ಅರಸತ್ವ ತೊರೆದು ಶರಣನಾದ ಚಂದಿಮರಸ

0
298

ಶರಣರ ವಚನಗಳು ಅನುಭಾವದ ನುಡಿಗಳು. ಶರಣರ ವಚನಗಳು ಸತ್ಯ ಪಥದ ದೀವಿಗೆಗಳು. ಶರಣರ ವಚನಗಳು ಸರ್ವ ಸಮಸ್ಯೆಗೆ ಪರಿಹಾರ ಸೂಚಿಸುವ ಸೂತ್ರಗಳು. ಶರಣರ ವಚನಗಳು ತಾನಾರು? ಎಂಬುದನ್ನು ಅರುಹಲು ಜ್ಞಾನದೀವಿಗೆ ಹಚ್ಚಿದವುಗಳು. ವಚನಗಳಲ್ಲಿ ಶಾಂತಿಯಿದೆ, ವಚನಗಳಲ್ಲಿ ವಿಶ್ವ ಭ್ರಾತೃತ್ವದ ಭಾವ ಇದೆ. ವಚನಗಳಲ್ಲಿ ಬೆಳಕು, ಬೆಡಗು, ಬೆರಗು ಇದೆ. ಇಂತಹ ವಚನಗಳು ಬಸವಣ್ಣನವರ ಉದಾತ್ತ ವಿಚಾರದ ಅನುಭವ ಮಂಟಪದ ಬಯಲಿನಲ್ಲಿ ರಚಿಸಿದವುಗಳಾಗಿದ್ದು, ಶರಣರ ವಚನಗಳಲ್ಲಿ ನಿರಾಕಾರ ಸ್ವರೂಪಿಯಾಗಿರುವ ನಮ್ಮೆಲ್ಲರ ಹೃನ್ಮಂದಿರದಲ್ಲಿ ನೆಲೆಸಿರುವ ಬಯಲ ದರ್ಶನ ಮಾಡಿದವುಗಳಾಗಿವೆ.

Contact Your\'s Advertisement; 9902492681

ಮರ್ತ್ಯದ ಮನುಜರ ಮನದ
ಮೈಲಿಗೆ ಕಳೆಯಲೆಂದು
ಗೀತೆ ಮಾತೆಂಬ ಜ್ಯೋತಿ ಹೊತ್ತಿಸಿದವರು

ಎಂದು ಚನ್ನಬಸವಣ್ಣನವರು ಹೇಳಿದ್ದಾರೆ. ವಚನಗಳು ದೇವಲೋಕದ ಮಾರ್ಗ ತೋರಿದವುಗಳಾಗಿವೆ. ಹೋಮ, ಹವನ ಮಾಡಿದರೆ ಮನಸ್ಸು ವಿಕಾಸ ಆಗುವುದಿಲ್ಲ. ವಿಕಾರವಾಗುತ್ತದೆ. ಮನದ ಸೂತಕ ಕಳೆಯಲು ವಚನ ವಿಹಾರ ಅಗತ್ಯವಾಗಿದೆ. ಅಥಣಿಯ ಲಿಂಗೈಕ್ಯ ಮುರುಘೇಂದ್ರ ಶಿವಯೋಗಿಗಳ ಹತ್ತಿರ ಒಮ್ಮೆ ಒಬ್ಬ ಪುರೋಹಿತ ಬಂದಿದ್ದನಂತೆ. ಆ ವ್ಯಕ್ತಿಯನ್ನು ಉದ್ದೇಶಿಸಿ ನೀವು ಉಪಜೀವನಕ್ಕೆ ಏನು ಮಾಡಿಕೊಂಡಿರುವಿರಿ? ಎಂದು ಕೇಳಿದರಂತೆ ಆಗ ಆ ವ್ಯಕ್ತಿ, ನಾನು ವೈದಿಕ. ಪೂಜೆ, ಪುನಸ್ಕಾರ, ಶಾಸ್ತ್ರ, ಮಂತ್ರ ಓದುವುದು ನನ್ನ ಉದ್ಯೋಗ ಎಂದನಂತೆ! ಆತನ ಉತ್ತರ ಕೇಳಿದ ಶಿವಯೋಗಿಗಳು, ಅದನ್ನು “ಹೊಯ್ದು ಇಕ್ಕು” ಎಂದು ಹೇಳಿ, ಅಪ್ಪನ ವಚನ ಓದು, ಕಾಯಕ-ದಾಸೋಹ ಮಾಡು ಎಂದರಂತೆ!! ಈ ಘಟನೆ ವಚನ ಸಾಹಿತ್ಯದ ಶ್ರೇಷ್ಠತೆಯನ್ನು ಎತ್ತಿ ತೋರಿಸುತ್ತದೆ.
ಬಸವಣ್ಣನವರ ಹಿರಿಯ ಸಮಕಾಲೀನರಾದ ಕೆಂಭಾವಿ ಭೋಗಣ್ಣ, ಮಾದಾರ ಚನ್ನಯ್ಯನವರಂತೆ ಚಂದಿಮರಸರು ಕೂಡ ಒಬ್ಬರು. ಈಗಿನ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕೆಂಭಾವಿ ಗ್ರಾಮದ ಸಂಸ್ಥಾನದ ಅರಸರಾಗಿದ್ದರು. ಸಿಮ್ಮಲಿಗಿ ಚನ್ನರಾಯಮಲ್ಲ ಎಂಬ ಅಂಕಿತದಲ್ಲಿ ಇವರು ಬರೆದಿರುವ ೧೫೭ ವಚನಗಳ ಪೈಕಿ ೧೫ ವಚನಗಳು ಮಾತ್ರ ದೊರಕಿವೆ.

ಅದೇ ವೇಳೆಯಲ್ಲಿ ಕೆಂಭಾವಿಯಲ್ಲಿ ಭೋಗಣ್ಣನೆಂಬ ಶರಣ ಕೂಡ ವಾಸಿಸುತ್ತಿದ್ದರು. ದೀನ, ದಲಿತ, ಅಸ್ಪೃಶ್ಯರನ್ನು ಅವರು ಬಹಳ ಹಚ್ಚಿಕೊಂಡಿದ್ದರು. ಸ್ವಾತಂತ್ರ್ಯ, ಸಮಾನತೆ ಬಗ್ಗೆ ಜನರಿಗೆ ತಿಳಿ ಹೇಳುತ್ತಿದ್ದರು. ಶರಣರು ನೆಲೆಸಿದ ಕ್ಷೇತ್ರ ಅವಿಮುಕ್ತ ಕ್ಷೇತ್ರವಾಗಿತ್ತು. ಆಗ ಕೆಲವು ಕಿಡಿಗೇಡಿಗಳು ಅರಸನಿಗೆ ಭೋಗಣ್ಣನ ವಿರುದ್ಧ ಚಾಡಿ ಹೇಳಿದ್ದರಿಂದ ಇವರನ್ನು ಊರಿನಿಂದ ಓಡಿಸಿದರು. ಆಗ ಭೋಗಣ್ಣನ ಹಿಂದೆಯೇ ಆ ಊರಿನ ಲಿಂಗಗಳು ಹೋಗಲು ರಾಜನಿಗೆ ಜ್ಞಾನೋದಯವಾಗಿ ಆ ಶರಣನನ್ನು ಹಿಂದಕ್ಕೆ ಕರೆಸಿದ ಮಾತ್ರವಲ್ಲ. ತಾನೂ ಲಿಂಗಾಯತ ಧರ್ಮ ಸ್ವೀಕರಿಸಿ ಶರಣನಾದ ಎಂದು ಹೇಳಲಾಗುತ್ತಿದೆ.

ಸಾವು ತಡವಿಲ್ಲ
ನರಕ ದೂರವಿಲ್ಲ
ಕೆಮ್ಮನೆ ಕೆಡಬೇಡ
ಸಿಮ್ಮಲಗಿ ಚೆನ್ನರಾಯಮಲ್ಲ

ಒಂದಿಲ್ಲ ಒಂದಿನ ಅಳಿವ ಕಾಯವನ್ನು ಸಾರ್ಥಕ ಪಡಿಸಿಕೊಳ್ಳಬೇಕಾದರೆ ಶರಣರ ಕಾಯಕ-ದಾಸೋಹ ಮೈಗೂಡಿಸಿಕೊಳ್ಳಬೇಕು. ನಮ್ಮ ಸಾವ, ಕೆಡುವ ಈ ಕಾಯ ಅಳಿದರೂ ನಾವು ಮಾಡಿದ ಕಾರ್ಯ ಉಳಿಯುತ್ತದೆ. ಭವಿಷ್ಯ ಎನ್ನುವುದು ನಮ್ಮ ಹಸ್ತರೇಖೆಯಲ್ಲಿರದೆ ದುಡಿವ ರಟ್ಟೆಯಲ್ಲಿದೆ. ಹುಡಿ ಹತ್ತಿದ ಗಾಳಿಯಂತೆ, ಗಾಳಿಗೆ ಹತ್ತಿದ ಕಣ್ಣಾಲೆಯಂತೆ ಎಂದು ಬದುಕಿನಲ್ಲಿ ಸಂತರಂತೆ ಬಾಳಬೇಕು ಎಂದು ಚಂದಿಮರಸ ಹೇಳಿದರು.

ಯತಿಗಳ ವ್ರತಿಗಳ ಧೃತಿಗೆಡಿಸಿತ್ತು ಮಾಯೆ
ಕಲಿಗಳ ಛಲಿಗಳ ಬಲುಹ ಮುರಿಯಿತ್ತು ಮಾಯೆ
ಹರಿ ಬ್ರಹ್ಮ ರುದ್ರಾದಿಗಳೆಲ್ಲರ ತರಕಟ ಕಾಡಿತ್ತು ಮಾಯೆ
ಹೋ! ಹೋ!! ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ
ಮಾಯಾಮರ್ಕಟ ವಿಧಿಯೇ!

ಎಂದು ಹೆಣ್ಣನ್ನು ಮಾಯೆಗೆ ಹೋಲಿಸಿದರು. ಆದರೆ ಅಲ್ಲಮಪ್ರಭುಗಳು ಮನದ ಮುಂದಣ ಆಸೆಯೇ ಮಾಯೆ ಎಂದು ಹೇಳಿದರು. ಬದುಕಿನಲ್ಲಿ ಬಂದು ಹೋಗುವ ಒಂದು ಕ್ಷಣ ಬದುಕಿನ ದಿಕ್ಕನ್ನೇ ಬದಲಾಯಿಸುತ್ತದೆ. ಗಿಡದ ಕೆಳಗೆ ಕುಳಿತಾಗ ಹಣ್ಣು ಕೆಳಗೆ ಬೀಳುವುದನ್ನು ಕಂಡು ಭೂಮಿಗೆ ಗುರುತ್ವಾಕರ್ಷಣೆ ಶಕ್ತಿ ಇದೆ ಕಂಡು ಹಿಡಿದ ಐಸಾಕ್ ನ್ಯೂಟನ್, ಸ್ನಾನ ಮಾಡಲು ತೊಟ್ಟಿಗೆ ಇಳಿದ ಆರ್ಕಿಮಿಡಿಸ್ ಹೊಸದನ್ನು ಶೋಧಿಸುವಂತೆ ಕೆಂಭಾವಿ ಭೋಗಣ್ಣನವರಿಂದ ಚಂದಿಮರಸರು ತಮ್ಮ ಬದುಕಿನಲ್ಲಿ ಬದಲಾವಣೆಯನ್ನು ತಂದುಕೊಂಡರು. ಇವರ ವಚನಗಳಲ್ಲಿ ಆತ್ಮನೀವೆದನೆ, ಲಿಂಗನಿಷ್ಠೆ, ಏಕದೇವೋಪಾಸನೆ ಜೊತೆಗೆ ವಿಜ್ಞಾನ, ವಿಚಾರ ಇರುವುದನ್ನು ಗುರುತಿಸಬಹುದು.
ಶರಣರು ಬದುಕನ್ನು ಒದ್ದು ಗೆದ್ದವರಲ್ಲ; ಇದ್ದು ಗೆದ್ದವರು. ಬಸವಣ್ಣ ವ್ಯವಕಲನ ಅಲ್ಲ. ಆತ ಸಂಕಲನ. ಕೊಟ್ಟಿದ್ದು ಕಲ್ಯಾಣ, ಕೂಡಿಸಿದ್ದು ಸಂಗಮ. ಹೀಗಾಗಿ ನಾವೆಲ್ಲ ಪರಸ್ಪರ ದ್ವೇಷಾಸೂಯೆ ಮರೆತು, ಅಸೂಹೆ ಹೋಗಿ ಅನಸೂಯ ಆಗಬೇಕು. ಅಂತಹ ಬದುಕು ನಮ್ಮದಾಗಬೇಕಾದರೆ ಶರಣರ ಬದುಕು ಹಾಗೂ ಬೋಧನೆಯನ್ನು ಅನುಸರಿಸಬೇಕು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here