ಸುರಪುರ: ಹೊರರಾಜ್ಯದಿಂದ ಬಂದು ರಂಗಂಪೇಟೆಯಲ್ಲಿ ಕ್ಷೌರಿಕ ಅಂಗಡಿ ತೆರಯಲು ಅವಕಾಶ ನೀಡಬಾರದೆಂದು ಆಗ್ರಹಿಸಿ ಸವಿತಾ ಸಮಾಜದಿಂದ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಧರಣಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ನೂರಾರು ಕಾಲದಿಂದಲೂ ತಾಲೂಕಿನಲ್ಲಿನ ಸವಿತಾ ಸಮಾಜದಿಂದ ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡು ಬರುತ್ತಿದ್ದೇವೆ.ಆದರೆ ಈಗ ಬೇರೆ ರಾಜ್ಯದವರು ಆಗಮಿಸಿ ಇಲ್ಲಿ ಕ್ಷೌರಿಕದ ಅಂಗಡಿಯನ್ನು ತೆಗೆಯಲು ಮುಂದಾಗಿದ್ದು ಇದರಿಂದ ಬಹುಕಾಲದಿಂದ ವೃತ್ತಿ ಮಾಡಿಕೊಂಡು ಬಂದಿರುವ ನಮಗೆ ಮುಂದೆ ಉದ್ಯೋಗ ಇಲ್ಲದಂತ ಸ್ಥಿತಿ ನಿರ್ಮಾಣವಾಗಲಿದೆ.ಆದ್ದರಿಂದ ಈಗಲೇ ಅದನ್ನು ವಿರೋಧಿಸುತ್ತಿದ್ದು,ತಾಲೂಕು ಆಡಳಿತ,ಪೊಲೀಸ್ ಇಲಾಖೆ ಮತ್ತು ನಗರಸಭೆ ಯಾವುದೇ ಕಾರಣಕ್ಕೂ ಬೇರೆ ರಾಜ್ಯದಿಂದ ಬಂದು ಈಗ ರಂಗಂಪೇಟೆಯಲ್ಲಿ ಅಂಗಡಿ ಆರಂಭಿಸಲು ಮುಂದಾಗಿರುವವರಿಗೆ ಪರವಾನಿಗೆ ನೀಡಬಾರದೆಂದು ಆಗ್ರಹಿಸಿದರು.
ಸಂಜೆಯವರೆಗೂ ನಡೆದ ಧರಣಿ ಸ್ಥಳಕ್ಕೆ ಮುಖಂಡರಾದ ವೇಣುಗೋಪಾಲ ಜೇವರ್ಗಿ,ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ,ವೆಂಕೋಬ ದೊರೆ,ನಿಂಗಣ್ಣ ಗೋನಾಲ,ಚಂದ್ರಶೇಖರ ಹಸನಾಪುರ ಆಗಮಿಸಿ ಹೋರಾಟಗಾರರ ಬೇಡಿಕೆಗಳ ಆಲಿಸಿದರು.
ಸಂಜೆಯ ವೇಳೆಗೆ ನಗರಸಭೆ ಅಧ್ಯಕ್ಷರಾದ ಸುಜಾತಾ ವೇಣುಗೋಪಾಲ ಜೇವರ್ಗಿ,ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ಹಾಗು ತಹಸೀಲ್ ಕಚೇರಿ ಸಿರಸ್ಥೆದಾರರು ಆಗಮಿಸಿ ಧರಣಿ ನಿರತರ ಮನವಿಯನ್ನು ಸ್ವೀಕರಿಸಿ ನಿಯಮದ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಧರಣಿಯಲ್ಲಿ ಮುಖಂಡರಾದ ಸೂರ್ಯಕಾಂತ ಚಿನ್ನಾಕಾರ,ಯಲ್ಲಪ್ಪ ಚಿನ್ನಾಕಾರ,ಗೋಪಾಲ ಚಿನ್ನಾಕಾರ,ಕೃಷ್ಣಾ ಚಿನ್ನಾಕಾರ,ನಾರಾಯಣ ಸೇರಿದಂತೆ ಅನೇಕರಿದ್ದರು.