ಸುರಪುರ: ತಾಲೂಕಿನ ಚೌಡೇಶ್ವರಹಾಳ ಗ್ರಾಮದಲ್ಲಿ ಕಳೆದ ಭಾನುವಾರ ರಾತ್ರಿ ದುಷ್ಕರ್ಮಿಯಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಮಹಿಳೆ ಹತ್ಯೆ ಮಾಡಲಾದ ಘಟನೆ ಹಿನ್ನೆಲೆಯಲ್ಲಿ ಸಂತ್ರಸ್ತ ಕುಟುಂಬಕ್ಕೆ ಗುರುವಾರ ಶಾಸಕ ರಾಜೂಗೌಡ ಭೇಟಿ ನೀಡಿ ಸಾಂತ್ವನ ಹೇಳಿ ೫೦ ಸಾವಿರ ರೂಪಾಯಿಗಳ ಧನ ಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ರಾಜೂಗೌಡ ಮಾತನಾಡಿ,ಈ ಘಟನೆಯಿಂದ ತುಂಬಾ ನೋವಾಗಿದೆ,ನಮ್ಮ ಕ್ಷೇತ್ರದಲ್ಲಿ ಇಂತಹ ಘಟನೆ ನಡೆದಿರುವುದರಿಂದ ನಾವೆಲ್ಲರು ತಲೆತಗ್ಗಿಸುವಂತಾಗಿದೆ ಎಂದರು. ಈಗಾಗಲೇ ಮೂರು ಜನ ಆರೋಪಿಗಳನ್ನು ಬಂಧಿಸಿದ್ದು, ಉಳಿದ ಏಳು ಜನರನ್ನು ಕೂಡಲೇ ಬಂಧಿಸುವಂತೆ ಸ್ಥಳದಲ್ಲಿದ್ದ ಡಿವೈಎಸ್‌ಪಿ ಮತ್ತು ಪಿಐ ಅವರಿಗೆ ಸೂಚಿಸಿದರು.
ನಾನು ಈ ಎಲ್ಲಾ ಕುಟುಂಬಗಳಿಗೆ ಬೇರೆಡೆಗೆ ಸ್ಥಳಾಂತರ ಮಾಡಬಹುದು ಆದರೆ ಇದರಿಂದ ನಮ್ಮೆಲ್ಲರಿಗೆ ತಲೆತಗ್ಗಿಸುವಂತಾಗಲಿದೆ.ಆದ್ದರಿಂದ ಪೊಲೀಸ್ ಇಲಾಖೆ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದರು.
ಅಲ್ಲದೆ ತಾವು ಈ ಹಿಂದೆಯೆ ಇವರಿಂದ ತೊಂದರೆಯಾದಾಗ ನಮ್ಮ ಗಮನಕ್ಕೆ ತಂದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ,ಚುನಾವಣೆ ಬಂದಾಗ ಯಾರು ಯಾವ ಪಕ್ಷದ ಪರವಾಗಿಯಾದರು ಇರಲಿ,ನಂತರ ನಾನು ಇಡೀ ಕ್ಷೇತ್ರಕ್ಕೆ ಶಾಸಕ ಹಾಗಾಗಿ ನೀವೆಲ್ಲರು ನಮ್ಮ ಕುಟುಂಬವಿದ್ದಂತೆ.ಆದ್ದರಿಂದ ಮುಂದೆ ಯಾವುದೇ ರೀತಿಯ ತೊಂದರೆಯಾದರೂ ನಮ್ಮ ಗಮನಕ್ಕೆ ತರುವಂತೆ ತಿಳಿಸಿದರು.
ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು. ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದಲೂ ಅನುದಾನ ಒದಗಿಸಲು ಸಚಿವರೊಡನೆ ಮಾತನಾಡುವೆ. ಮಹಿಳೆಯರ ಇಂತಹ ಅಮಾನುಷ ಘಟನೆಗಳಿಗೆ ಯಾರೊಬ್ಬರು ಮುಂದಾಗಬಾರದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ),ಸದಾಶಿವ ಆಯೋಗ ಸಮಿತಿ ರಾಜ್ಯ ಸಂಚಾಲಕ ವಿಜಯಕುಮಾರ,ಜಿ.ಪಂ ಮಾಜಿ ಸದಸ್ಯ ಮರಿಲಿಂಗಪ್ಪ ಕರ್ನಾಳ,ಶ್ರೀನಿವಾಸ ನಾಯಕ ದರಬಾರಿ, ಬಲಭೀಮ ನಾಯಕ ಭೈರಿಮಡ್ಡಿ, ಭೀಮಾಶಂಕರ ಬಿಲ್ಲವ್, ಭೀಮಣ್ಣ ಬೇವಿನಾಳ, ದೇವರಾಜ ಮಕಾಶಿ, ವಿರೂಪಾಕ್ಷಿ ಕರ್ನಾಳ, ನಾಗರಾಜ ಓಕುಳಿ ಇತರರಿದ್ದರು.