ಸುರಪುರ: ರಾಜ್ಯದಲ್ಲಿರುವ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಗರದ ತಹಸೀಲ್ ಕಚೇರಿ ಮುಂದೆ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಮೂಲಕ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ಬಿಸಿಯೂಟ ತಯಾರಕರಿಗೆ ೨೦೨೧ರ ಜೂನ್ ಮತ್ತು ಜುಲೈ ತಿಂಗಳ ವೇತನ ಬಿಡುಗಡೆಗೊಳಿಸಬೇಕು.ಈಗಾಗಲೇ ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶದಂತೆ ಕರ್ನಾಟಕದಲ್ಲಿಯೂ ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಜಾರಿಯಾಗಬೇಕು,ಅಸಂಘಟಿತ ಕಾರ್ಮಿಕರಿಗೆ ನೀಡಿದಂತೆ ಬಿಸಿಯೂಟ ತಯಾರಕರಿಗೂ ೫ ಸಾವಿರ ರೂಪಾಯಿಗಳ ಲಾಕ್‌ಡೌನ್ ಪರಿಹಾರ ನೀಡಬೇಕು.
೬೦ ವರ್ಷ ಮೇಲ್ಪಟ್ಟ ಬಿಸಿಯೂಟ ತಯಾರಕರಿಗೆ ಕೆಲಸದಿಂದ ತೆಗೆಯದೆ ಮುಂದುವರೆಸಬೇಕು,ಪ್ರತಿ ಶಾಲೆಯಲ್ಲಿ ಇಬ್ಬರು ಅಡುಗೆ ತಯಾರಕರು ಇರುವಂತೆ ನಿಯಮ ರೂಪಿಸಬೇಕು.ಬಿಸಿಯೂಟ ತಯಾರಕರ ಮೇಲ್ವಿಚಾರಣೆ ಎಸ್ಡಿಎಮ್‌ಸಿಗೆ ವಹಿಸದೆ ಶಿಕ್ಷಣ ಇಲಾಖೆಗೆ ವಹಿಸಬೇಕು ಎನ್ನುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಇಡೇರಿಸಬೇಕೆಂದು ಆಗ್ರಹಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಬಿಸಿಯೂಟ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಕಲ್ಪನಾ ಗುರಸುಣಗಿ,ಕಾರ್ಯದರ್ಶಿ ಶ್ರೀದೇವಿ ಕೂಡಲಗಿ,ಖಜಾಂಚಿ ಬಸಮ್ಮ ತಡಬಿಡಿ,ಎಐಟಿಯುಸಿ ಜಿಲ್ಲಾಧ್ಯಕ್ಷ ದೇವಿಂದ್ರಪ್ಪ ಪತ್ತಾರ,ಖಜಾಂಚಿ ಶಿವಾನಂದ ಸ್ವಾಮಿ,ರೈತ ಹೋರಾಟಗಾರ ಹಣಮಂತ್ರಾಯ ಮಡಿವಾಳ ಮುಖಂಡರಾದ ಗೋಪಮ್ಮ,ಯಮುನಾ,ಶರಣಮ್ಮ,ಗಂಗಮ್ಮ,ಭೀಮಬಾಯಿ,ಲಕ್ಷ್ಮೀ,ಶೋಭಾ,ಗೀತಾ,ಯಲ್ಲಮ್ಮ ಸೇರಿದಂತೆ ನೂರಕ್ಕೂ ಹೆಚ್ಚು ಜನ ಬಿಸಿಯೂಟ ತಯಾರಕರು ಭಾಗವಹಿಸಿದ್ದರು.