ಶಹಾಬಾದ:ನಗರದಿಂದ ಹಾದು ಹೋಗಿರುವ ಕಲಬುರಗಿ ಶಹಾಗಾದ ರಾಷ್ಟ್ರೀಯ ಹೆದ್ದಾರಿಯಲ್ಲಿ (ಎನ್.ಹೆಚ್-150) ಹೊಂಡದಂತಹ ಗುಂಡಿಗಳು ಬಿದ್ದು ಪ್ರಯಾಣಿಕರು ಸಂಚರಿಸದಂತಹ ಪರಿಸ್ಥಿತಿ ಎದುರಾಗಿದೆ.
ರಾಷ್ಟ್ರೀಯ ಹೆದ್ದಾರಿ ಭಂಕೂರ, ದೇವನ ತೆಗನೂರ, ಮರತೂರ, ದರ್ಮಾಪೂರ, ನಂದೂರ ಗ್ರಾಮಗಳ ಮಾರ್ಗವಾಗಿ ಕಲಬುರಗಿ ಜಿಲ್ಲಾ ಕೇಂದ್ರಕ್ಕೆ ಹಾದು ಹೋಗಿದೆ. ಆದರೆ ಸಮರ್ಪಕವಾಗಿ ಹೆದ್ದಾರಿ ದುರಸ್ತಿ ಕಾರ್ಯಗಳು ಆಗದೆ ಇರುವುದರಿಂದ ದೇವನ ತೆಗನೂರ ಗ್ರಾಮ, ನಂದೂರ ಗ್ರಾಮ ಹಾಗೂ ಕಲಬುರಗಿ ರಾಜಾಪೂರ ವೃತ್ತದವರೆಗಿನ ರಾಷ್ಟ್ರೀಯ ಹೆದ್ದಾರಿಯ ಉದ್ದಗಲಕ್ಕೂ ಹೊಂಡದಾಕಾರದ ದೊಡ್ಡ ಗುಂಡಿಗಳು ಬಿದ್ದಿವೆ. ಈ ಹೆದ್ದಾರಿ ವಾಣಿಜ್ಯ ರಸ್ತೆಯಾಗಿರುವುದರಿಂದ ಪ್ರತಿನಿತ್ಯಇಲ್ಲಿ ಸಾವಿರಾರು ವಾಹನಗಳು ಸಂಚಾರಿಸುತ್ತವೆ. ಹೀಗೆ ಸಂಚಾರ ಮಾಡುವ ಪ್ರಯಾಣಿಕರ ವಾಹನಗಳು ಸೇರಿದಂತೆ ದ್ವಿಚಕ್ರ ಸವಾರರು, ಆಟೋ, ಗೂಡ್ಸ್ ವಾಹನಗಳು, ಲಾರಿ, ಬಸ್, ಟ್ರ್ಯಾಕ್ಟರ್ ಮುಂತಾದ ವಾಹನಗಳ ಸಂಚಾರಕ್ಕೆ ಸಂಚಕಾರ ಉಂಟಾಗಿದೆ.
ಹೆದ್ದಾರಿಗಳಲ್ಲಿ ಬಿದ್ದ ಗುಂಡಿಗಳನ್ನು ತಪ್ಪಿಸಲು ಹೋಗಿ ಅನೇಕ ಬೈಕ್ ಸವಾರರು ಪರಸ್ಪರ ಡಿಕ್ಕಿಹೊಡೆದುಕೊಂಡಿದ್ದಾರೆ. ಬಸ್ಸುಗಳು, ಲಾರಿಗಳು, ಇಲ್ಲಿ ಅಪಘಾತಕ್ಕೀಡಾಗುತ್ತಿವೆ. ಈ ಅಪಘಾತಗಳಿಂದ ಸಾವು-ನೋವುಗಳು ಸಂಭವಿಸಿವೆ. ಅನೇಕರು, ಕೈ- ಕಾಲುಗಳನ್ನು ಕಳೆದುಕೊಂಡಿದ್ದಾರೆ.
ತಮ್ಮದಲ್ಲದ ತಪ್ಪಿಗೆ ಈ ಹೆದ್ದಾರಿ ಮೇಲೆ ಪ್ರಯಾಣಿಸುವ ಪ್ರಯಾಣಿಕರು ಜೀವ ಕಳೆದುಕೊಳ್ಳುವಂತಾಗಿದೆ.
ಜಿಲ್ಲಾ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ನಂತರ ಕಾಲಕಾಲಕ್ಕೆ ರಾಷ್ಟ್ರೀಯ ಹೆದ್ದಾರಿಯನ್ನು ದುರಸ್ತಿ ಮಾಡದೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಇಲಾಖೆಯವರು ನಿರ್ಲಕ್ಷ್ಯ ತೋರುತ್ತಿದ್ದಾರೆ ಗ್ರಾಮಸ್ಥರು ಹಾಗೂ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೆದ್ದಾರಿಯಲ್ಲಿ ದೊಡ್ಡದೊಡ್ಡ ಗುಂಡಿಗಳು ಬಿದ್ದಿವೆ.ಅಲ್ಲದೇ ಬುತೇಕ ಕಡೆಗಳಲ್ಲಿ ರಸ್ತೆ ಮೇಲಿನ ಪದರು ಕಿತ್ತುಕೊಂಡು ನಾಲೆಗಳಂತಾಗಿವೆ.ಇದರಿಂದ ರಸ್ತೆಯ ಮೇಲೆ ಹೊರಡುವ ವಾಹನ ಆಯಾ ತಪ್ಪುತ್ತಿವೆ.ಇದರಿಂದ ರಸ್ತೆಯಲ್ಲಿ ಸಂಚಾರ ಮಾಡಲು ಭಯವಾಗುತ್ತಿದೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಹಾಗೂ ರಸ್ತೆ ಮೇಲಿನ ಪದರು ಕಿತ್ತುಕೊಂಡು ನಾಲೆಗಳನ್ನು ತಕ್ಷಣವೇ ಮುಚ್ಚಬೇಕು. ಇಲ್ಲದಿದ್ದರೆ ಹೆದ್ದಾರಿಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಹೆದ್ದಾರಿ ಪ್ರಯಾಣದ ಸುಗಮ ಸಂಚಾರದ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಈಗಾಗಲೇ ರಸ್ತೆಯ ಮೇಲೆ ಬಿದ್ದ ದೊಡ್ಡ ಗುಂಡಿಯಿಂದ ಸುಮಾರು ನಾಲ್ಕು ಜನ ಪ್ರಾಣ ಕಳೆದುಕೊಂಡಿರುವುದು ಕಣ್ಣಾರೆ ಕಂಡಿದ್ದೆನೆ. ಕೂಡಲೇ ಗುಂಡಿಯನ್ನು ಮುಚ್ಚಬೇಕು.ಅಲ್ಲದೇ ರಸ್ತೆಯ ನಿರ್ವಹಣೆ ಮಾಡಬೇಕು.ಇಲ್ಲದಿದ್ದರೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗುವುದು- ಕಿರಣ ಕೋರೆ ಪ್ರಯಾಣಿಕ ಶಹಾಬಾದ.
ರಸ್ತೆಯ ಮೇಲೆ ಗುಂಡಿ, ಎಲ್ಲೆಂದರಲ್ಲಿ ಪದರುಗಳು ಕಿತ್ತುಕೊಂಡು ಸಣ್ಣ ನಾಲೆಗಳಂತಾಗಿದೆ.ಇದರಿಂದ ರಸ್ತೆಯ ಚಕ್ರ ನಾಲೆಗಳಲ್ಲಿ ಹೋಗಿ ಆಯಾ ತಪ್ಪುತ್ತಿದೆ.ಇದರಿಂದ ಅಪಘಾತಗಳಾಗಿವೆ.ಇದಕ್ಕೆ ರಾಷ್ಟ್ರೀಯ ಹೆದ್ದಾರಿಯವರೇ ನೇರ ಹೊಣೆ.ಕೂಡಲೇ ಸರಿಪಡಿಸಬೇಕು- ಡಾ.ಎಡಿಸನ್ ಶಹಾಬಾದ.