ಆಳಂದ: ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿರುವ ರೈತರಿಗೆ ಬಾಕಿ ಉಳಿದ ಹಣವನ್ನು ೧೫ ದಿನಗಳಲ್ಲಿ ಅವರ ಖಾತೆಗೆ ಜಮಾ ಮಾಡಲು ಕಂಪನಿ ಆಡಳಿತ ಮಂಡಳಿ ವಾಗ್ದಾನ ನೀಡಿದೆ ಆದ್ದರಿಂದ ರೈತರು ಸಹಕರಿಸಬೇಕು ಎಂದು ಶಾಸಕ ಸುಭಾಷ್ ಆರ್ ಗುತ್ತೇದಾರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಪಿಆರ್ ಸುಗರ‍್ಸ್, ರೇಣುಕಾ ಸುಗರ‍್ಸ್‌ನವರು ಪ್ರತಿ ಟನ್ ಕಬ್ಬಿಗೆ ೨೩೦೦ ಪಾವತಿಸಿದ್ದಾರೆ ಆದರೆ ಎನ್‌ಎಸ್‌ಎಲ್ ಸುಗರ‍್ಸ್‌ನವರು ಕೇವಲ ೨೧೦೦ ಪಾವತಿಸಿದ್ದಾರೆ ಈ ಕುರಿತು ರೈತರಿಂದ ಹಲವಾರು ದೂರುಗಳು ಬಂದಿರುವುದರಿಂದ ಜಿಲ್ಲಾಧಿಕಾರಿ ಮತ್ತು ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿಯವರ ಗಮನಕ್ಕೆ ತರಲಾಗಿತ್ತು. ಈಗ ತಾವು ಎನ್‌ಎಸ್‌ಎಲ್ ಸುಗರ‍್ಸ್ ಆಡಳಿತ ಮಂಡಳಿ ಮತ್ತು ಕಂಪನಿಯ ಉಪಾಧ್ಯಕ್ಷರ ಜೊತೆ ಚರ್ಚಿಸಿದಾಗ ಮುಂದಿನ ೧೫ ದಿನಗಳಲ್ಲಿ ಬಾಕಿ ಉಳಿದ ರೈತರ ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗುವುದು ಎಂದು ವಾಗ್ದಾನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಮುಂದಿನ ಹಂಗಾಮಿನ ಕಬ್ಬು ನುರಿಸುವ ಪ್ರಕ್ರಿಯೆ ಆರಂಭಕ್ಕಿಂತ ಪೂರ್ವದಲ್ಲಿ ರೈತರ ಸಭೆ ಕರೆದು ಸಭೆಯಲ್ಲಿಯೇ ದರ ನಿಗದಿ ಮಾಡುವಂತೆ ತಾವು ಮಾಡಿದ ಮನವಿಗೆ ಆಡಳಿತ ಮಂಡಳಿ ಒಪ್ಪಗೆ ಸೂಚಿಸಿದೆ ಆದ್ದರಿಂದ ರೈತರು ಸಹಕರಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.