ಸುರಪುರ: ನಗರದಲ್ಲಿ ಕಳೆದ ತಿಂಗಳು ವ್ಯಕ್ತಿಯೊಬ್ಬರನ್ನು ಯಾಮಾರಿಸಿ ಹಣ ಎಗರಿಸಿ ಪರಾರಿಯಾಗಿದ್ದ ೭ ಜನ ಅಂತರರಾಜ್ಯ ಕಳ್ಳರ ಗ್ಯಾಂಗನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ವಿವರಣೆ ನೀಡಿರುವ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ:ಸಿ.ಬಿ.ವೇದಮೂರ್ತಿಯವರ ,ಜುಲೈ ೨೩ ರಂದು ತಾಲೂಕಿನ ಪೇಠ ಅಮ್ಮಾಪುರ ಗ್ರಾಮದ ವ್ಯಕ್ತಿ ಬಾಲಪ್ಪ ಎನ್ನುವವರು ಕರ್ನಾಟಕ ಬ್ಯಾಂಕಿನಿಂದ ೨ ಲಕ್ಷ ರೂಪಾಯಿ ಡ್ರಾ ಮಾಡಿಕೊಂಡು ಹೋಗುತ್ತಿರುವಾಗ,ಅವರನ್ನು ಹಿಂಬಾಲಿಸಿದ್ದ ಕಳ್ಳರು ೫೦ ರೂಪಾಯಿ ನೋಟನ್ನು ಬೀಳಿಸಿ ಅದರಿಂದ ಬಾಲಪ್ಪ ಎನ್ನುವವರ ಗಮನ ಸೆಳೆದು ಅವರು ಡ್ರಾ ಮಾಡಿಕೊಂಡು ಹೋಗುತ್ತಿದ್ದ ೨ ಲಕ್ಷ ರೂಪಾಯಿ ಎಗರಿಸಿ ಪರಾರಿಯಾಗಿದ್ದರು.ಈ ಕುರಿತು ಪ್ರಕರಣ ದಾಖಲಾಗಿತ್ತು.
ಈ ಕೃತ್ಯ ನಡೆಸಿದ ಕಳ್ಳರು ಹುನಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಇಂತದ್ದೆ ಕೃತ್ಯ ನಡೆಸಿದ್ದರು,ಅದಕ್ಕಾಗಿ ಹುನಗುಂದ ಪೊಲೀಸರು ಈ ಆರೋಪಿಗಳನ್ನು ಬಂಧಿಸಿದ್ದರು.ನಂತರ ಎಸ್ಪಿಯವರಾದ ಡಾ:ಸಿ.ಬಿ ವೇದಮೂರ್ತಿ ಹಾಗು ಡಿವೈಎಸ್ಪಿ ವೆಂಕಟೇಶ ಉಗಿಬಂಡಿಯವರ ಮಾರ್ಗದರ್ಶನದಲ್ಲಿ ಪಿಐ ಸುನಿಲಕುಮಾರ್ ಮೂಲಿಮನಿಯವರ ನೇತೃತ್ವದ ತಂಡ ಈಗ ೭ ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸುರಪುರ ನಗರದಲ್ಲಿ ಹಣ ಕದ್ದಿರುವ ಬಗ್ಗೆ ಬಾಯಿಬಿಟ್ಟಿದ್ದಾರೆ.
ಅಲ್ಲದೆ ಇವರಿಂದ ೨ ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ:ಸಿ.ಬಿ.ವೇದಮೂರ್ತಿಯವರು ತಿಳಿಸಿದ್ದಾರೆ.
ವಶಕ್ಕೆ ಪಡೆದ ಎಲ್ಲಾ ೭ ಜನ ಅಂತರರಾಜ್ಯ ಕಳ್ಳರನ್ನು ಮಂಗಳವಾರ ಪ್ರದರ್ಶಿಸಿದರು.ಈ ಸಂದರ್ಭದಲ್ಲಿ ಪಿಐ ಸುನೀಲಕಮಾರ್ ಮೂಲಿಮನಿ,ಪಿಎಸ್‌ಐಗಳಾದ ಚಂದ್ರಶೇಖರ ನಾರಾಯಣಪುರ,ಕೃಷ್ಣಾ ಸುಬೇದಾರ,ಚಿತ್ರಶೇಖರ ಹಾಗು ಪೊಲೀಸ್ ಪೇದೆಗಳು ಇದ್ದರು.