ದಾಸ್ಯ ಕಳಚಿದ ಹೈಕ ವಿಮೋಚನಾ ಕ್ರಾಂತಿ

0
39
-ಡಾ. ಶಿವರಂಜನ್ ಸತ್ಯಂಪೇಟೆ

ಬ್ರಿಟಿಷ್‌ರ ಕಪಿಮುಷ್ಠಿಯಲ್ಲಿದ್ದ ಭಾರತಕ್ಕೆ ೧೯೪೭ ಆಗಸ್ಟ್ ೧೭ರಂದು ಸ್ವಾತಂತ್ರ್ಯ ದೊರಕಿತು. ಸ್ವಾತಂತ್ರ್ಯಾ ನಂತರ ದಿಲ್ಲಿಯ ಕೆಂಪು ಕೋಟೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿತು. ವಂದೇಮಾತರಂ, ಜನಗಣಮನ ಮೊಳಗಿದವು. ಆದರೆ ಹೈದರಾಬಾದ್ ಸಂಸ್ಥಾನದಲ್ಲಿ ಮಾತ್ರ ತ್ರಿವರ್ಣ ಧ್ವಜ, ವಂದೇಮಾತರಂ, ಜನಗಣಮನ ರಾಷ್ಟ್ರಗೀತೆ, ರಾಷ್ಟ್ರನಾಯಕರ ಭಾವಚಿತ್ರಗಳು ಹಾರಾಡಲಿಲ್ಲ. ಇವೆಲ್ಲ ರಾಜದ್ರೋಹದ ಸಂಕೇತವೆಂದು ಬಹಿಷ್ಕೃತವಾದವು. ಏಕೆಂದರೆ ಇಡೀ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದರೂ ಈ ಭಾಗ ಮಾತ್ರ ಆಗ ಹೈದರಾಬಾದ್ ಸಂಸ್ಥಾನದ ನಿಜಾಮ ಮೀರ್ ಉಸ್ಮಾನ್ ಅಲಿ ಖಾನ್ ಬಹುದ್ದೂರ್ ಆಡಳಿತಕ್ಕೆ ಒಳಪಟ್ಟಿತ್ತು. ಭಾರತ ಒಕ್ಕೂಟದಲ್ಲಿ ಸೇರಲು ನಿರಾಕರಿಸಿ ತಾನು ಹೈದರಾಬಾದ್ ಸಂಸ್ಥಾನ ಸ್ವತಂತ್ರವಾಗಿ ಉಳಿಸಿಕೊಳ್ಳುವುದಾಗಿ ಘೋಷಿಸಿಕೊಂಡಿದ್ದ.

ಇತ್ತಿಹಾದುಲ್ ಮುಸ್ಲಿಂ ಸಂಘನೆಯ ನಾಯಕನಾದ ಕಾಶಿಂ ರಜವಿಯ ಮಾತುಗಳಿಗೆ ಕಟ್ಟುಬಿದ್ದ ನಿಜಾಮ, ಅವನಿಗೆ ಅಧಿಕಾರ ನೀಡಿದ್ದ. ಆತ ಪೊಲೀಸ್ ಹಾಗೂ ಮಿಲಿಟರಿಯ ಹೊರತಾದ ಖಾಸಗಿ ಸೇನೆಯನ್ನು ಹುಟ್ಟು ಹಾಕಿದ. ಸಮವಸ್ತ್ರವಿಲ್ಲದ ಈ ಖಾಸಗಿ ಸೇನೆಯನ್ನು ರಜಾಕಾರರು ಎಂದು ಕರೆಯುತ್ತಿದ್ದು, ಈ ಮತಾಂಧ ರಜಾಕಾರರು ಆಗ ಅನೇಕ ಮುಗ್ಧ ಜನರ ಪಾಲಿನ ರಾಕ್ಷಸರಾದರು. ರಜಾಕಾರ ಪಡೆಯ ಹುಚ್ಚಾಟ ಹಾಗೂ ಉಪಟಳದಿಂದಾಗಿ ಜನ ತತ್ತರಿಸಿ ಹೋದರು. ಇಲ್ಲಿಂದಲೇ ಈ ಭಾಗದ ಜನರ ನಿಜವಾದ ಸ್ವಾತಂತ್ರ್ಯ ಚಳವಳಿ ಆರಂಭವಾಗುತ್ತದೆ. ಈ ಹೈದರಾಬಾದ್ ವಿಮೋಚನಾ ಹೋರಾಟಕ್ಕೆ ರಜಾಕಾರರ ಚಳವಳಿ, ರಜಾಕಾರ ಸಪಾಟಿ, ಲುಚಾರಿ, ಪೊಲೀಸ್ ಆಕ್ಷನ್, ಮಿಲ್ಟ್ರಿ ಆಕ್ಷನ್ ಎಂದೆಲ್ಲ ಕರೆಯಲಾಗುತ್ತಿದೆ.

Contact Your\'s Advertisement; 9902492681

ಹಿನ್ನೆಲೆ: ಭಾರತದಲ್ಲಿಯೇ ಅತ್ಯಂತ ಬಲಿಷ್ಠ, ಹೆಚ್ಚು ವಿಸ್ತಾರ ಮತ್ತು ಶ್ರೀಮಂತ ಸಂಸ್ಥಾನವೆಂದು ಹೈದರಾಬಾದ್ ಸಂಸ್ಥಾನವನ್ನು ಗುರುತಿಸಲಾಗುತ್ತಿತ್ತು. ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ ಪ್ರದೇಶಗಳು ಹೈದರಾಬಾದ್ ಸಂಸ್ಥಾನದ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದವು. ಮೈಸೂರು ಪ್ರಾಂತ ಮತ್ತು ಮರಾಠಾ ಪ್ರಾಂತ ಸಂಸ್ಥಾಪಕರ ಆಕ್ರಮಣವನ್ನು ತಡೆಯುವುದಕ್ಕಾಗಿ ಹೈದರಾಬಾದ್ ಸಂಸ್ಥಾನದ ಸ್ಥಾಪಕ ಮೀರ್ ಖಮರುದ್ಧೀನ್ ಟೆನ್ ಖಿಲಿಚ್ ಖಾನ್ ಬ್ರಿಟಿಷ್ ಗವರ್ನರ್ ಜನರಲ್ ಲಾರ್ಡ್ ವೆಲ್‌ಸ್ಲಿಯ ಸಹಾಯಕ ಸೈನ್ಯ ಪದ್ಧತಿ ಒಪ್ಪಂದಕ್ಕೆ ಸಹಿ ಹಾಕಿದ. ನಿಜಾಮ ಬ್ರಿಟಿಷ್‌ರಿಗೆ ಸಹಕಾರ ನೀಡಿದ್ದರಿಂದ ಹೈದರಾಬಾದ್ ಸಂಸ್ಥಾನವನ್ನು ಅವನಿಗೆ ಕಾಣಿಕೆ ನೀಡಿದ್ದರು. ಇದರಿಂದಾಗಿ ಸಹಜವಾಗಿ ಆತ ಈ ಭಾಗದಲ್ಲಿ ತನ್ನ ಪ್ರಭುತ್ವ ಸಾಧಿಸಿದ್ದ. ಟಿಪ್ಪು ಸಲ್ತಾನ ಸೋತ ನಂತರ ನಿಜಾಮ ಕೊನೆಗೆ ಭಾರತದ ಒಕ್ಕೂಟದೊಂದಿಗೆ ಒಪ್ಪಂದ ಮಾಡಿಕೊಂಡ. ಅಲ್ಲಿಯವೆರೆಗೆ ಈ ಭಾಗದಲ್ಲಿ ಆತನದೇ ಪಾರುಪತ್ಯವಿತ್ತು. ಕೊಲೆ, ಸುಲಿಗೆ, ದರ್ಪ, ಧರೋಡೆ ಈ ಮುಂತಾದ ಪೈಶಾಚಿಕ ಕೃತ್ಯಗಳು ಸಹ ನಡೆದು ಹೋದವು. ಇದರಿಂದಾಗಿ ಈ ಭಾಗದ ಜನ ನಲುಗಿ ಹೋದರು.

ಕೋಮು ದಳ್ಳುರಿ: ನಿಜಾಮ ಸರ್ಕಾರದ ಕಾಶಿಂ ರಜವಿಯ ಸೈನಿಕರು ಕಳವು, ಧರೋಡೆ, ಲೂಟಿ, ಮಹಿಳೆಯರ ಮೇಲೆ ಅತ್ಯಾಚಾರ, ಅನ್ಯಾಯ, ಅಕ್ರಮದಂತಹ ಅನೇಕ ದೌರ್ಜನ್ಯ-ದಬ್ಬಾಳಿಕೆಯನ್ನು ಯಾವ ಅಳುಕಿಲ್ಲದೆ ಮುಂದುವರಿಸಿದರು. ಅವರನ್ನು ಮಣಿಸಲು ಯಾರೂ ಇರಲಿಲ್ಲ. ಅವರಿಗೆ ಹೇಳುವವರು-ಕೇಳುವವರು ಯಾರೂ ಇರಲಿಲ್ಲ. ರಾಜಕೀಯ ಅಸ್ಥಿರತೆಯಿಂದಾಗಿ ಅರಾಜಕತೆ ಉಂಟಾಯಿತು. ಇದು ಕೋಮು ದಳ್ಳುರಿಗೆ ಎಡೆ ಮಾಡಿಕೊಟ್ಟಿತು. ಆಗ ಇಲ್ಲಿನ ಜನ ರೊಚ್ಚಿಗೆದ್ದರು. ರಜಾಕರರ ವಿರುದ್ಧ ಧಂಗೆ ಎದ್ದರು. ಅನೇಕ ಸಂಘ-ಸಂಸ್ಥೆಗಳನ್ನು ಕಟ್ಟಿಕೊಂಡರು. ಗೌಪ್ಯವಾಗಿ ಸಭೆ-ಸಮಾರಂಭಗಳನ್ನು ನಡೆಸುತ್ತಿದ್ದರು. ಗಡಿ ಭಾಗಗಳಲ್ಲಿ ಶಿಬಿರಗಳನ್ನು ಸ್ಥಾಪಿಸಿ ಜನರನ್ನು ಜಾಗೃತಗೊಳಿಸಿದರು. ನಿಜಾಮನ ಒಡೆದು ಆಳುವ ನೀತಿ, ಜಿನ್ನಾನ ಜೊತೆಗಿನ ಸಂಬಂಧ, ಇತ್ತೇಹಾದ ಹಾಗೂ ರಜಾಕರರ ಹಾವಳಿ ಇತ್ಯಾದಿಗಳಿಂದ ರೋಸಿ ಹೋದರು. ಆಗ ಈ ಭಾಗದಲ್ಲಿ ನಡೆದ ಒಂದೊಂದು ಘಟನೆಗಳು, ಹೋರಾಟಗಳು ಮೈ ನವಿರೇಳಿಸುವಂತಿವೆ. ನಿಜಾಮನ ಸಾರ್ವಭೌಮತ್ವವನ್ನು ಧಿಕ್ಕರಿಸಿ ಹೈದರಾಬಾದ್ ಪ್ರಾಂತ ವಿಲೀನಕ್ಕಾಗಿ ಕೈಗೊಂಡ ಈ ಚಳವಳಿ ಸಂಪೂರ್ಣ ಕ್ರಾಂತಿಕಾರಕವಾಗಿದೆ.

ಹೋರಾಟ: ಬಾಂಬೆ ಮತ್ತು ಮದ್ರಾಸ್ ಗಡಿಗುಂಟ ೧೦೦ ಶಿಬಿರಗಳನ್ನು ಆರಂಭಿಸಿದರು. ಪ್ರತಿಯೊಂದು ಶಿಬಿರದಲ್ಲಿ ೨೫ರಿಂದ ೧೨೫ ಸ್ವಾತಂತ್ರ್ಯ ಸೇನಾನಿಗಳು ಕಾರ್ಯ ನಿರ್ವಹಿಸುತ್ತಿದ್ದರು. ಇವರೆಲ್ಲ ಆಗ ಬುಡಬುಡಿಕೆ, ಬುರ್ಖಾ, ಕೌಲೆತ್ತು, ಕಣಿ ಹೇಳುವ ವೇಷ ಹಾಕಿಕೊಂಡು ರಜಾಕರ, ಮಿಲಿಟರಿ ಹಾಗೂ ನಿಜಾಂ ಪೊಲೀಸರ ಚಟುವಟಿಕೆಗಳನ್ನು ಗಮನಿಸಿ ಆಯುಧ ಶಿಬಿರಾರ್ಥಿಗಳಿಗೆ ಗುಪ್ತವಾಗಿ ಮಾಹಿತಿ ರವಾನಿಸುತ್ತಿದ್ದರು. ಹೀಗೆ ಶಸ್ತ್ರಸ್ತ್ರಗಳ ಹೋರಾಟಕ್ಕೂ ಮುಂದಾದರು. ಈ ಭಾಗದ ಸರದಾರ ಶರಣಗೌಡ ಇನಾಮದಾರ, ಚೆನ್ನಬಸಪ್ಪ ಕುಳಗೇರಿ, ರಾಜಾ ವೆಂಕಟಪ್ಪ ನಾಯಕ, ದತ್ತಾತ್ರೇಯ ಅವರಾದಿ, ಕನಿಹಾಳ್, ಶಿವಮೂರ್ತಿ ಸ್ವಾಮಿ ಅಳವಂಡಿ, ಡಾ. ಚುರ್ಚಿಹಾಳ ಮಠ, ರಾಮಚಂದ್ರ ವೀರಪ್ಪ, ಕಪ್ಪತಪ್ಪ ಬೇಳೆ, ವಿ.ವಿ. ಪಾಟೀಲ, ಆರ್.ವಿ. ಬಿಡಪ್, ಮಟಮಾರಿ ನಾಗಪ್ಪ, ಚಂದ್ರಶೇಖರ ಪಾಟೀಲ, ಹಕ್ಕಿಕತ್‌ರಾವ್ ಚಿಟಗುಪ್ಪಕರ್, ಅಮರಸಿಂಹ ರಾಠೋಡ್, ಪುಂಡಲೀಕಪ್ಪ ಜ್ಞಾನಮೋಟೆ ಮುಂತಾದವರು ಸಿಂದಗಿ, ತಾಳಿಕೋಟೆ, ಮುಂಡರಗಿ, ಗಜೇಂದ್ರಗಡ, ಇಟಗಿ, ದುಧನಿ, ಕೇಸರ ಜವಳಗಾದಲ್ಲಿ ಸಂಘಟಿಸಲಾದ ಶಿಬಿರಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು.
ಜಗನ್ನಾಥರಾವ ಚಂಡ್ರಕಿ, ಹಣಮಂತರಾವ ಕಕ್ಕೇರಿ, ಗಂಗಾಧರ ನಮೋಶಿ, ಕೊಲ್ಲೂರು ಮಲ್ಲಪ್ಪ, ವಿ.ಪಿ. ದೇವಳಗಾಂವಕರ್, ವಿದ್ಯಾಧರ ಗುರೂಜಿ, ವಿಶ್ವನಾಥರೆಡ್ಡಿ ಮುದ್ನಾಳ, ಅಣ್ಣಾರಾವ ಗಣಮುಖಿ, ಹಣಮಂತರಾವ ಹಾಗರಗಿ, ವೀರಣ್ಣ ತಿಮ್ಮಾಜಿ ಮುಂತದವರಲ್ಲದೆ ಅನೇಕ ಜನ ಸ್ತ್ರೀಯರು ಸಹ ಸ್ವಾತಂತ್ರ್ಯದ ಕಿಚ್ಚು ಹಚ್ಚಿಕೊಂಡು ತಮ್ಮ ಕೆಚ್ಚು ಪ್ರದರ್ಶಿಸಿದರು ಮಾತ್ರವಲ್ಲ ಶ್ರೀ ಸಾಮಾನ್ಯರು ಕೂಡ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.

ಹುಟ್ಟಿದ ಊರು ವಿಜಯಪುರ ಬಿಟ್ಟು ಬಂದಸ್ವಾಮಿ ರಮಾನಂದ ತೀರ್ಥರು ಈ ಭಾಗವನ್ನೇ ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡು ವಿಮೋಚನೆಗೆ ಹೋರಾಡಿದವರಲ್ಲಿ ಪ್ರಮುಖರಾಗಿದ್ದಾರೆ. ಬೀದರ್ ಜಿಲ್ಲೆಯ ಭಾಲ್ಕಿಯ ಚೆನ್ನಬಸವ ಪಟ್ಟದ್ದೇವರು ತಮ್ಮ ಹಿರೇಮಠದ ಹೊರಗಡೆ ಉರ್ದು ಬೋರ್ಡ್ ಹಾಕಿ ಕನ್ನಡದಲ್ಲಿ ಅಕ್ಷರ ಕಲಿಸುತ್ತಿದ್ದರು. ಕಲಬುರಗಿಯ ದೊಡ್ಡಪ್ಪ ಅಪ್ಪ ಅವರು ತಮ್ಮ ಶರಣಬಸವೇಶ್ವರ ಸಂಸ್ಥಾನದ ವತಿಯಿಂದ ಹೆಣ್ಣು ಮಕ್ಕಳಿಗಾಗಿ ಶಾಲೆ ಆರಂಭಿಸಿದ್ದರು.

ಬಿಡುಗಡೆಯ ಭಾಗ್ಯ: ಭಾರತದ ಬಹುತೇಕ ಪ್ರದೇಶಗಳು ಒಕ್ಕೂಟ ವ್ಯವಸ್ಥೆಯಲ್ಲಿ ವಿಲೀನಗೊಂಡಿದ್ದರೂ ಹೈದರಾಬಾದ್ ಸಂಸ್ಥಾನ ಮಾತ್ರ ವಿಲೀನವಾಗದಿರುವುದು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕ್ರೌರ‍್ಯ, ಹಿಂಸೆ, ಕೋಮು ಗಲಭೆ ಇತ್ಯಾದಿ ಸಂಗತಿಗಳನ್ನು ಗಮನಿಸಿದ ಭಾರತ ಸರ್ಕಾರದ ಅಂದಿನ ಉಪ ಪ್ರಧಾನಿ ಸರ್ದಾರ್ ವಲ್ಲಭಬಾಯಿ ಪಟೇಲರು ಸೆ. ೧೩, ೧೯೪೮ರಂದು ಐತಿಹಾಸಿಕ ಪೊಲೀಸ್ ಕಾರ್ಯಾಚರಣೆಗೆ ಆಜ್ಞೆ ಮಾಡಿದರು. ಜನರಲ್ ಚೌಧರಿಯವರ ನಾಯಕತ್ವದಲ್ಲಿ ಭಾರತೀಯ ಸೇನೆ ನಿಜಾಮ ರಾಜ್ಯದ ಮೇಲೆ ದಾಳಿ ಮಾಡಿತು. ನಿಜಾಮ ಶರಣಾಗತನಾಗಿ ಭಾರತದ ಒಕ್ಕೂಟವನ್ನು ಸೇರುವ ಪತ್ರಕ್ಕೆ ಸಹಿ ಮಾಡಿದನು. ಅನೇಕರ ಹೋರಾಟ ತ್ಯಾಗ ಬಲಿದಾನದ ಫಲವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ೧೯೪೮ ಸೆಪ್ಟೆಂಬರ್ ೧೭ರಂದು ಸ್ವಾತಂತ್ರ್ಯ ದೊರಕಿತು. ಅಂದರೆ ಒಂದು ವರ್ಷ ಒಂದು ತಿಂಗಳು ಎರಡು ದಿನಗಳ ನಂತರ ಸ್ವಾತಂತ್ರ್ಯ ದೊರಕಿತು. ಅಂತೆಯೇ ಹೈದರಾಬಾದ್ ವಿಮೋಚನಾ ಚಳವಳಿ ಕಲ್ಯಾಣ ಕರ್ನಾಟಕ ಭಾಗದ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮವೆಂದು ಪ್ರಸಿದ್ಧಿಯಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here