ಸುರಪುರ: ಕಳೆದ ಕೆಲ ದಿನಗಳ ಹಿಂದೆ ಕೃಷ್ಣಾ ನದಿ ಪ್ರವಾಹದಿಂದ ಹಾನಿಗೊಳಗಾದ ತಾಲೂಕಿನ ದೇವಾಪುರ ತಿಂಥಣಿ ಗ್ರಾಮಗಳ ನದಿ ಪಾತ್ರದ ಜಮೀನುಗಳಲ್ಲಿನ ಬೆಳೆ ಹಾನಿಗೊಳಗಾದ ಪ್ರದೇಶಗಳಿಗೆ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ನಾಗೇಶ್ ಭಾನುವಾರ ಭೇಟಿ ನೀಡಿ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಸಚಿವರ ಜೊತೆಗಿದ್ದ ಶಾಸಕ ನರಸಿಂಹ ನಾಯಕ (ರಾಜುಗೌಡ) ಅವರು ಹಾನಿಯ ಕುರಿತು ವಿವರಣೆ ನೀಡಿ,ಸುರಪುರ ಮತ್ತು ಹುಣಸಗಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿಯ ಕುರಿತು ಸಚಿವರಿಗೆ ತಿಳಿಸಿದರು ಜೊತೆಗೆ ರೈತರಿಗೆ ಪರಿಹಾರ ವಿತರಣೆಗಾಗಿ ನಡೆದಿರುವ ಸರ್ವೇ ಕಾರ್ಯ ಮತ್ತು ಬೆಳೆ ಹಾನಿಗೊಳಗಾದ ಜಮೀನುಗಳ ವರದಿಯನ್ನು ಆಯಾ ಗ್ರಾಮ ಪಂಚಾಯತಿಗಳಲ್ಲಿ ಅಂಟಿಸುವ ಮೂಲಕ ರೈತರಿಗೆ ಮಾಹಿತಿ ನೀಡಲಾಗುತ್ತಿದೆ,ಇದರಿಂದ ಯಾರಾದರೂ ರೈತರ ಹೆಸರು ತಪ್ಪಿ ಹೋಗಿದ್ದರೆ ಅಂತಹ ರೈತರು ತಮ್ಮ ಜಮೀನು ಹಾನಿಯಾಗಿರುವ ಕುರಿತು ತಹಸೀಲ್ದಾರರಿಗೆ ಮಾಹಿತಿ ನೀಡಿ ಹೆಸರು ಸೇರಿಸಲು ಅವಕಾಶ ನೀಡಲಾಗಿದೆ ಎಂದರು.ಇದೆಲ್ಲದಕ್ಕೂ ಜಿಲ್ಲಾಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳು ಕೈಗೊಂಡಿರುವ ಕ್ರಮದ ಕುರಿತು ಸಚಿವರಿಗೆ ಮನವರಿಕೆ ಮಾಡಿದರು.ಇದೆಲ್ಲ ವಿವರಣೆ ಪಡೆದ ಸಚಿವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ನಂತರ ಸಚಿವರು ಮಾತನಾಡಿ,ಹಿಂದಿನಂತೆ ಈಬಾರಿ ರೈತರಿಗೆ ಪರಿಹಾರದ ವಿತರಣೆಯಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ಕ್ರಮ ಕೈಗೊಂಡು ಎಲ್ಲಾ ರೈತರಿಗೆ ಪರಿಹಾರವನ್ನು ಒದಗಿಸುವುದಾಗಿ ತಿಳಿಸಿದರು.ಅಲ್ಲದೆ ಪ್ರವಾಹದಿಂದ ಆಗಿರುವ ಹಾನಿಯ ಕುರಿತು ಮಾಡಬೇಕಾದ ಕಾಮಗಾರಿಗಳ ನಿರ್ಮಾಣಕ್ಕೂ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ:ರಾಗಪ್ರಿಯ ಆರ್,ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಶಿಲ್ಪಾ ಶರ್ಮಾ,ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ,ಎಸ್ಪಿ ಡಾ:ಸಿ.ಬಿ.ವೇದಮೂರ್ತಿ,ಸಹಾಯಕ ಆಯುಕ್ತ ಪ್ರಶಾಂತ ಅನಗಂಡಿ,ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಅನೇಕ ಜನ ಮುಖಂಡರಿದ್ದರು.