ವಾಡಿ: ಪಟ್ಟಣದ ಮುಖ್ಯ ರಸ್ತೆ ಬದಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾಗಿರುವ ಕೋಟಿ ರೂಪಾಯಿ ವೆಚ್ಚದ ಮುಖ್ಯ ಚರಂಡಿ ಗೋಡೆ ಬಿದ್ದು ಎಂಟು ವರ್ಷ ಕಳೆದಿದೆ. ದುರಸ್ಥಿ ಮಾಡುವಲ್ಲಿ ಪುರಸಭೆ ಆಡಳಿತ ಸುದೀರ್ಘ ನಿರ್ಲಕ್ಷ್ಯ ತೋರಿದೆ. ಹತ್ತು ದಿನದಲ್ಲಿ ಬಿದ್ದ ಚರಂಡಿ ಎತ್ತದಿದ್ದರೆ ಅದೇ ಸ್ಥಳದಲ್ಲಿ ಧರಣಿ ಕುಳಿತು ರಸ್ತೆ ತಡೆ ನಡೆಸುವುದಾಗಿ ಪುರಸಭೆಯ ವಿರೋಧ ಪಕ್ಷದ ನಾಯಕ, ಬಿಜೆಪಿ ಮುಖಂಡ ಭೀಮಶಾ ಜಿರೊಳ್ಳಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮುಖ್ಯಾಧಿಕಾರಿ ಡಾ.ಚಿದಾನಂದಸ್ವಾಮಿ ಅವರಿಗೆ ಮನವಿಪತ್ರ ಸಲ್ಲಿಸಿರುವ ಭೀಮಶಾ, ಪುರಸಭೆಯ ಕಾಂಗ್ರೆಸ್ ಆಡಳಿತದ ಧಿವ್ಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುರಸಭೆ ವ್ಯಾಪ್ತಿಯ ವಾರ್ಡ್-೧೩ರ ಮುಖ್ಯ ರಸ್ತೆಬದಿಯ ಮೆಥೋಡಿಸ್ಟ್ ಚರ್ಚ್ ಮಾರ್ಗದಲ್ಲಿ ದೊಡ್ಡ ಚರಂಡಿ ಗೋಡೆ ಬಿದ್ದಿದೆ. ಮಕ್ಕಳು, ವೃದ್ದರು ನಡೆದಾಡಲು ಕಷ್ಟವಾಗುತ್ತಿದೆ. ಗಬ್ಬು ವಾಸನೆಯಿಂದ ಜನರು ಬೇಸತ್ತಿದ್ದಾರೆ. ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಅಪಯಕಾರಿ ಚರಂಡಿಯನ್ನು ಕೂಡಲೇ ದುರಸ್ಥಿಗೊಳಿಸಬೇಕು. ಶ್ರೀನಿವಾಸಗುಡಿ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ ವಿಪರೀತ ಹದಗೆಟ್ಟಿರುವ ಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು. ರಿಪೇರಿ ಕಾಣದೆ ಕಳೆದ ಐದಾರು ವರ್ಷಗಳಿಂದ ಕೆಟ್ಟುನಿಂತಿರುವ ವಿವಿಧ ವೃತ್ತಗಳ ಹೈಮಾಸ್ಟ್ ದೀಪಗಳನ್ನು ಪುನಹ ಬೆಳಕು ನೀಡುವಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ನಗರದ ಮುಖ್ಯ ರಸ್ತೆಗಳು ಹದಗೆಟ್ಟು ಗುಂಡಿಗಳು ಬಿದ್ದರೂ ಯಾರೂ ಕೇಳದಂತಾಗಿದೆ. ಸಿಮೆಂಟ್ ರಸ್ತೆಗಳು ಬಿರುಕು ಬಿಟ್ಟು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದರೂ ಸಂಬಂದಿಸಿದ ಅಧಿಕಾರಿಗಳು ಮೌನವಾಗಿದ್ದಾರೆ. ಹೈಮಾಸ್ಟ್ ದೀಪಗಳು ಕೆಟ್ಟು ವೃತ್ತಗಳು ಕಗ್ಗತ್ತಲ ಕೂಪವಾಗಿದ್ದರೂ ಜನರ ಗೋಳಾಟ ಪುರಸಭೆ ಆಡಳಿತಕ್ಕೆ ಅರಿವಿಲ್ಲ. ಜನರು ನಾನಾ ಸಮಸ್ಯೆಗಳಿಂದ ಕಷ್ಟಕ್ಕೀಡಾಗುತ್ತಿರುವುದನ್ನು ಕಾಂಗ್ರೆಸ್ ಸದಸ್ಯರು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಹತ್ತು ದಿನಗಳ ಒಳಗಾಗಿ ಬೇಡಿಕೆಗಳು ಈಡೇರದಿದ್ದರೆ ಸೆ.೨೩ ರಂದು ಬಿದ್ದ ಚರಂಡಿಯ ಜಾಗದಲ್ಲಿ ರಸ್ತೆ ತಡೆದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.