ಪತ್ರಿಕಾ ಪ್ರಕಟಣೆಗಾಗಿ
ನಡೆ-ನುಡಿ ಶುದ್ಧವಿರಲಿ
ಭಾಲ್ಕಿ-ಅಗಸ್ಟ-೨೬
ಕದಿರು ಮುರಿಯೆ ಏನೂ ಇಲ್ಲ
ವ್ರತಹೀನನ ನೆರೆಯಲಿಲ್ಲ ಗುಮ್ಮೇಶ್ವರಾ.
ಕದಿರು ಕಾಯಕದ ಕಾಳವ್ವೆಯವರು ಒಂದು ವಚನದಲ್ಲಿ ವ್ರತಹೀನನ ಜೊತೆ ಸಂಗ ಮಾಡಬಾರದು. ಅನಾಚಾರದ ಜೊತೆ ನಾವು ಕೂಡಿದರೆ ನಾವು ಅನಾಚಾರದ ಸುಳಿಗೆ ಸಿಗುತ್ತೇವೆ. ಶರಣೆಯರು ನೀತಿಗೆ ಆಚಾರಕ್ಕೆ ಬಹಳ ಬೆಲೆ ಕೊಟ್ಟರು. ಅದಕ್ಕೆ ಜನಪದಕಾರರು ಆಚಾರಕ್ಕರಸನಾಗು ನೀತಿಗೆ ಪ್ರಭುವಾಗು ಎಂದು ಹೇಳುತ್ತಾರೆ.
ಪಿಟ್ಟವ್ವೆ, ಸತ್ಯಕ್ಕ, ರೆಬ್ಬವ್ವೆ, ಗುಡ್ಡವ್ವೆ, ದಾನಮ್ಮ
ಕದಿರು ಮುರಿಯೆ ಏನೂ ಇಲ್ಲ. ನೂಲು ತೆಗೆಯುವ ಕದಿರು ಮುರಿದುಬಿದ್ದಾಗ ನೂಲು ಇಲ್ಲ. ನೂಲುವಿಲ್ಲವೆಂದ ಮೇಲೆ ಬಟ್ಟೆಯಿಲ್ಲ. ಕಾಯಕಕ್ಕೆ ಕುಂದು ಬರುತ್ತದೆ. ಕದಿರು ಮುರಿದರೆ ಏನೂ ಇಲ್ಲ. ಕಾಯಕಕ್ಕೆ ದಕ್ಕೆ ಬಂದಾಗ ಜೀವನಕ್ಕೂ ತೊಂದರೆಯಾಗುತ್ತದೆ. ಅದೇ ರೀತಿ ಆಚಾರವಂತರಲ್ಲದವರ ಜೊತೆ ಸಂಗ ಮಾಡಿದರೆ ಜೀವನವೂ ಏನೂ ಇಲ್ಲದಂತಾಗುತ್ತದೆ. ಶೂನ್ಯವಾಗಿ ಬಿಡುತ್ತದೆ. ಖಾಲಿ ಖಾಲಿಯಾಗಿ ಬಿಡುತ್ತದೆ. ‘ಆಚಾರವೇ ಸ್ವರ್ಗ ಅನಾಚಾರವೇ ನರಕ, ದಯವೇ ಧರ್ಮದ ಮೂಲವಯ್ಯ’, ‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ. ಇದೇ ಅಂತರಂಗಶುದ್ಧಿ ಇದೇ ಬಹಿರಂಗಶುದ್ಧಿ ಇದೇ ನಮ್ಮ ಕೂಡಲಸಂಗಮದೇವರ ನೊಲಿಸುವ ಪರಿ’. ಆಚಾರದ ಸಪ್ತ ಸೂತ್ರಗಳು ಬಸವ ತಂದೆಯವರು ನೀಡಿದ್ದಾರೆ.
ಆಚಾರ ಎಂದರೆ, ಆ ಎಂದರೆ ಪರಾತ್ಪರ ಪರವಸ್ತು. ಸತ್ಯವಸ್ತು ನಿರಾಕಾರ ನಿರಂಜನ ನಿರ್ಗುಣ ಪರಶಿವ ಎಂದು ಅರ್ಥ. ಚರ ಎಂದರೆ ಸಾಗುವುದು. ನಮ್ಮೆಲ್ಲರ ಗುರಿ ಆ ಪರಾತ್ಪರ ಪರವಸ್ತುವಿನ ಕಡೆ ಸಾಗುವುದು. ಜೀವ ಶಿವನಾಗುವುದು. ನರ ಹರನಾಗುವುದು. ಜೀವನದಿ ದೇವಸಾಗರ ಸೇರುವುದು. ಇದಕ್ಕೆ ಆಚಾರವೇ ಮುಖ್ಯ. ಅದಕ್ಕೆ ಬಸವತಂದೆಯವರು ಹೇಳುತ್ತಾರೆ. ಹರಿವ ಹಾವಿಗಂಜೆ, ಉರಿವ ನಾಲಗೆಗಂಜೆ, ಸುರಗಿಯ ಮೊನೆಗಂಜೆ, ಒಂದಕ್ಕಂಜುವೆ, ಒಂದಕ್ಕಳುಕುವೆ, ಪರಸ್ತ್ರೀ ಪರಧನವೆಂಬೀ ಜುಬಿಂಗಂಜುವೆ ಮುನ್ನಂಜದ ರಾವಳನೇವಿಧಿಯಾದ ಅಂಜುವೆನಯ್ಯ ಕೂಡಲಸಂಗಮದೇವಾ ಯಾವುದಕ್ಕೂ ಹೆದರಲಾರದವರು ಬಸವ ತಂದೆಯವರು ಪರಸ್ತ್ರೀ ಮತ್ತು ಪರಧನಕ್ಕೆ ಹೆದರುತ್ತೇನೆ. ಇದರ ತಾತ್ಪರ್ಯವಿಷ್ಟೇ ಕದಿರು ಕಾಯಕದ ಕಾಳವ್ವೆ ಹೇಳಿರುವಂತೆ ವ್ರತ ಆಚಾರ ಮಹತ್ವದ್ದು.
ದಂಪತಿಗಳಿಗೆ ಒಬ್ಬನೆ ಮಗ. ತಂದೆ ಕುಡಿಯುತ್ತಿದ್ದ. ಒಂದು ದಿವಸ ತಂದೆ ಪಡಸಾಲೆಯಲ್ಲಿ ಕೂತಿದ್ದಾನೆ. ಮಗ ಉಪ್ಪಿನಕಾಯಿ ಗಾಜಿನ ಭರಣಿ ತೆಗೆದುಕೊಂಡು ಬರುತ್ತಿದ್ದ. ಕಾಲಿಗೆ ಠೇಸಿ ಹತ್ತಿ ಕೈಯಿಂದ ಜಾರಿ ಗಾಜಿನ ಭರಣಿ ಅಂಗಳದಲ್ಲಿ ಬಿದ್ದು ಒಡೆದು ಹೋಯಿತು. ಅಪ್ಪನಿಗೆ ವಿಪರೀತ ಸಿಟ್ಟು ಬಂತು. ಮಗನಿಗೆ ಜೋರಾಗಿ ಕಪಾಳಕ್ಕೆ ಎರಡು ಹೊಡೆದ. ಮಗ ಹೇಳಿದ ಅಪ್ಪಾ ಗಾಜಿನ ಭರಣಿ ಒಡೆದಿದ್ದರಿಂದ ನನಗೆ ಹೊಡೆದೆ. ಆದರೆ ಈ ಗಾಜಿನ ಭರಣಿ ನೂರು ರೂಪಾಯಿ ಕೊಟ್ಟು ಇನ್ನೊಂದು ಗಾಜಿನ ಭರಣಿ ತರಬಹುದು. ಆದರೆ ನಿನ್ನ ಈ ದೇಹವೆಂಬ ಗಾಜಿನ ಭರಣಿ ಕುಡಿದು ಕುಡಿದು ಹಾಳಾಗುತ್ತಿದೆ. ಅದು ಎಷ್ಟೇ ದುಡ್ಡು ಕೊಟ್ಟರು ಮತ್ತೆ ಸಿಗಲಾರದು. ಈ ಭರಣಿ ಅಂಗಡಿಯಲ್ಲಿ ಸಿಗುತ್ತದೆ.
ಆದರೆ ನಿನ್ನ ಅಮೂಲ್ಯ ಜೀವನ ಕುಡಿಯುವ ಅನಾಚಾರದಿಂದ ನಾಶವಾಗುತ್ತಿದೆ. ಇದಕ್ಕೇನು ಉತ್ತರವಪ್ಪ ಹೇಳು ಎಂದ ಮಗ. ಅಪ್ಪನ ಅರಿವಿನ ಕಣ್ಣು ತೆರೆಯಿತು. ಜ್ಞಾನೋದಯವಾಯಿತು. ಮಗ ತಪ್ಪಾಯಿತು. ಇಂದು ನನ್ನ ಅರಿವಿನ ಕಣ್ಣು ತೆರೆಯಿಸಿದೆ. ಇಂದಿನಿಂದ ನಾನು ಎಂದೂ ಕುಡಿಯುವುದಿಲ್ಲ. ಪ್ರಮಾಣ ಮಾಡುತ್ತೇನೆ ಎಂದಾಗ ಅಪ್ಪ ಮಗನ ಕಣ್ಣುಗಳಲ್ಲಿ ನೀರು ತುಂಬಿ ಬಂದವು. ಕಾಳವ್ವೆ ತಾಯಿ ಆಚಾರವಂತರ ಸಂಗಬೇಕು. ಅಂಥ ನಡೆ-ನುಡಿ ಶುದ್ಧ ಮಾಡಿಕೊಂಡು ಶರಣರ ಸಂಗದಲ್ಲಿ ಇದ್ದುಕೊಂಡು ಆಚಾರವಂತರಾಗೋಣ.