ಪ್ರೌಢ-ಪ್ರಾಥಮಿಕ ನಮ್ಮ ‘ಶಿಕ್ಷಕ ಸಾಹಿತಿಗಳ ಸಂಗಮ’ ಸೆ.೪ ರಂದು

2
57

ಕಲಬುರಗಿ: ಕನ್ನಡ ಸಾರಸ್ವತ ಲೋಕದಲ್ಲೇ ಹೊಸ ಪ್ರಯೋಗವೆಂಬಂತೆ ಇಲ್ಲಿನ ವಿಶ್ವಜ್ಯೋತಿ ಪ್ರತಿಷ್ಠಾನವು ಒಂದು ದಿನದ ಪ್ರೌಢ-ಪ್ರಾಥಮಿಕ ನಮ್ಮ ‘ಶಿಕ್ಷಕ ಸಾಹಿತಿಗಳ ಸಂಗಮ’ ಕಾರ್ಯಕ್ರಮವೊಂದನ್ನು ಸೆ.೪ ರಂದು ನಗರದ ಗೋದುತಾಯಿ ನಗರದಲ್ಲಿರುವ ಮದರ್ ತೆರೆಸಾ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕರೂ ಆದ ಜಿಲ್ಲಾ ಕಸಾಪ ಚುನಾವಣೆಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ವಿಜಯಕುಮಾರ ತೇಗಲತಿಪ್ಪಿ ತಿಳಿಸಿದರು.

ನಗರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತೇಗಲತಿಪ್ಪಿ, ರಾಷ್ಟ್ರ ನಿರ್ಮಾಣವೆಂದರೆ ಕಲ್ಲು-ಮಣ್ಣುಗಳ ಕಟ್ಟಡವಲ್ಲ. ಅದು ವ್ಯಕ್ತಿ ನಿರ್ಮಾಣದ ಕಾರ್ಯವೇ ಆಗಿದೆ. ಆ ಹಿನ್ನೆಲೆಯ ಸಾಕಾರಮೂರ್ತಿಗಳಾದವರು ಶಿಕ್ಷಕರು.ಇಂದಿನ ಶಿಕ್ಷಕರು ಕೇವಲ ಬೋಧನೆಗೆ ಸೀಮಿತವಾಗದೇ ವಿದ್ಯಾರ್ಥಿಗಳು ಹಾಗೂ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದ್ದಾರೆ. ಅಂಥ ಶಿಕ್ಷಕರೇ ರಾಷ್ಟ್ರದ ನಿರ್ಮಾಪಕರು ಎನ್ನುವದನ್ನು ಸಮಾಜಕ್ಕೆ ಪರಿಚಯಿಸಿ, ಪ್ರೋತ್ಸಾಹಿಸುವ ಉದ್ದೇಶಿತ ಕಾರ್ಯಕ್ರಮವೇ ‘ಶಿಕ್ಷಕ ಸಾಹಿತಿಗಳ ಸಂಗಮ’ವಾಗಿದೆ.

Contact Your\'s Advertisement; 9902492681

ತಮ್ಮಲ್ಲಿ ಪ್ರತಿಭೆ ಇದ್ದರೂ ವೇದಿಕೆಯಿಂದ ವಂಚಿತರಾದ ಈ ಭಾಗದ ಎಲೆಮರೆಯಂತಿರುವ ಶಿಕ್ಷಕರನ್ನು ಮುಖ್ಯವಾಹಿನಿಗೆ ತರುವ ಕೆಲಸ ಪ್ರತಿಷ್ಠಾನ ನಿರಂತರವಾಗಿ ಮಾಡುತ್ತಾ ಬರುತ್ತಿದೆ ಎಂದರು.

ಅಂದು ಬೆಳಗ್ಗೆ ೧೦.೩೦ ಕ್ಕೆ ಆದರ್ಶ ಶಿಕ್ಷಕಿ ಲಿಂ.ಸಿದ್ಧಮ್ಮಾ ಶಿವಾನಂದ ಮಠಪತಿ ವೇದಿಕೆಯಡಿಯಲ್ಲಿ ‘ನಿಷ್ಠೆಯ ಶಿಕ್ಷಕ ಶಿಕ್ಷಣ ಶಿಲ್ಪಿ’ ಶೀರ್ಷಿಕೆಯಡಿಯಲ್ಲಿ ಜರುಗಲಿರುವ ಸಮಾರಂಭ ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಉದ್ಘಾಟಿಸಲಿದ್ದು,ಮದರ್ ತೆರೆಸಾ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಶಿವಪುತ್ರಪ್ಪ ಡೆಂಕಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಿಕ್ಷಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸಿ.ಎಸ್.ಮುಧೋಳ, ಶಿಕ್ಷಕರ ಸಂಘದ ಪ್ರಮುಖರಾದ ವಿಶ್ವನಾಥ ಕಟ್ಟಿಮನಿ, ಮಲ್ಲಯ್ಯಾ ಗುತ್ತೇದಾರ, ಸವಿತಾ ಪಾಟೀಲ, ಪ್ರಿನ್ಸಿಪಾಲ್ ಡಾ.ವನೀತಾ ಜಾಧವ ಉಪಸ್ಥಿತರಿರುವರು. ಆದರ್ಶ ಶಿಕ್ಷಕ ಶಿವಾನಂದ ಪೂಜಾರಿ ಬಳೂರಗಿ ನೇತೃತ್ವ ವಹಿಸಲಿದ್ದಾರೆ. ಕೊರೊನಾದ ಸಂಕಷ್ಟದ ಸಮಯದಲ್ಲಿ ಅಮೋಘ ಸೇವೆ ನೀಡಿದ ಆರೋಗ್ಯ ಇಲಾಖೆಯ ಕೆಂಚಪ್ಪ ಯಲ್ಲಪ್ಪ ನಾಗೂರ ಅವರನ್ನು ‘ಕೊರೊನಾ ಸೇನಾನಿ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.

ಬೆಳಗ್ಗೆ ೧೧.೪೫ ಕ್ಕೆ ‘ಶಿಕ್ಷಕರ ಕರ್ತವ್ಯಗಳು ಪ್ರಸ್ತುತ ಸವಾಲುಗಳು’ ಕುರಿತ ಮೊದಲ ಗೋಷ್ಠಿಯಲ್ಲಿ ವಾಗ್ಮಿ ಪಂಡಿತ ನೆಲ್ಲಗಿ ವಿಚಾರ ಮಂಡನೆ ಮಾಡಲಿದ್ದು, ಸಂಶೋಧಕ ಮುಡುಬಿ ಗುಂಡೇರಾವ ಅಧ್ಯಕ್ಷತೆ ವಹಿಸಲಿದ್ದಾರೆ. ಶಿಕ್ಷಕರ ಸಂಘದ ಪ್ರಮುಖರಾದ ದೇವೇಂದ್ರಪ್ಪ ಗಣಮುಖಿ, ಪರಮೇಶ್ವರ ಓಕಳಿ, ಶಿವಪುತ್ರಪ್ಪ ಕರಣೀಕ್, ನರಸಪ್ಪ ಬಿರಾದಾರ, ಮಲ್ಲೇಶಿ ನಾಟಿಕಾರ ಉಪಸ್ಥಿತರಿರುವರು.

ಮಧ್ಯಾಹ್ನ ೧.೩೦ ಕ್ಕೆ ಪ್ರಸಿದ್ಧ ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಅಧ್ಯಕ್ಷತೆಯಲ್ಲಿ ನಡೆಯುವ ‘ಕಾವ್ಯ ಶಿಕ್ಷಣ’ ವಿಶೇಷ ಕವಿಗೋಷ್ಠಿಗೆ ಸಾಹಿತಿ ಜಗನ್ನಾಥ ಎಲ್.ತರನಳ್ಳಿ ಚಾಲನೆ ನೀಡಲಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯ ಎಸಿಪಿ ಸುಧಾ ಆದಿ, ಶಿಕ್ಷಕರ ಸಂಘದ ಚಂದ್ರಕಾಂತ ಬಿರಾದಾರ, ಚಂದ್ರಶೇಖರ ಪಾಟೀಲ ಯಳಸಂಗಿ, ಮಹೇಶ ಅಂಜುಟಗಿ ಉಪಸ್ಥಿತರಿರುವರು. ಸುಮಾರು ೧೨ ಜನ ಶಿಕ್ಷಕ ಕವಿಗಳು ಕವನ ವಾಚಿಸಲಿದ್ದಾರೆ.

ಮಧ್ಯಾಹ್ನ ೨.೪೫ ಕ್ಕೆ ಹಿರಿಯ ಶಿಕ್ಷಕ ಸಾಹಿತಿ ದತ್ತಾತ್ರೇಯ ವಿಶ್ವಕರ್ಮ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆದರ್ಶ ಶಿಕ್ಷಕ ಸಿದ್ಧಲಿಂಗ ಬಾಳಿ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಶಿಕ್ಷಕರ ಸಂಘದ ಬಾಬು ಮೌರ್ಯ, ಭಾನುಕುಮಾರ ಗಿರೆಗೋಳ, ರವಿ ಹೂಗಾರ ಮಾಡಿಯಾಳ ಉಪಸ್ಥಿತರಿರುವರು. ಶಿಕ್ಷಕ ವೃತ್ತಿಯಲ್ಲಿದ್ದುಕೊಂಡು ಸಾಮಾಜಿಕ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಸುಮಾರು ೨೦ ಕ್ಕೂ ಹೆಚ್ಚು ಪ್ರತಿಭಾವಂತರನ್ನು ಇದೇ ಸಂದರ್ಭದಲ್ಲಿ ವಿಶೇಷವಾಗಿ ಗೌರವಿಸಲಾಗುವುದೆಂದು ತೇಗಲತಿಪ್ಪಿ ವಿವರಣೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಶಿವಾನಂದ ಪೂಜಾರಿ ಬಳೂರಗಿ, ಸುರೇಶ ಬಡಿಗೇರ, ಶ್ರೀಕಾಂತ ಪಾಟೀಲ ತಿಳಗೂಳ, ಪ್ರಭವ ಪಟ್ಟಣಕರ್, ಶಿವರಾಜ್ ಅಂಡಗಿ, ಸಂತೋಷ ಕುಡಳ್ಳಿ, ಮಂಜುನಾಥ ಕಂಬಳಿಮಠ, ಶಿವಾನಂದ ಮಠಪತಿ, ಡಾ.ಶರಣರಾಜ್ ಛಪ್ಪರಬಂದಿ, ರವೀಂದ್ರ ಭಂಟನಳ್ಳಿ ಇತರರು ಉಪಸ್ಥಿತರಿದ್ದರು.

2 ಕಾಮೆಂಟ್ಗಳನ್ನು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here