ಅಜಗಣ್ಣ-ಮುಕ್ತಾಯಕ್ಕ: ಶರಣ ಚರಿತೆ

0
13

ಸಹೋದರ-ಸಹೋದರಿಯ ಸಂಬಂಧವುಳ್ಳ ಅಜಗಣ್ಣಮತ್ತು ಮುಕ್ತಾಯಕ್ಕ ವಚನ ಸಾಹಿತ್ಯದಲ್ಲಿ ಬಹು ಮಹತ್ವದ ಪಾತ್ರ ವಹಿಸಿದವರು. ಲೌಕಿಕ ಆಸೆಯ ಸೆಳೆತದಾಚೆ ಇರುವ ಅನನ್ಯವಾದ ಅಲೌಕಿಕ ಸಾಧನೆ-ಸಿದ್ಧಿ ಮಾಡಿದವರು. ಸಾಮಾನ್ಯ ಕೃಷಿ ಮನೆತಕ್ಕೆ ಸೇರಿದ ಇವರಿಬ್ಬರು ಲಿಂಂಗಾಂಗ ಸಾಧನೆಯ ಮೂಲಕ ಅದ್ವೈತ ತಿಳಿದುಕೊಂಡ ಅಪರೂಪದ ಶರಣರು. ಈ ಅಜಗಣ್ಣ-ಮುಕ್ತಾಯಕ್ಕರ ಸ್ಮಾರಕಗಳು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮಸರಕಲ್, ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲ್ಲೂಕಿನ ಲಕ್ಕುಂಡಿ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಹಳೆ ಮುತ್ತಿಗೆಯಲ್ಲಿ ಕಾಣಬಹುದು.

ಮಸರಕಲ್: ಎತ್ತರದ ಬೆಟ್ಟದ ಮೇಲೆ ಈ ಮೊದಲು ದ್ವಾರಗಿರಿ ಪಟ್ಟಣ ಎಂಬ ಊರಿತ್ತು. ಇಲ್ಲಿಯೇ ಅಜಗಣ್ಣ-ಮುಕ್ತಾಯಕ್ಕರು ಇದ್ದರು ಎಂಬುದಕ್ಕೆ ಅವರ ಸ್ಮಾರಕಗಳೇ ಸಾಕ್ಷಿಯಾಗಿವೆ. ಇದಕ್ಕೆ ಹಿನ್ನೆಲೆಯಾಗಿ ಇಲ್ಲೊಂದು ಹುತ್ತ ಬೆಳೆದಿತ್ತು. ದನಕಾಯುವವರು ತಾವು ಕುಡಿಯುವ ನೀರನ್ನು ಹುತ್ತದ ಮೇಲೆರೆದು ಹುತ್ತ ಕರಗಿ ಹೋಗುತ್ತದೆ. ಅಲ್ಲಿ ಮಣ್ಣಿನ ಹಣತೆ, ಪಂಚಾರತಿ ಸಿಕ್ಕಿತು. ಹೀಗಾಗಿ ಇವರಿಬ್ಬರೂ ಇಲ್ಲಿಯೇ ಧ್ಯಾನ ಮಾಡುತ್ತಿದ್ದ ಸ್ಥಳ ಎಂದು ಹೇಳಲಾಗುತ್ತಿದೆ. ಮುಕ್ತಾಯಕ್ಕ-ಅಜಗಣ್ಣನ ಅನೋನ್ಯತೆ ಎಷ್ಟಿತ್ತೆಂದರೆ, ಆಕೆ ಅಜಗಣ್ಣನನ್ನು ಕೇವಲ ಅಣ್ಣ ಎಂದು ಸ್ವೀಕರಿಸಿದೆ ತಂದೆ-ತಾಯಿ, ಗುರುವಾಗಿ ಕಂಡಿದ್ದಳು. ಅಣ್ಣನ ಸಾಧನೆಯನ್ನು ತಾನು ಪಡೆಯುವ ಹಂಬಲದಿಂದ ಅಣ್ಣನ ಜೊತೆ ಆಯುಷ್ಯ ಕಳೆಯಬೆಕೆಂದು ಮದುವೆ ನಿರಾಕರಿಸುತ್ತಾಳೆ. ಕೊನೆಗೆ ಅಜಗಣ್ಣ ಆಕೆಗೆ ತಿಳಿ ಹೇಳಿ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿದರು ಎಂಬುದಕ್ಕೆ ಕಥೆಯೊಂದನ್ನು ಹೇಳುತ್ತಾರೆ.

Contact Your\'s Advertisement; 9902492681

ಶರಣರ ಕುರಿತ ಎಲ್ಲ ಕಾವ್ಯಗಳಲ್ಲಿ ಅಜಗಣ್ಣ ಲಿಂಗೈಕ್ಯನಾದಾಗ ಮುಕ್ತಯಕ್ಕ ಆತನ ತಲೆಯನ್ನು ತನ್ನ ತೊಡೆಯ ಮೇಲಿಟ್ಟುಕೊಂಡು ದುಃಖಿಸುತ್ತಿದ್ದಳು. ಅಲ್ಲಮ ಬಂದು ಆಕೆಯನ್ನು ನೀನಾರು? ಎಂದು ಪ್ರಶ್ನಿಸುತ್ತಾನೆ ಎಂಬುದಿದೆ. ಆದರೆ ಅದು ಹೀಗಾಗಿರಲಿಕ್ಕಿಲ್ಲ. ಇವರಿಬ್ಬರು ಕಲ್ಯಾಣಕ್ಕೆ ಹೋಗುವ ಮುನ್ನ ಅಲ್ಲಮಪ್ರಭು ಇಲ್ಲಿಗೆ ಬಂದಿದ್ದರು ಎಂಬುದಕ್ಕೆ ಗೂಗಲ್‌ನಲ್ಲೊಂದು ಅವರ ಹೆಸರಿನ ಗವಿಯಿದೆ. ಇಲ್ಲಿಗೆ ಸಮೀಪದ ಮೊರಟದಲ್ಲಿ ಸುಂಕದ ಭಂಕನಾಥ ಎಂಬ ಶರಣನಿದ್ದ. ಅಲ್ಲಮ ಇಲ್ಲಿಗೂ ಬಂದಿದ್ದರು ಎಂಬುದಕ್ಕೆ ಕುರುಹುಗಳಿವೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲ್ಲೂಕಿನ ಲಕ್ಕುಂಡಿಯಲ್ಲಿ (ಮುದಗನಹಳ್ಳಿ)ಅಜಗಣ್ಣನ ಸ್ಮಾರಕವಿದೆ.

ಅಲ್ಲಿನ ಪಾಟೀಲ ಮನೆತನಕ್ಕೆ ಸೇರಿದ ತೋಟವೊಂದರಲ್ಲಿ ಹಳೆಯ ಬಾವಿಯಿದ್ದು, ಆ ಬಾವಿ ತೋಡುವಾಗ ಅಜಗಣ್ಣ-ಮುಕ್ತಾಯಿ ಕಲ್ಲುಗಳು ಸಿಕ್ಕವು. ಅಜಗಣ್ಣ-ಮುಕ್ತಾಯಕ್ಕ ಹೆಸರಿರುವ ಆ ಕಲ್ಲುಗಳನ್ನು ಹೊಲದ ಬದುವಿನಲ್ಲಿ ಹಾಕಲಾಯಿತು ಎಂದು ಹೇಳಲಾಗುತ್ತಿದೆ. ಕಲ್ಲುಗಳಿರುವ ಜಾಗದಲ್ಲಿ ಈಗ ಮುಳ್ಳು ಕಂಟಿ ಆವರಿಸಿದೆ. ಜನ ಈ ಜಾಗವನ್ನು ಬಹಿರ್ದೆಸೆಗೆ ಬಳಸುತ್ತಿದ್ದಾರೆ. ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿಯೂ ಇವರ ಹೆಸರಿನ ಮಠವಿದೆ. ಇದುವೆ ಅವರ ಊರು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ.

ಅದೇರೀತಿಯಾಗಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಹಳೆ ಮುತ್ತಿಗೆಯಲ್ಲಿ ಮುಕ್ತಾಯಕ್ಕನ ಹೆಸರಿನಲ್ಲಿ ಚಿಕ್ಕ ಸ್ಮಾರಕ ಸಿಗುತ್ತದೆ. ಮುಕ್ತಾಯಿ ಇಲ್ಲಿಂದಲೇ ಆ ಕಡೆ ಹೋದರು ಎಂದು ಅಲ್ಲಿಯ ಜನ ಹೇಳುತ್ತಾರೆ. ಆದರೆ ಒಂದು ಮಾತಂತೂ ನಿಜ ಶರಣರು ಸ್ಥಾವರಗೊಂಡವರಲ್ಲ. ಅವರು ಜಂಗಮಶೀಲರು ಎಂಬುದನ್ನು ನಾವು ಯರೂ ಮರೆಯಬಾರದು.

-ಡಾ. ಜಯಶ್ರೀ ದಂಡೆ
ಸ್ಥಳ: ಬಸವ ಸಮಿತಿ ಅನುಭವ ಮಂಟಪ, ಜಯನಗರ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here