ಕಲಬುರಗಿ: ಇಲ್ಲಿನ ಮಹಾನಗರ ಪಸಲಿಕೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ಸೋಲಿಸಲು ಮತ್ತು ಸಿಪಿಐಎಂ ಅಭ್ಯರ್ಥಿಗಳು ಹಾಗೂ ಇತರೆಡೆ ಪ್ರಗತಿಪರ ಜಾತ್ಯಾತೀತ ಶಕ್ತಿಗಳನ್ನು ಗೆಲ್ಲಿಸಲು ಸಿಪಿಐಎಂ ಕರೆ ನೀಡಿದೆ.
ಸುದ್ದಿ ಗೋಷ್ಠಿಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಮಾತನಾಡಿ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದೆ ಮತ್ತು ಮತ್ತೊಂದು ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯನ್ನು ಸಿಪಿಐಎಂ ಬೆಂಬಲಿತ ಅಭ್ಯರ್ಥಿಯೆಂದು ನಿರ್ಧರಿಸಿದೆ.17 ನೇ ವಾರ್ಡ ನಲ್ಲಿ ಸಿಪಿಐಎಂ ಅಭ್ಯರ್ಥಿಯಾಗಿ ಕಾಂ.ಮಹಮದ್ ಗೌಸ್ ಹಾಗೂ 18 ನೇ ವಾರ್ಡ ನಲ್ಲಿ ಕಾಂ. ಶಾಲಂ ಮತ್ತು 26 ನೇ ವಾರ್ಡನಲ್ಲಿ ಸ್ಪರ್ಧಿಸಿದ ಪದ್ಮಿನಿ ಕಿರಣಗಿ ಯವರನ್ನು ಸಿಪಿಐಎಂ ಬೆಂಬಲಿತ ಅಭ್ಯರ್ಥಿಯೆಂದು ನಿರ್ಧರಿಸಿದ್ದು ಈ ಮೂರು ಅಭ್ಯರ್ಥಿಗಳನ್ನು ಆಯಾ ಕ್ಷೇತ್ರಗಳ ಮತದಾರರು ಮತನೀಡಿ ಗೆಲ್ಲಿಸಲು ಸಿಪಿಐಎಂ ಜಿಲ್ಲಾ ಸಮಿತಿ ಮನವಿ ಮಾಡಿದೆ.
ಮಹಾನಗರ ಪಾಲಿಕೆಯ ಮತದಾರರು ಈ ಚುನಾವಣೆಯಲ್ಲಿ ಬಿಜೆಪಿಯನ್ನು ನಿರ್ಣಾಯಕವಾಗಿ ಸೋಲಿಸಲು ಮತ್ತು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಲು ಹಾಗೂ ಎಡ ಮತ್ತು ಜಾತ್ಯಾತೀತ ಪ್ರಜಾಸತ್ತಾತ್ಮಕ ಅಭ್ಯರ್ಥಿಗಳಿಗೆ ಮತನೀಡಿ ಗೆಲ್ಲಿಸಲು ಕರೆ ನೀಡಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಕೇಂದ್ರ ಹಾಗೂ ರಾಜ್ಯಗಳಲ್ಲಿ ಅಧಿಕಾರವನ್ನು ನಡೆಸಿದರೂ, ನಗರದ ಜನತೆಯ ಅಭಿವೃದ್ಧಿಗಾಗಿ ಅಧಿಕಾರ ಮತ್ತು ಸಂಪನ್ಮೂಲಗಳನ್ನು ವಿಕೇಂದ್ರೀಕರಿಸಿ ಜನತೆ ಅಭಿವೃಧ್ಧಿಯಲ್ಲಿ ಪಾಲ್ಗೊಳ್ಳುವಂತೆ ಮಾಡುವಲ್ಲಿ ಮತ್ತು ಸಂಪನ್ಮೂಲಗಳನ್ನು ಒದಗಿಸುವಲ್ಲಿ ಘೋರವಾಗಿ ವಿಫಲವಾಗಿವೆ. ಸ್ಥಳೀಯವಾಗಿ ಈ ಜನತೆಯ ಅಭಿವೃದ್ಧಿಯ ಈ ರಾಜಕೀಯ ಪ್ರಶ್ನೆಯನ್ನು ಎತ್ತಿಕೊಳ್ಳಲು ಅವು ತಯಾರಿಲ್ಲ.
ಬದಲಿಗೆ ಈ ಪಕ್ಷಗಳು ಇವುಗಳ ಸರಕಾರಗಳು ಜನತೆಯ ಅಭಿವೃದ್ದಿಯ ಬದಲಿಗೆ ಜನತೆ ಮತ್ತು ನಗರವನ್ನು ಕಾರ್ಪೊರೇಟ್ ಕಂಪನಿಗಳ ಲೂಟಿಗೊಳಪಡಿಸಲು ಕ್ರಮವಹಿಸಿವೆ. ಉದಾಹರಣೆಗೆ, ನಗರದ ಕುಡಿಯುವ ನೀರನ್ನು ಉಚಿತವಾಗಿ ಯೆಥೇಚ್ಛವಾಗಿ ಒದಗಿಸುವ ಸಾರ್ವಜನಿಕ ರಂಗದ ಕುಡಿಯುವ ನೀರಿನ ಯೋಜನೆ ಬಲ ಗೊಳಿಸಲು ಕ್ರಮ ವಹಿಸುವ ಬದಲು ಬಡವರಿಗೆ ಶುದ್ಧ ನೀರು ದೊರೆಯದಂತೆ ಮಾಡಲು, ಕುಡಿಯುವ ನೀರನ್ನು ಸರಬರಾಜು ಮಾಡಲು ಎಲ್ ಅಂಡ್ ಟಿ ಕಂಪನಿಗೆ ಕೊಟ್ಟಿರುವುದನ್ನು ನೋಡಬಹುದಾಗಿದೆ. ಈ ಖಾಸಗೀ ಕಂಪನಿಗಳು ಕುಡಿಯುವ ನೀರಿನಂತಹ ಅಗತ್ಯ ಸಂಪನ್ಮೂಲಗಳನ್ನು ತಮ್ಮವಶಕ್ಕೆ ಪಡೆದು ಮೀಟರ್ ಗಳನ್ನು ಜಡೆದು ವ್ಯಾಪಾರ ಮಾಡುತ್ತವೆ. ಇದರಿಂದ ಬಡವರಿಗೆ ಶುದ್ಧ ಕುಡಿಯುವ ನೀರು ಸಿಗದೇ ಆರೋಗ್ಯ ಹಾಳಾಗಲಿದೆ. ಮಧ್ಯಮ ವರ್ಗ ನೀರಿನ ದರ ಏರಿಕೆಯ ಲೂಟಿಗೆ ಒಳಪಡಲಿದೆ.
ವಿದ್ಯುತ್ ರಂಗದ ಖಾಸಗೀಕರಣವು ಬಡವರನ್ನು ಕತ್ತಲಲ್ಲಿಟ್ಟರೇ ಎಲ್ಲ ಬಳಕೆದಾರರನ್ನು ಮಧ್ಯಮ ವರ್ಗವನ್ನು ಬೆಲೆ ಏರಿಕೆಯ ಲೂಟಿಗೊಳಪಡಿಸಲಿದೆ. ಹಾಗೇ ರಾಷ್ಟ್ರೀಯ ಶಿಕ್ಷಣ ನೀತಿಯು ದಲಿತರು, ಬಡವರು, ಮಹಿಳೆಯರಿಗೆ ಶಿಕ್ಷಣವನ್ನು ವಂಚಿಸಲಿದೆ. ನಿರುದ್ಯೋಗವನ್ನು ಹೆಚ್ಚಿಸಲಿದೆ. ಅಪೌಷ್ಟಿಕತೆಯನ್ನು ನೀಗುವ ಬದಲು ಹೆಚ್ಚಿಸಲಿದೆ.
ಆದ್ದರಿಂದ ಇಂತಹ ಎಲ್ಲ ಪ್ರಶ್ನೆಗಳನ್ನು ಬಯಲುಗೊಳಿಸಿ ಪ್ರತಿರೋಧಿಸಲು ಸಿಪಿಐಎಂ ಅಭ್ಯರ್ಥಿಗಳಿಗೆ ಮತ್ತು ಇತರೆ ಜಾತ್ಯಾತೀತ ಪ್ರಗತಿಪರ ಶಕ್ತಿಗಳಿಗೆ ಮತ ನೀಡುವಂತೆ ಸಿಪಿಐಎಂ ನಗರದ ಮತದಾರರಲ್ಲಿ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ, ಶ್ರೀಮಂತ ಬಿರಾದಾರ, ಪಾಂಡುರಂಗ ಮಾವಿನಕರ ಸೇರಿದಂತೆ ಇತರರು ಇದ್ದರು.