ಆಳಂದ: 75ನೇ ಸ್ವಾತಂತ್ರ್ಯೋತ್ಸವ ಆಚರಣೆಯ ದಿನದ ರವಿವಾರ ಗಡಿನಾಡಿನ ಹೋಬಳಿ ಕೇಂದ್ರ ಖಜೂರಿಯ ಹೊರವಲಯದಲ್ಲಿ ಕಂದಾಯ ಇಲಾಖೆಯ ಸ್ವಾಧೀನದ ನಾಡಕಚೇರಿಯ ನೂತನ ಕಟ್ಟಡವನ್ನು ಶಾಸಕ ಸುಭಾಷ ಗುತ್ತೇದಾರ ಅವರು ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು.
ಇದೇ ವೇಳೆ ಸ್ವಾತಂತ್ರ್ಯ ಸೇನಾನಿ ರುದ್ರವಾಡಿ ಗ್ರಾಮದ ಭೀಮರಾವ್ ಕೊಟ್ಟರಗಿ ಅವರಿಗೆ ಸನ್ಮಾನಿಸಿದ ಬಳಿಕ ಅವರು ಮಾತನಾಡಿದರು.
ನಾಡಕಚೇರಿಯ ಆರಂಭದಿಂದ ಒಂದೇ ಸೋರಿನಡಿ ಸಾರ್ವಜನಿಕರಿಗೆ ಸೇವೆ ಪಡೆಯಲು ಅನುಕೂಲವಾಗಲಿದೆ. ಮಳೆ ಬಾರದೆ ಉದ್ದು, ಹೆಸರು, ಸೋಯಾಭಿನ್ ಬೆಳೆ ಹಾನಿಯಾಗುತ್ತಿದ್ದು, ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಹಾನಿಯ ಕುರಿತು ಸರ್ವೆ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಖಜೂರಿ ಮಠದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಗ್ರೇಡ್-2 ತಹಸೀಲ್ದಾರ ಬಸವರಾಜ ರಕ್ಕಸಗಿ ಅವರು ಪ್ರಾಸ್ತಾವಿಕ ಮಾತನಾಡಿದರು.
ಶಿರಸ್ತೆದಾರ ರಾಕೇಶ ಶೀಲವಂತ, ಖಜೂರಿ ಗ್ರಾಪಂ ಅಧ್ಯಕ್ಷ ಮಂಜುನಾಥ ಬಂಗರಗಿ, ಪುರಸಭೆ ಉಪಾಧ್ಯಕ್ಷ ಈರಣ್ಣಾ ಹತ್ತರಕಿ, ತಾಪಂ ಮಾಜಿ ಉಪಾಧ್ಯಕ್ಷ ಗುರುನಾಥ ಪಾಟೀಲ, ವೀರಭದ್ರ ಖೂನೆ, ರುದ್ರವಾಡಿ ಗ್ರಾಪಂ ಅಧ್ಯಕ್ಷ ಪ್ರಕಾಶ ಭೂಸಣಗಿ, ಶ್ರೀಧರ ಕೊಟ್ಟರಕಿ, ಶರಣಪ್ಪ ಹೊಸಮನಿ, ಶಿವಪ್ಪ ಘಂಟೆ, ಮಲ್ಲಿಕಾರ್ಜುನ ಕಂದಗುಳೆ, ಕಂದಾಯ ನಿರೀಕ್ಷಕ ಅಪ್ಪಾವೋದ್ದೀನ್, ಶರಣಬಸಪ್ಪ ಹಕ್ಕಿ, ವಿಎ ಮಹೇಶ ಹತ್ತಿ, ಸನಿ ಜಾನ್ಸನ್, ಶಾಂತು ಪೂಜಾರಿ ಉಪಸ್ಥಿತರಿದ್ದರು. ವಿ.ಎ ದತ್ತಾತ್ರೆಯ ರಾಠೋಡ ಸ್ವಾಗತಿಸಿದರು. ಗಂಗಾಧರ ಕುಂಬಾರ ನಿರೂಪಿಸಿದರು. ವಿಎ ಸಿದ್ಧಣ್ಣ ವಂದಿಸಿದರು.
ಕಾರ್ಯಕ್ರಮದಲ್ಲಿ ಖಜೂರಿಯ ಸುತ್ತಮುತ್ತಲಿನ ಗ್ರಾಮಗಳ ರೈತರು, ಶಾಸಕರ ಅಭಿಮಾನಿಗಳು ಭಾಗವಹಿಸಿದ್ದರು.