ಕಲಬುರಗಿ: ಹಿರಿಯರು ಸಮಾಜದ, ಸಮುದಾಯಗಳ ಗಟ್ಟಿ ಬೇರುಗಳಿದಂತೆ ಇಂದಿನ ಯುವಪೀಳಿಗೆಯನ್ನು ಪೋಷಿಸುವ ಜವಾಬ್ದಾರಿ ಅವರ ಮೇಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಸಸಿ ಅವರು ಅಭಿಪ್ರಾಯಪಟ್ಟರು.
ಶುಕ್ರವಾರ ಇಲ್ಲಿನ ಜಿಲ್ಲಾ ಪಂಚಾಯತ್ ಹೊಸ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುರತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ಪೀಳಿಗೆಯನ್ನು ತಿದ್ದಿ, ತೀಡಿ ಜವಾಬ್ದಾರಿಯುತ ಹಾಗೂ ಮೌಲ್ಯಯುತ ಜೀವನದ ಅರಿವು ಮೂಡಿಸುವ ಬಹುದೊಡ್ಡ ಕೆಲಸ ಹಿರಿಯ ಜೀವಿಗಳದ್ದಾಗಿದೆ ಎಂದು ಅವರು ಹೇಳಿದರು.
ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕೃಷ್ಣಾ ಮೇಲ್ದಂಡೆ ಯೋಜನೆ (ಕಾಡಾ) ಅಧ್ಯಕ್ಷ ಶರಣಪ್ಪ ತಳವಾರ ಮಾತನಾಡಿ, ಹಿರಿಯರು ತಮ್ಮ ನಿವೃತ್ತಿ ಜೀವನವನ್ನು ನೆಮ್ಮದಿಯಿಂದ ಕಳೆಯಬೇಕು. ಅದಕ್ಕಾಗಿ ಸರ್ಕಾರ ಹಿರಿಯರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳ ಸಂಪೂರ್ಣ ಲಾಭ ಪಡೆಯಿರಿ ಎಂದು ಅವರು ಸಲಹೆ ನೀಡಿದರು.
ಈ ವೇಳೆ ಹಿರಿಯ ನಾಗರಿಕರಿಗಾಗಿ ಏರ್ಪಡಿಸಿದ ಸಂಸ್ಕೃತಿ ಕಾರ್ಯಕ್ರಮ ಹಾಗೂ ಕ್ರೀಡಾ ಸ್ಪರ್ಧೆಯಲ್ಲಿ ಜಯಗಳಿಸಿದ 30 ಹಿರಿಯ ನಾಗರಿಕರಿಗೆ ಸನ್ಮಾನ ಮಾಡಲಾಯಿತು. ಹಾಗೂ ಶಿವರುದ್ರ ಟ್ರಸ್ಟ್ ವತಿಯಿಂದ ಎಲ್ಡರ್ ಲೈನ್ (ಹಿರಿಯ ನಾಗರಿಕರ ಸಹಾಯವಾಣಿ) 14567 ಉಚಿತ ಸಹಾಯವಾಣಿಯನ್ನು ಸಹ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷೆ ಶಶಿಕಲಾ ವಿ. ಟೆಂಗಳಿ, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಧಿಕಾರ ನೀರಾವರಿ ಯೋಜನೆಗಳ ಕಲಬುರಗಿ ವಲಯದ ಅಧ್ಯಕ್ಷ ಹರ್ಷವರ್ಧನ ಗು. ಗುಗಳೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನವೀನಕುಮಾರ, ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಸಾದಿಕ್ ಹುಸೇನ್ ಖಾನ್, ನ್ಯಾಯವಾದಿ ರಾಜೇ ಶಿವಶರಣಪ್ಪ, ಶಿವರುದ್ರ ಟ್ರಸ್ಟ್ ಹಿರಿಯ ನಾಗರಿಕರ ಸಹಾಯವಾಣಿಯ ಅಧ್ಯಕ್ಷಮಾಳಿಂಗ ಮಹಾಗಾಂವಕರ್, ರಾಷ್ಟ್ರೀಯ ಭಂಜಾರ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಕಲಾವತಿ ಜಾಧವ್, ಅಫ್ಜಲ್ ಪಾಷಾ, ಅಮರೇಶ್ ನಾಯ್ಕ, ಪ್ರಕಾಶ್ ಜಾಧವ ಸೇರಿದಂತೆ ಹಿರಿಯ ನಾಗರಿಕರ ಸ್ವಯಂ ಸೇವಾ ಸಂಘ ಸಂಸ್ಥೆಗಳು ಹಾಗೂ ಹಿರಿಯ ನಾಗರಿಕರು ಉಪಸ್ಥಿತರಿದ್ದರು.
ಅಂದ ಮಕ್ಕಳ ಶಾಲೆಯ ಶಿಕ್ಷಕರು ನಾಡಗೀತೆ ಹಾಡಿದರು. ಮುರುಳಿಧರ ಪ್ರಾಥನಾಗೀತೆ ಹಾಡಿದರು. ಪ್ರಕಾಶ ಭಜಂತ್ರಿ ನಿರೂಪಿಸಿದರು.