೊಲವಿಗರು ಅಂತಾ ಪದಕಗಳ‌ ಮೂಲಕವೇ‌ ಹೇಳುತ್ತಿದ್ದಾರೆ. They are as much indian as us.

2016 ರ ರಿಯೋ‌ ಒಲಿಂಪಿಕ್ಸ್ ನಲ್ಲಿ ಒಂದು ಯತ್ನದಲ್ಲೂ ಭಾರ ಎತ್ತಲಾಗದೆ ‘Did Not Finish’ ಎನ್ನುವ ಬೋರ್ಡ್ ಮುಂದೆ ನಿಂತು ಕಣ್ಣೀರು ಹಾಕಿದ್ದ ಮೀರಾ, ಗಾಯದಿಂದಾಗಿ ಅಮೆರಿಕಕ್ಕೆ‌ ಹೋಗಿ ತಿಂಗಳುಗಟ್ಟಲೇ ಚಿಕಿತ್ಸೆ ಪಡೆದ ಮೀರಾ, ಟೋಕಿಯೋಗೆ ಹೋದ ಮೇಲೂ ಹೊಟ್ಟೆ ನೋವಿನಿಂದ ಬಳಲಿದ ಮೀರಾ, ಒಲಿಂಪಿಕ್ಸ್ ಬೆಳ್ಳಿ‌ ಗೆದ್ದಿದ್ದು ಅವಳ ಗಟ್ಟಿತನಕ್ಕೆ ಸಾಕ್ಷಿ.. Yes, she has killer instinct.

ಕೃಪೆ ಫೇಸ್ ಬುಕ್: Rajashekhar Journalist

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here