ಕಲಬುರಗಿ: ರಂಗ ಸಂಗಮ ಕಲಾ ವೇದಿಕೆಯು ಕಳೆದ 9 ವರ್ಷಗಳಿಂದ ರಂಗಭೂಮಿ ಕ್ಷೇತ್ರದಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದು. ಶ್ರೀ ಎಸ್.ಬಿ. ಜಂಗಮಶೆಟ್ಟಿ ಸ್ಮರಣಾರ್ಥ ರಾಜ್ಯಮಟ್ಟದ ಹಿರಿಯ ರಂಗಕಲಾವಿದರನ್ನು ಗುರುತಿಸಿ ರಂಗ ಪ್ರಶಸ್ತಿ ನೀಡಲು ನಿರ್ಧರಿಸಿರುವಂತೆ, ಈ ಬಾರಿ ರಂಗಭೂಮಿಯಲ್ಲಿ ಅಪಾರ ಸೇವೆಸಲ್ಲಿಸಿದ ಮತ್ತು ನಾಟಕ ನಿರ್ದೇಶನಕ್ಕೆ ಹೊಸ ಜೀವಕಳೆ ತಂದು ಕೊಟ್ಟ ಡಾ.ಶ್ರೀಪಾದ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಲ್.ಬಿ.ಕೆ. ಆಲ್ದಾಳ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಎಸ್.ಬಿ.ಜಂಗಮಶೆಟ್ಟಿ ಸ್ಮರಣಾರ್ಥ ೬ನೇ ವರ್ಷದ ರಂಗ ಪ್ರಶಸ್ತಿಗಾಗಿ ತಜ್ಞರ ಆಯ್ಕೆ ಸಮಿತಿ ನೇಮಿಸಲಾಗಿತ್ತು. ಹಿರಿಯ ನಾಟಕಕಾರ ಎಲ್.ಬಿ.ಕೆಆಲ್ದಾಳ ಅವರ ಅಧ್ಯಕ್ಷತೆಯಲ್ಲಿ ರಂಗ ಚಿಂತಕ ಗವೀಶ ಹಿರೇಮಠ, ರಂಗ ಕಲಾವಿದೆ ಶಾಂತಾ ಕುಲಕರ್ಣಿ ರಾಯಚೂರು, ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ರಂಗಸಂಗಮ ಕಲಾವೇದಿಕೆ ಅಧ್ಯಕ್ಷೆ ನಂದಾ ಕೊಲ್ಲುರು, ರಂಗ ಸಂಘಟಕ ಎಚ್.ಎಸ್.ಬಸವಪ್ರಭು, ಉಪನ್ಯಾಸಕ ಬಿ.ಎಚ್.ನಿರಗುಡಿ, ರಂಗಾಯಣದ ನಿರ್ದೇಶಕ ಮಹೇಶ್ ಪಾಟೀಲ್, ಪತ್ರಕರ್ತ ರವಿ ಹಿರೇಮಠ, ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಮತ್ತು ಡಾ.ಸುಜಾತಾ ಜಂಗಮಶೆಟ್ಟಿ ಅವರನ್ನೊಳಗೊಂಡ ಆಯ್ಕೆ ಸಮಿತಿಯು, ಪ್ರಶಸ್ತಿಗಾಗಿ ಬಂದಿದ್ದ ೨೦ ಅರ್ಜಿಗಳನ್ನು ಪರಿಶೀಲಿಸಿ, ರಂಗಭೂಮಿಯಲ್ಲಿ ತಮ್ಮದೇ ಆದ ಮನ್ವಂತರ ಸೃಷ್ಟಿಸಿದ ಡಾ.ಶ್ರೀಪಾದ ಭಟ್ ಅವರನ್ನು ಆಯ್ಕೆಮಾಡಲಾಗಿದೆ ಎಂದು ತಿಳಿಸಿದರು.
ವೃತ್ತಿಯಲ್ಲಿ ಕನ್ನಡ ಶಿಕ್ಷಕರಾಗಿರುವ ಶ್ರೀಪಾದರು ರಂಗಭೂಮಿ, ಸಂಗೀತ, ಸಾಹಿತ್ಯ, ಶಿಕ್ಷಣ, ಜಾನಪದ.. ಹೀಗೆ ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು,’ಉತ್ತರ ಕನ್ನಡ ಜಿಲ್ಲೆಯ ರಂಗಭೂಮಿ’ ಎಂಬ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಭಾರತ ರಂಗ ಮಹೋತ್ಸವದಲ್ಲಿ ಇವರ ನಿರ್ದೇಶನದ ’ಕರ್ಣಭಾರ’ ಮತ್ತು ’ಚಿತ್ರಾ’ ನಾಟಕಗಳು, ಜಶ್ನೆ ಬಚಪನ್ ರಾಷ್ಟ್ರೀಯ ನಾಟಕೋತ್ಸವದಲ್ಲಿ ’ಕಂಸಾಯಣ’, ’ಮಕ್ಕಳ ರವೀಂದ್ರ’ ಮತ್ತು ’ರೆಕ್ಕೆಕಟ್ಟುವಿರಾ’ ಎಂಬ ನಾಟಕಗಳು ಪ್ರದರ್ಶನಗೊಂಡಿವೆ. ಹಾವೇರಿ ಜಿಲ್ಲೆಯ ಶೇಷಗಿರಿ ಎಂಬ ಗ್ರಾಮದಲ್ಲಿ ೧೫ ವರ್ಷದಿಂದ ರಂಗ ಚಟುವಟಿಕೆ ನಡೆಸಿ ಸುಸಜ್ಜಿತ ರಂಗಮಂದಿರವನ್ನೂ ನಿರ್ಮಿಸಿರುವ ಹೆಗ್ಗಳಿಕೆ ಇವರದು.
ಸುಮಾರು ನೂರಕ್ಕೂ ಹೆಚ್ಚು ನಾಟಕಗಳನ್ನು ಇವರು ನಿರ್ದೇಶಿಸಿದ್ದು, ಅನೇಕ ರಾಷ್ಟ್ರೀಯ ನಾಟಕೋತ್ಸವಗಳಲ್ಲಿ ಇವರ ನಾಟಕಗಳು ಪ್ರದರ್ಶಿಸಲ್ಪಟ್ಟಿವೆ. ಕುವೆಂಪು ವಿಶ್ವವಿದ್ಯಾಲಯ, ಹಂಪಿ ವಿಶ್ವ ವಿದ್ಯಾಲಯಗಳಲ್ಲಿ ರಂಗಭೂಮಿಯ ಸಂಪನ್ಮೂಲ ವ್ಯಕ್ತಿಯಾಗಿ, ಪಠ್ಯ ಪುಸ್ತಕ ರಚನೆಕಾರರಾಗಿ, ಚಿಂತನ ರಂಗ ಅಧ್ಯಯನ ಕೇಂದ್ರದ ಕಾರ್ಯದರ್ಶಿಯಾಗಿ, ಕರ್ನಾಟಕದ ಅನೇಕ ರೆಪರ್ಟರಿ, ರಂಗಶಾಲೆಗಳಲ್ಲಿ ನಾಟಕಗಳ ನಿರ್ದೇಶಕರಾಗಿ ಇವರು ಕೆಲಸ ನಿರ್ವಹಿಸಿದ್ದಾರೆ.
ವಿಶೇಷವೆನೆಂದರೆ ಗಾಂಧಿ ೧೫೦ರ ಸಂದರ್ಭದಲ್ಲಿ ಇವರು ನಿರ್ದೇಶಿಸಿದ ’ಪಾಪು ಬಾಪು’ ನಾಟಕವು ಸಾವಿರಕ್ಕೂ ಅಧಿಕ ಪ್ರದರ್ಶನಗಳನ್ನು ಕಂಡಿದ್ದು ಕನ್ನಡ ರಂಗಭೂಮಿಯ ಹೆಗ್ಗಳಿಕೆಯಾಗಿದೆ.
ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ, ಅನೇಕ ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಹಲವಾರು ರಂಗ ತರಬೇತಿ ಕಾರ್ಯಾಗಾರದ ನಿರ್ದೇಶಕರಾಗಿ ದುಡಿದಿದ್ದಾರೆ. ಇವರಿಗೆ ಸದಾನಂದ ಸುವರ್ಣ ಪ್ರಶಸ್ತಿ, ಮಂಜುನಾಥ ಉದ್ಯಾವರ ಪ್ರಶಸ್ತಿ, ಹೀಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಶ್ರೀ ಎಸ್.ಬಿ.ಜಂಗಮಶೆಟ್ಟಿ ಅವರು ವೃತ್ತಿಯಲ್ಲಿ ಇಂಜಿನೀಯರ್ ಆಗಿದ್ದರು. ಪ್ರವೃತ್ತಿಯಲ್ಲಿ ಸಾಹಿತ್ಯ, ಸಂಗೀತ ಮತ್ತು ರಂಗಭೂಮಿಯ ಪೋಷಕರಾಗಿದ್ದರು. ಅಸಂಖ್ಯಾತ ರಂಗಕರ್ಮಿಗಳನ್ನು ಜಾತಿ, ಮತ, ಬೇಧವೆಣಿಸದೆ ಉತ್ತೇಜಿಸುತ್ತಿದ್ದರು. ಲೋಕಪಯೋಗಿ ಇಲಾಖೆಯಲ್ಲಿ ಸುಪರಿಂಡೆಂಟ್ ಇಂಜಿನೀಯರ್ ಆಗಿ ನಿವೃತ್ತರಾಗಿದ್ದರೂ ವಿಶೇಷವಾಗಿ ವೃತ್ತಿ ಮತ್ತು ಹವ್ಯಾಸಿ ರಂಗಭೂಮಿ ಬಗ್ಗೆ ಪ್ರೀತಿ ಮತ್ತು ಗೌರವ ಇಟ್ಟುಕೊಂಡಿದ್ದರು.
೨೦೧೩ ರಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಅವರ ಸ್ಮರಣಾರ್ಥ ರಂಗ ಪ್ರಶಸ್ತಿಯನ್ನು ನೀಡುವ ಆಲೋಚನೆಯನ್ನು ಹೊಂದಿರುವ ಅವರ ಸುಪುತ್ರಿ ಡಾ.ಸುಜಾತಾ ಜಂಗಮಶೆಟ್ಟಿ ಅವರು ತಮ್ಮ ತಂದೆಯವರ ಸ್ಮರಣಾರ್ಥ ರಂಗ ಪ್ರಶಸ್ತಿಯನ್ನು ಸ್ಥಾಪಿಸಿದರು. ಆ ಮೂಲಕ ರಂಗಭೂಮಿಗೆ ಸೇವೆ ಸಲ್ಲಿಸಿದವರನ್ನು ಗುರುತಿಸಿ ಕೊಡಬೇಕೆನ್ನುವ ಅವರ ಇರಾದೆಯಂತೆ, ಕಳೆದ ಐದು ವರ್ಷದಲ್ಲಿ ೧.ಹಾಮೊಂನಿಯಂ ಕಲಾವಿದ ಬಸವರಾಜಯ್ಯ ಸ್ವಾಮಿ ಭಿಮನಳ್ಳಿ, ೨.ಹವ್ಯಾಸಿ ರಂಗಕಲಾವಿದ ಈಶ್ವರಪ್ಪ ಫರಹತಾಬಾದ್, ೩.ಮನೂಬಾಯಿ ನಾಕೋಡ ದಾವಣಗೆರೆ, ೪.ರಂಗಭೂಮಿ ಕಲಾವಿದ ಮತ್ತು ಖ್ಯಾತ ಸಿನಿಮಾ ನಟ ಮಂಡ್ಯ ರಮೇಶ್ ಮತ್ತು ೫.ಸರಸ್ವತಿ ಉರುಫ್ ಜಿಲೇಖಾ ಬೇಗಂ ಅವರಿಗೆ ನೀಡಲಾಗಿತ್ತು. ಈ ಬಾರಿ ಎಸ್.ಬಿ.ಜಂಗಮಶೆಟ್ಟಿ ಅವರ (ಆರನೇ) ೬ನೇ ವರ್ಷದ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಪ್ರಶಸ್ತಿ ಪ್ರದಾನ ನಡೆಯಲಿದೆ.
ಪ್ರಶಸ್ತಿ ಪ್ರದಾನ: ರಂಗಸಂಗಮ ಕಲಾ ವೇದಿಕೆಯು ೬ನೇ ವರ್ಷದ ಎಸ್.ಬಿ.ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ಆಯ್ಕೆಯಾದ ರಂಗಭೂಮಿ ನಿರ್ದೇಶಕ ಡಾ.ಶ್ರೀಪಾದ ಭಟ್ ಅವರಿಗೆ ಜುಲೈ ೧೮ ರಂದು ಬೆಳೆಗ್ಗೆ ೧೦:೩೦ ಕ್ಕೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಈ ಪ್ರಶಸ್ತಿಯು ೧೦ ಸಾವಿರ ರೂ. ನಗದು ಪುರಸ್ಕಾರ ಸ್ಮರಣಿಕೆ, ಸನ್ಮಾನ ಮತ್ತು ಫಲಕವನ್ನೊಳಗೊಂಡಿರುತ್ತದೆ. ಇದೇ ತಿಂಗಳು ೧೮ ರಂದು ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.ಅಂದೆ ಸಂಜೆ 6-30 ಕ್ಕೆ ಡಾ.ಪಂಡಿರಂಗಮಂದಿರದಲ್ಲಿ.ಶ್ರೀಪಾದಭಟ್ ಅವರ ನಿರ್ದೇಶನದ “ನೃತ್ಯಗಾಥಾ”ಏಕವ್ಯಕ್ತಿ ಪ್ರದರ್ಶನವಿದೆ.
ಸಂಚಾಲಕಿ ಡಾ. ಸುಜಾತಾ ಜಂಗಮಶೆಟ್ಟಿ, ಸದಸ್ಯರಾದ ಎಚ್.ಎಸ್. ಬವಸಪ್ರಭು, ಮಹೇಶ ವಿ. ಪಾಟೀಲ, ಬಿ.ಎಚ್. ನಿರಗುಡಿ, ನಂದಾ ಕೊಲ್ಲೂರ ಇದ್ದರು.