ಕಲಬುರಗಿ: ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರೈತರ ಹೋರಾಟದ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಖಂಡಿಸಿ, ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ಇಂದು ವಿವಿಧ ರೈತಪರ ಸಂಘಟನೆಗಳು ಜಂಟಿಯಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕಳೆದ ಹತ್ತು ತಿಂಗಳಿಂದ ದೇಶದ ರಾಜಧಾನಿಯ ಗಡಿಗಳಲ್ಲಿ ತಮ್ಮ ಕುಟುಂಬ, ಜೀವನವನ್ನು ತೊರೆದು ಕೇಂದ್ರ ಸರ್ಕಾರದ ಕರಾಳ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ಹೋರಾಡುತ್ತಿದ್ದಾರೆ. ಬಂಡವಾಳಶಾಹಿಗಳ ಹಿತಾಸಕ್ತಿಗೆ ತಕ್ಕ ಹಾಗೂ ಕಾಯ್ದೆಗಳನ್ನು ಬದಲಿಸಲಾಗುತ್ತಿದೆ. ಈಗಾಗಲೇ ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಇಡೀ ದೇಶದ ಆರ್ಥಿಕತೆಯೇ ನಾಶವಾಗಿರುವಾಗ ಸರ್ಕಾರಗಳು ಬಂಡವಾಳಿಗರಿಗೆ ಯಥೇಚ್ಚ ಲಾಭಮಾಡಿಕೊಡಲು ತುದಿಗಾಲಲ್ಲಿ ನಿಂತಿದ್ದಾರೆ. ಹಾಗಾಗಿಯೇ ಪೆಟ್ರೋಲ್, ಡಿಸೇಲ್, ಅಡುಗೆ ಅನೀಲ, ಅಗತ್ಯವಸ್ತುಗಳ ಬೆಲೆಗಳನ್ನು ಹೆಚ್ಚಿಸಲಾಗಿದೆ. ಹೀಗೆ ದೇಶದ ಜನತೆಯ ಜೀವನವನ್ನು ಭೀಕರ ಸ್ಥಿತಿಗೆ ತಳ್ಳಿವೆ. ಇಂತಹ ಪರಿಸ್ಥಿತಿಯಲ್ಲಿ ಮೂರು ಕೃಷಿ ಕಾಯ್ದೆಗಳು, ವಿದ್ಯೂತ್ ಮಸೂದೆ ಹಾಗೂ ಬೆಂಬಲ ಬೆಲೆಗಾಗಿ ಹೋರಾಡುತ್ತಿರುವ ರೈತರು ಹಾಗೂ ಜನತೆಯನ್ನು ರಾಜಕೀಯ ಪ್ರೇರಿತ ಎಂದು ಆರೋಪಿಸಿ ಸರ್ಕಾರವು ಹೇಡಿತನವನ್ನು ಪ್ರದರ್ಶಿಸಿದೆ ಎಂದು ಹೋರಾಟಗಾರರು ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮೊದಲಿನಿಂದಲೂ ರೈತರ ಹೋರಾಟಗಳನ್ನು ಹತ್ತಿಕ್ಕಲು ಮಾಡಬಾರದ ಎಲ್ಲಾ ರೀತಿಯ ಕೀಳುಮಟ್ಟದ ಪ್ರಯತ್ನಗಳನ್ನು, ಕ್ರೂರ ದೌರ್ಜನ್ಯಗಳನ್ನು ಮಾಡುತ್ತಾ ಬಂದಿದೆ. ಒಂದು ವೇಳೆ ಈ ಹೋರಾಟವು ಪ್ರಾಯೋಜಿತವಾಗಿದ್ದರೆ ಬಿಜೆಪಿ ಸರ್ಕಾರವು ಇಷ್ಟೊಂದು ದಮನ ಮಾಡಲು ಮುಂದೆ ಬರುತ್ತಿಲಿಲ್ಲ. ಹಾಗೂ ಇಡೀ ರೈತಾಪಿ ಜನತೆ ಎಲ್ಲಾ ರಾಜಕೀಯ ಪಕ್ಷಗಳನ್ನು ತೊರೆದು ತಮ್ಮದೇ ಆದ ನಾಯಕತ್ವದಲ್ಲಿ ಬಿಜೆಪಿ ಸರ್ಕಾರದ ಕ್ರೂರ, ಅಮಾನವೀಯ ದೌರ್ಜನ್ಯಗಳನ್ನು ಎದುರಿಸಿ ಅತ್ಯಂತ ಘನತೆಯಿಂದ ಮತ್ತು ಸ್ವಾಭಿಮಾದಿಂದ, ಶಾಂತಿಯಿಂದ ಹೋರಾಡುತ್ತಿರುವ ಈ ಹೋರಾಡಲು ಸಾಧ್ಯವಾಗುತ್ತಿರಲಿಲ್ಲ. ರಾಜಕೀಯ ಪ್ರೇರಿತವಾಗಿದ್ದರೆ ಸುಮಾರು 600 ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಳ್ಳುವಂತಹ ಪ್ರಸಂಗ ಬರುತ್ತಿರಲಿಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯವರು ಹೇಳಿಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಂಡವಾಳಶಾಹಿಗಳ ಪರವಾಗಿ ತಮಗಿರುವ ನಿಷ್ಠೆಯನ್ನು ಸಾಬೀತು ಮಾಡಲು ಹೀನಾಯವಾದ ಪ್ರಯತ್ನಗಳನ್ನು ಮಾಡುತ್ತಿದೆ ಎಂದು
ಆರೋಪಿಸಿದರು.
ಅಸಲಿಗೆ ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ಹೋರಾಟದಿಂದ ಹೆದರಿಕೊಂಡಿವೆ. ತಮ್ಮ ಸ್ವಾಮಿಯಾದ ಬಂಡವಾಳಿಗರ ಸೇವೆಯನ್ನು ಮಾಡಬೇನ್ನುವ ಹಿತಾಸಕ್ತಿಗೆ ದಕ್ಕೆ ಬಂದು ನೆಮ್ಮದಿಯನ್ನಯ ಕಳೆದುಕೊಂಡಿದೆ. ವಾಸ್ತವವಾಗಿ ರೈತರ ಧೀರೋದಾತ್ತ ಐತಿಹಾಸಿಕ ಹೋರಾಟದಿಂದ ಹಾಗೂ ರೈತರ ಹೋರಾಟಕ್ಕೆ ಬೆಂಬಲಿಸಿ ಕೋಟ್ಯಾಂತರ ಜನತೆ ಈ ಹೋರಾಟದಲ್ಲಿ ಭಾಗವಹಿಸಿ ಮುಂದುವರೆಸುತ್ತಿರುವುದನ್ನು ನೋಡಿ ಆಳ್ವಿಕರು ಭಯಪಡುತ್ತಿದ್ದಾರೆ. ಈ ಹೋರಾಟವು ಈಗ ವಿರಾಟ ಸ್ವರೂಪವನ್ನು ಪಡೆಯುತ್ತಿದೆ. ಮುಂದಿನ ತಿಂಗಳು ನವೆಂಬರ್ 26 ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದ್ದು ಈ ಹೋರಾಟವನ್ನು ಗೆಲ್ಲುವವರೆಗೆ ಹಿಂತಿರುಗುವದಿಲ್ಲ ಎಂಬ ಪಣದೊಂದಿಗೆ ಮುನ್ನುಗ್ಗುತ್ತಿದ್ದಾರೆ ಎಂದು ತಿಳಿಸಿದರು.
ಈ ಹೋರಾಟದಲ್ಲಿ ಸಂಚಾಲಕರು ಹಾಗೂ ಅಧ್ಯಕ್ಷರು ಕೆಪಿಆರ್ಎಸ್ ಶರಣಬಸಪ್ಪ ಮನ್ ಶೆಟ್ಟಿ, ರಾಜ ನಾಯಕರು ಆಯ್ಕೆ ಹೋರಾಟ ಸಮಿತಿ ಬಿಆರ್ ಪಾಟೀಲ್, ರಾಜ ಕಾರ್ಯದರ್ಶಿಗಳು ಆರ್ ಕೆಎಸ್ ಹೆಚ್ ವಿ ದಿವಾಕರ್, ಸಂಚಾಲಕರು ಹಾಗೂ ಅಧ್ಯಕ್ಷರು ಎ ಐ ಕೆ ಎಸ್ ಮೌಲ್ ಮುಲ್ಲಾ, ಸಂಚಾಲಕರು ಹಾಗೂ ಜಿಲ್ಲಾ ಕಾರ್ಯದರ್ಶಿಗಳಾದ ಎಸ್ ಬಿ ಮಹೇಶ್,ನಾಗೇಂದ್ರ ತಂಬೆ, ಮಲ್ಲಣ್ಣ ಗೌಡ, ಎಸ್ಎ ಕೊಲ್ಲೂರು, ಶೌಕತ್ ಅಲಿ ಆಲೂರ್, ಹಾಗೂ ಅರ್ಜುನ್ ಗೊಬ್ಬುರ್, ರಾಜ್ಯ ರೈತ ಸಂಘ ಹಾಘೂ ಹಸಿರು ಸೇನೆಯ ರಾಜ್ಯ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್, ಜನವಾದಿ ಮಹಿಳಾ ಸಂಘದ ನೀಲಾ. ಕೆ., ಎಐಎಮ್‍ಎಸ್‍ಎಸ್ ನ ಜಿಲ್ಲಾ ಕಾರ್ಯದರ್ಶಿ ಗೌರಮ್ಮ ಸಿ.ಕೆ., ಹಾಗೂ ರಾಧಾ ಜಿ, ಎಂ. ಬಿ. ಸಜ್ಜನ್, ಉಮಾಪತಿ ಮಾಲಿಪಾಟೀಲ್, ಪಾಂಡುರಂಗ ಮಾನವೀಕರ್, ಸುಧಾಮ ಧನ್ನಿ, ಮಹೇಶ್ ಕುಮಾರ್ ರಾಠೋಡ್, ರಾಜ್ಯ ರೈತ ಸಂಘದ ಬಸ್ಸುಗೌಡ ಬಿರಾದರ್, ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಸಚಿನ್ ಫರತಾಬಾದ್, ರವಿ ಎನ್. ದೇಗಾಂವ್, ನವನಿರ್ಮಾಣ ಸೇನೆಯ ಶರಣಕುಮಾರ್ ಬಡಿಗೇರ್ ಮುಂತಾದವರು ಉಪಸ್ಥಿತರಿದ್ದರು.