ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಲ್ಲೂಕಿನ ಶಿರಾಳಕೊಪ್ಪದ ಸುತ್ತಮುತ್ತ ಸುಮಾರು ಹತ್ತೆಂಟು ಶರಣ, ಶರಣೆಯರ ಸ್ಮಾರಕಗಳು ಕಂಡುಬರುತ್ತವೆ. ಶರಣೆ ಸತ್ಯಕ್ಕನ ಹಿರೇಜಂಬೂರ ಪ್ರವೇಶಿಸಿ ಮುಂದೆ ಹೋದಾಗ ಕೆರೆಯೊಂದು ಕಾಣಿಸುತ್ತದೆ. ಈ ಕರೆಯನ್ನು ಸಿದ್ಧರಾಮೇಶ್ವರರು ಕಟ್ಟಿಸಿದ್ದಾರೆ ಎಂದು ಹೇಳಲಾಗಉತ್ತಿದ್ದು, ಕೆರೆಯ ದಂಡೆಯಲ್ಲಿ ಕಾಣುವ ಕಲ್ಲಿನ ಕಟ್ಟಡವೂ ಒಬ್ಬ ಶರಣೆಗೆ ಸಂಬಂಧಿಸಿದ ಚರಿತ್ರೆ ಹೇಳುತ್ತದೆ.
ಪಿಟ್ಟವ್ವೆ: ಚೋಳ ರಾಜ್ಯದ ಅರಸ ಕೆರೆ ಕಟ್ಟಿಸುತ್ತಿದ್ದ ವೇಳೆಯಲ್ಲಿ ಊರೊಳಗಿನ ಎಲ್ಲರೂ ಸರತಿ ಪ್ರಕಾರ ಕೆರೆ ಅಗಿಯುವ ಕೆಲಸ ಮಾಡಬೇಕಿತ್ತು. ಪಿಟ್ಟವ್ವೆಗೆ ಈ ಕೆಲಸ ಮಾಡಲು ತೊಂದರೆಯಾದಾಗ ಆಕೆಯ ಬದಲಾಗಿ ಶಿವ ಬಂದು ಕೆಲಸ ಮಾಡಿದ. ಆಕೆ ಸುಮ್ಮನೆ ಕುಳಿತುಕೊಳ್ಳದೆ ಕೆರೆಯ ದಂಡೆಯ ಮೇಲೆ ಕುಳಿತು ಕೆರೆ ಕಟ್ಟುವವರಿಗೆ ದೋಸೆ ಮಾಡಿಕೊಟ್ಟಳು ಎಂಬ ಕಥೆ ಹೇಳಲಾಗುತ್ತಿದೆ.
ಸತ್ಯಕ್ಕ-ಹಾವಿನಾಳ ಕಲ್ಲಯ್ಯ: ಹಿರೇಜಂಬೂರಿನಲ್ಲಿ ಸತ್ಯಕ್ಕನ ದೇವಾಲಯವಿದೆ. ಊರಿನ ಪ್ರಮುಖ ದೈವದ ಹೆಸರಿನಲ್ಲಿ ವರ್ಷಕ್ಕೊಮ್ಮೆ ಜಾತ್ರೆ, ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈಕೆಯ ಭಕ್ತಿಯನ್ನು ಪರೀಕ್ಷಿಸಲು ಆಗಮಿಸಿದ ಶಿವನಿಗೆ ಸೌಟು ತೆಗೆದುಕೊಂಡು ಹೊಡೆದ ಕಥೆ ಈಕೆಯ ಸುತ್ತ ಹೆಣೆಯಲಾಗಿದೆ. ಅತ್ಯಂತ ವೈಚಾರಿಕತೆ, ಸತ್ಯನಿಷ್ಠೆ ಹೊಂದಿದ್ದಳು. ಗ್ರಾಮದ ನಾಲೆಯೊಂದರಲ್ಲಿ ಅತ್ಯಂತ ಹೀನಾಯ ಸ್ಥಿತಿಯಲ್ಲಿರುವ ಸ್ಮಾರಕವೊಂದನ್ನು ತೋರಿಸಿ ಇದು ಹಾವಿನಾಳ ಕಲ್ಲಯ್ಯನ ಸ್ಮಾರಕ ಎನ್ನುತ್ತಾರೆ ಅಲ್ಲಿನ ಗ್ರಮಸ್ಥರು.
ವೇದ ಓದಿದ ಜಾವಲಿ, ಮಹಾಕಾಳ ಭೈರವ: ಊರೊಳಗೆ ನಾಯಿಯ ಶಿಲಾಮೂರ್ತಿಯಿದ್ದು, ಹಿಂದಿನ ಕಾಲದಲ್ಲಿ ಇಲ್ಲಿ ಅದೇನೋ ಧಾರ್ಮಿಕ ಸಂಘರ್ಷ ನಡೆದಿರಬೇಕು. ಅಂತೆಯೇ ಅಸ್ಪೃಶ್ಯರ ಕೇರಿಯಿಂದ ನಾಯಿ ತಂದು ವೇದ ಓದಿಸಿದರು ಎಂದು ಹೇಳಲಾಗುತ್ತಿದೆ. ಅದೇ ರೀತಿಯಾಗಿ ಮಹಾಕಾಳ ಎನ್ನುವ ಸುಂದರ ಭೈರವ ಶಿಲ್ಪಮೂರ್ತಿಯಿದ್ದು, ಈತ ಶಿವನ ಪೂಜೆ ಮಾಡುವಾಗ ರುಂಡ ಕೊಯ್ದಿಟ್ಟು ಪನಃ ಪಡೆಯುತ್ತಿದ್ದ. ಆ ಮೇಲೆ ದೊಡ್ಡ ಶರಣರಾದರು ಎಂಬುದನ್ನು ಎಲ್ಲರೂ ಉಲ್ಲೇಖಿಸಿದ್ದಾರೆ. ಆದರೆ ಸತ್ಯಕ್ಕನ ಆರಾಧ್ಯದೈವ ಜಕ್ಕೇಶ್ವರನ ದೇವಾಲಯ ಮಾತ್ರ ತುಂಬಾ ದುಸ್ಥಿತಿಯಲ್ಲಿದೆ.
ಹಿರೆಮಸಳಿ: ರೆಬ್ಬವ್ವೆ ಈ ಊರಿನಲ್ಲಿರುವ ರೆಬ್ಬವ್ವೆನ ದೇವಾಲಯಕ್ಕೆ ಹೋಗಬೇಕಾದರೆ ನಾಲೆ ದಾಟಿ ಯಾವುದೋ ಹೊಲದ ಬಂದಾರಿನಲ್ಲಿ ಇಳಿದು ಹೋಗಬೇಕು. ಈ ರೆಬ್ಬೆವೆಯೇ ಕದಿರೆ ರೆಮ್ಮವ್ವೆ ಎಂದು ಊರಿನವರು ಹೇಳುತ್ತಾರೆ. ಆದರೆ ವಚನಕಾರರ ಪಟ್ಟಿಯಲ್ಲಿ ರೆಬ್ಬವ್ವೆಯ ಹೆಸರು ಹಾಗೆಯೇ ಇದೆ. ಈಕೆಯದೂ ನೂಲಿನ ಕಾಯಕವಂತೆ! ಗುಮ್ಮೇಶ್ವರ ಕದಿರೆ ಕಾಳವ್ವೆ, ಕದಿರೆ ರೆಮ್ಮವ್ವೆಯರ ಅಂಕಿತನಾಮವರುವುದರಿಂದ ರೆಬ್ಬವ್ವೆ ಮತ್ತು ರೆಮ್ಮವ್ವೆ ಒಬ್ಬರೋ ಅಥವಾ ಬೇರೆ ಬೇರೆಯೋ ಎಂಬುದರ ಕುರಿತು ಶೋಧ ಮಾಡಬೇಕಿದೆ.
ನಾದಗಿ ಗುಡ್ಡವ್ವೆ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾವದಗಿ ಗ್ರಾಮವು ಆಗ ಅಗ್ರಹಾರ ನಾವದಿಗಿ ಎಂದು ಪ್ರಸಿದ್ಧಿ ಪಡೆದಿತ್ತು. ಈಕೆ ಅಸ್ಪೃಶ್ಯ ಜನಾಂಗಕ್ಕೆ ಸೇರಿದವಳಾಗಿದ್ದು, ಈಕೆಗೆ ತೊನ್ನು ರೋಗ ಇತ್ತು. ಎಂಥದೋ ಓಣಿಯಲ್ಲಿ ಹಾದು ಬರುತ್ತಿರುವಾಗ ಆಕೆಗೆ ಕೆಲವರು ಅವಮಾನ ಮಾಡಿದರು. ಶಿವಭಕ್ತಳಾಗಿದ್ದ ಈಕೆ ಸೌರಾಷ್ಟ್ರದಿಂದ ಸೋಮೇಶ್ವರನ್ನು ತರಲು ಹೋಗುವಾಗ, ಶಿವ ಪ್ರತ್ಯೇಕ್ಷನಾಗಿ “ನೀ ಏನೂ ಕಾಳಜಿ ಮಾಬೇಡ ಇಲ್ಲಿಂದ ಹಿಂದಿರುಗಿ ಹೋಗು. ನಾನಲ್ಲಿ ಕುಳಿತಿರುವೆ ಎಂದು ಹೇಳಿದ್ದರಂತೆ. ತಿರುಗಿ ಬರಲು ಸೋಮನಾಥ ಅಲ್ಲಿ ನೆಲೆಸಿದ್ದ ಎನ್ನುವುದಕ್ಕೆ ಅಲ್ಲೊಂದು ಸೋಮೇಶ್ವರ ದೇವಾಲಯವಿದೆ. ಅದನ್ನು ಈಗ ಮಲ್ಲಿಕಾರ್ಜುನ ದೇವಾಲಯ ಎಂದು ಕರೆಯುತ್ತಾರೆ. ಆಕೆಗೆ ಅಂಟಿರುವ ತೊನ್ನು ವಾಸಿಯಾಗಿ ಅವಳನ್ನು ಈ ಮೊದಲು ಅವಮಾನಿಸಿದವರಿಗೆ ಅಂಟಿಕೊಂಡಿತು. ಈಕೆಯೇ ಅವರಿಗೆ ಹತ್ತಿದ್ದ ತೊನ್ನು ರೋಗವನ್ನು ಗುಣಪಡಿಸಿದಳು ಎಂಬ ಕಥೆ ಹೇಳಲಾಗುತ್ತಿದೆ. ಗುಡ್ಡವ್ವೆಯ ಸಮಾದಿಯೂ ಅತ್ಯಂತ ಹೀನ ಸ್ಥಿತಿಯಲ್ಲಿದೆ.
ಗುಡ್ಡಾಪುರ ದಾನಮ್ಮ: ಕರ್ನಾಟಕ-ಮಹಾರಾಷ್ಟ್ರದ ಪ್ರಸಿದ್ಧ ದೇವತೆ. ಸಾಂಗ್ಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಉಮ್ರಾಣಿಯ ಬಡಿಗತನ ಕಾಯಕ ಮಾಡುವ ಕುಟುಂಬದ ಅನಂತರಾಯ-ಶಿರಸಮ್ಮ ದಂಪತಿಯ ಉದರದಲ್ಲಿ ಜನಿಸಿದ ಈಕೆಯ ಮೂಲ ಹೆಸರು ಲಿಂಗಮ್ಮ. ವಿಜಯಪುರ ಜಿಲ್ಲೆಯ ಸಂಖ ಈಕೆಯ ಗಂಡನ ಊರು. ಮದುವೆಗಿಂತ ಮುಂಚೆ ಕಲ್ಯಾಣಕ್ಕೆ ಬಂದು ದಾಸೋಹ ಸೇವೆ ಮಾಡುತ್ತಿದ್ದ ಈಕೆಯನ್ನು ಬಸವಣ್ಣನವರು ದಾನಮ್ಮ ಎಂದು ಕರೆದರಂತೆ. ಹೀಗಾಗಿ ಉಮ್ರಾಣಿ, ಸಂಖ ಹಾಗೂ ಗುಡ್ಡಾಪುರದಲ್ಲಿಯೂ ಈಕೆಯ ಸ್ಮಾರಕವಿರುವುದನ್ನು ಕಾಣಬಹುದು.