ನಮ್ಮ ಜನಗಳ ಬುದ್ದಿಗೆ ಏನಾಗಿದೆಯೋ ಗೊತ್ತಾಗುತ್ತಿಲ್ಲ. ಗುಜರಾತ ದೇವಾಲಯ ದೇವಿಯೊಬ್ಬರಿಗೆ ೧೬ ಕೋಟಿ ಬೆಲೆಬಾಳುವ ೫.೫ ಲಕ್ಷ ಕೇ.ಜಿ. ತುಪ್ಪ ಸುರಿದು ಅಭಿಷೇಕ ಮಾಡಿದರಂತೆ ?! ನಮ್ಮ ದೇಶದ ಎಷ್ಟೋ ಮಕ್ಕಳು ಇವತ್ತಿಗೂ ತುಪ್ಪದ ಮುಖವನ್ನು ನೋಡಿಲ್ಲ. (ಉಣ್ಣುವುದು ಬದಿಗಿರಲಿ) ಎರಡು ಹೊತ್ತು ಸರಿಯಾಗಿ ಊಟ ಮಾಡುವುದಕ್ಕೂ ಅನ್ನ ಇಲ್ಲ. ಆದರೆ ಇದೆ ದೇಶದಲ್ಲಿಯೇ ದೇವರಿಗಾಗಿ ತುಪ್ಪದ ಅಭಿಷೇಕ.
ಒಂದು ಹನಿ ಹಾಲನ್ನು ಸ್ವತಃ ಉತ್ಪಾದಿಸಲಾಗದ ಮನುಷ್ಯ ಸಾರ್ವಜನಿಕವಾಗಿ ಹೀಗೆ ತುಪ್ಪ ಚೆಲ್ಲಿ ಅಭಿಷೇಕ ಮಾಡುವುದು ಎಷ್ಟು ಸರಿ. ಇಡೀ ಜಗತ್ತೇ ಆ ಸೃಷ್ಟಿಕರ್ತನ ಕೈಚಳಕ ಎಂದು ನಂಬಿದ ಮೇಲೆ ಆತ ನಮ್ಮನ್ನೂ ಸೃಜಿಸಿರಲೇಬೇಕಲ್ಲವೆ ? ನಾವೇ ಆತನ ಕೊಡುಗೆ ಆದ ಮೇಲೆ ,ಆತನಿಗೆ ಕೊಡಬೇಕಾದದ್ದು ಏನು ?
ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ.
ಸುಳಿದು ಬೀಸುವ ವಾಯು ನಿಮ್ಮ ದಾನ.
ನಿಮ್ಮ ದಾನವನುಂಡು ಅನ್ಯರ ಹೊಗಳುವಕುನ್ನಿಗಳನೇನೆಂಬೆ,
ರಾಮನಾಥ.
ಎಂಬ ವಚನವನ್ನು ಅರ್ಥ ಮಾಡಿಕೊಳ್ಳಬೇಕು. ನಾವು ಕಣ್ಣಿಂದ ನೋಡುವ ಭೂಮಿ, ಗಾಳಿ, ಮಳೆ, ಪೈರು ಎಲ್ಲವೂ ಆತನ ದಾನವೇ ಆಗಿರುವಾಗ ಒಂದು ಚರಿಗೆ ನೀರು ಆತನ ಪ್ರತಿಮೆ (?) ಮೇಲೆ ಚೆಲ್ಲಿ ಕೃತಾರ್ಥತತೆಯನ್ನು ಅನುಭವಿಸಿದಂತೆ ತೋರುವುದು ಭಕ್ತಿ ಹೇಗಾಗುತ್ತದೆ ? ದೇವರು ಕೇವಲ ಗುಡಿಯ ಒಳಗಡೆ ಇಲ್ಲ. ಆತ ಅಲ್ಲಿನ ಪುರೋಹಿತನ ಸೆರೆಯಲ್ಲಿರುವಾತ. ದಿನ ನಿತ್ಯವು ಅಲ್ಲಿನ ಪೂಜಾರಿ ಆಯಾ ದೇವಾಲಯದ ಬಾಗಿಲು ತೆರೆದಾಗಲೆ ಆ ದೇವರು ನಮಗೆ ದರ್ಶನ ಕೊಡುವುದು ! ಪೂಜಾರಿ ಮುಖ ತೊಳೆಸಿದಾಗ ತೊಳೆಸಿಕೊಳ್ಳುತ್ತಾ, ಉಣಿಸಿದಾಗ ಉಣ್ಣುತ್ತಾ ಇರುವ ದೇವರು, ದೇವರೆ ?
ಈ ಬಗ್ಗೆ ನಮ್ಮನ್ನೆ ನಾವು ಧ್ಯಾನಸ್ಥ ಸ್ಥಿತಿಯಲ್ಲಿ ನಿಂತು ಅವಲೋಕಿಸಿಬೇಕಿದೆ. ಭಾವುಕವಾಗಿ ಆಲೋಚಿಸಿದರೆ ಸತ್ಯ ಮರೆಯಾಗುತ್ತದೆ. ನಿರ್ಭಾವುಕರಾಗಿ ಸಂಗತಿ ಗಮನಿಸಬೇಕಿದೆ. ಆಗ ಸತ್ಯ ತಂತಾನೆ ಪ್ರಕಟವಾಗುತ್ತದೆ.
ಹಾಲ ನೇಮವ ಹಿಡಿದಾತ ಬೆಕ್ಕಾಗಿ ಹುಟ್ಟುವ. ಕಡಲೆಯ ನೇಮವ ಹಿಡಿದಾತ
ಕುದುರೆಯಾಗಿ ಹುಟ್ಟುವ.
ಆಗ್ಘವಣಿಯ ನೇಮವ ಹಿಡಿದಾತ
ಕಪ್ಪೆಯಾಗಿ ಹುಟ್ಟುವ.
ಪುಷ್ಪದ ನೇಮವ ಹಿಡಿದಾತ
ತುಂಬಿಯಾಗಿ ಹುಟ್ಟುವ …
ಇವು ಷಡುಸ್ಥಲಕ್ಕೆ ಹೊರಗು.
ನಿಜಭಕ್ತಿ ಇಲ್ಲದವರ ಕಂಡಡೆ
ಮೆಚ್ಚನು ಗುಹೇಶ್ವರನು.
ಎಂಬ ಅಲ್ಲಮಪ್ರಭುವಿನ ವಚನ ಗಮನಿಸಿರಿ. ಕ್ಷಣಿವಾದ ನೇಮಗಳಿಂದ ಪ್ರಯೋಜನವಿಲ್ಲ. ಹಾಲ ನೇಮ, ಕಡಲೆ ನೇಮ, ಅಗ್ಘವಣಿಯ ,ಹೂವಿನ ನೇಮ ಪ್ರಯೋಜನಕಾರಿಯಾದುದಲ್ಲ. ಇವೆಲ್ಲ ನಿಜ ಭಕ್ತಿ ಇಲ್ಲದವರು ಮಾಡುವ ಕೃತ್ಯ. ಹಾಲ ನೇಮ, ಹಾಲ ಕೆನೆಯ ನೇಮ, ಕೆನೆ ತಪ್ಪಿದ ಬಳಿಕ ಕಿಚ್ಚಡಿಯ ನೇಮ, ಬೆಣ್ಣೆಯ ನೇಮ, ಬೆಲ್ಲದ ನೇಮ, ಅಂಬಲಿಯ ನೇಮದವರನಾರನೂ ಕಾಣೆ. ಕೂಡಲಸಂಗನ ಶರಣರಲ್ಲಿ ಅಂಬಲಿಯ ನೇಮದಾತ ಮಾದಾರ ಚೆನ್ನಯ್ಯ.
ಹಾಲ ನೇಮ, ಕೆನೆಯ, ಕೆನೆ ತಪ್ಪಿದ ಬಳಿಕ ಕಿಚ್ಚಡಿಯ ನೇಮ. ಈ ನೇಮಗಳು ದೇವರನ್ನು ಸಂತೃಪ್ತಗೊಳಿಸವು. ದೇವರಿಗೆ ಯಾವ ನೇಮಗಳ ಅಗತ್ಯವಿಲ್ಲ. ಆತನಿಗೆ ಬೇಕಿರುವುದು ನಿಮ್ಮ ನಿರ್ಮಲವಾದ ಮನಸ್ಸು. ಎಲ್ಲಾ ನೇಮಗಳು ಹಿಡಿಯ ನಾವುಗಳು ಚೆನ್ನಯ್ಯನ ಅಂಬಲಿಯ ನೇಮ ಏಕೆ ? ಹಿಡಿಯುವುದಿಲ್ಲ ? ಎಂಬುದು ಅಪ್ಪ ಬಸವಣ್ಣನವರ ಪ್ರಶ್ನೆ.
ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳಬೇಡಿ, ನನ್ನ ಈ ಬರಹವನ್ನೂ ಕೂಡ.