ಸುರಪುರ: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಕೌಶಲ್ಯ ತರಬೇತಿ ಕೇಂದ್ರಗಳ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೇಂದ್ರ ಉದ್ಘಾಟಿಸಿದ ಶಾಸಕ ನರಸಿಂಹ ನಾಯಕ (ರಾಜುಗೌಡ) ಮಾತನಾಡಿ,ನಾವು ಕ್ಷೇತ್ರದ ಅಭಿವೃಧ್ಧಿ ಎಂದರೆ ಕೇವಲ ರಸ್ತೆ ಶಾಲೆ ಭವನಗಳ ಕಟ್ಟಿಸುವುದು ಎಂದು ಭಾವಿಸಿದ್ದೇವು,ಆದರೆ ನಿಜವಾದ ಅಭೀವೃಧ್ಧಿ ಎಂದರೆ ಏನು ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಮೂಲಕ ನಮ್ಮ ನಾಯಕರಾದ ಬಸವರಾಜ ಪಾಟೀಲ್ ಸೇಡಂ ಅವರು ತೋರಿಸಿಕೊಟ್ಟಿದ್ದಾರೆ.
ಈ ಭಾಗದ ಪ್ರತಿ ತಾಯಂದಿರ ಅಭಿವೃಧ್ಧಿಯನ್ನು ಗಮನದಲ್ಲಿಟ್ಟುಕೊಂಡು ಈ ಸಂಸ್ಥೆಯ ಮೂಲಕ ಲಕ್ಷಾಂತರ ಮಹಿಳೆಯರಿಗೆ ಸ್ವಾಲಂಭನೆ ಜೀವನ ರೂಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ನಮಗೆಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.ನಾನು ಇಂದು ಈ ಸ್ಥಾನದಲ್ಲಿ ಬರಲು ನನ್ನ ತಾಯಿಯ ಮಾರ್ಗದರ್ಶನ ಮತ್ತು ಧೈರ್ಯ ಮುಖ್ಯವಾಗಿದೆ.೨೧ ವರ್ಷದವನಾಗಿದ್ದ ನಾನು ಮೊದಲಬಾರಿಗೆ ಹೆಚ್.ಸಿ.ಪಾಟೀಲ್ ವಿರುದ್ಧ ಜಿಲ್ಲಾ ಪಂಚಾಯತಿ ಚುನಾವಣೆಗೆ ನಿಲ್ಲಲು ನನ್ನ ತಾಯಿ ಧೈರ್ಯ ನೀಡಿದರು.
ಅದರಿಂದಲೇ ನಾನು ಗೆದ್ದು ರಾಜಕೀಯದಲ್ಲಿ ಮೇಲೆ ಬರಲು ಸಾಧ್ಯವಾಗಿದೆ. ಅಂತಹ ಎಲ್ಲಾ ತಾಯಂದಿರ ಏಳಿಗೆಗಾಗಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು ಎಲ್ಲಾ ತಾಯಂದಿರು ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು.ಅಲ್ಲದೆ ಸಂಸ್ಥೆಯ ಯಾವುದೇ ಸಂದರ್ಭದಲ್ಲು ನಾನು ಒಬ್ಬ ಸದಸ್ಯನಾಗಿ ಕೆಲಸ ಮಾಡುವೆ,ಯಾವುದೇ ಕೆಲಸವಿದ್ದಲ್ಲಿ ತಿಳಿಸಿದರೆ ಮುಖ್ಯಮಂತ್ರಿಗಳ ಬಳಿ ಕುಳಿತು ಮಾಡಿಸಿಕೊಂಡು ಬರುವುದಾಗಿ ಭರವಸೆ ನೀಡಿದರು.
ಪ್ರಾಸ್ತಾವಿಕವಾಗಿ ಸಂಘದ ಯಾದಗಿರಿ ಜಿಲ್ಲಾ ನಿರ್ದೇಶಕ ನೀಲಕಂಠರಾಯ ಎಲ್ಹೇರಿ ಮಾತನಾಡಿ,ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿ ಒಟ್ಟು ೩೦೦ ಕೌಶಲ್ಯ ಮತ್ತು ಪ್ರಗತಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.ಬೀದರಿನಿಂದ ಬಳ್ಳಾರಿವರೆಗೆ ೪೯೦೦ ಪ್ರಗತಿ ಕೇಂದ್ರಗಳು ಮತ್ತು ೧೯೦೦ ಕೌಶಲ್ಯ ಕೇಂದ್ರಗಳಿವೆ,೪೦೦ ಜನ ಯುವಕರಿಗೆ ತರಬೇತಿ ನೀಡಿ ಸಂಘದ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸಲಾಗುತ್ತಿದೆ ಎಂದರು.ಸದ್ಯ ತಾಲೂಕಿನಾದ್ಯಂತ ೪೩ ಕೌಶಲ್ಯ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ ಎಂದರು.
ನಂತರ ಸಾಂಕೇತಿಕವಾಗಿ ಕೌಶಲ್ಯ ಕೇಂದ್ರದ ಉದ್ಘಾಟನೆ ಅಂಗವಾಗಿ ಕಾರ್ಯಕ್ರಮದಲ್ಲಿದ್ದ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ನೀಡಿ ಚಾಲನೆ ನೀಡಲಾಯಿತು.ಕಾರ್ಯಕ್ರಮದ ವೇದಿಕೆ ಮೇಲೆ ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ಜೇವರ್ಗಿ,ಉಪಾಧ್ಯಕ್ಷ ಮಹೇಶ ಪಾಟೀಲ್, ಮುಖಂಡರಾದ ಹೆಚ್.ಸಿ.ಪಾಟೀಲ್, ದೊಡ್ಡ ದೇಸಾಯಿ ದೇವರಗೋನಾಲ,ದೊಡ್ಡ ಕೊತಲೆಪ್ಪ ಹಾವಿನ್,ಶ್ರೀನಿವಾಸ ನಾಯಕ ದರಬಾರಿ, ಮೌಲಸಾಬ್, ಉಮೇಶರಡ್ಡಿ ಕೆಂಭಾವಿ ಸೇರಿದಂತೆ ಅನೇಕರಿದ್ದರು.ಸಂಘದ ಸಂಚಾಲಕ ಡಿ.ಸಿ.ಪಾಟೀಲ್ ನಿರೂಪಿಸಿದರು,ಲಕ್ಷ್ಮೀಕಾಂತ ದೇವರಗೋನಾಲ ಸ್ವಾಗತಿಸಿದರು, ಮಾಣಿಕರಾಜ್ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಘದ ಸುರಪುರ ತಾಲೂಕಿನ ಎಲ್ಲಾ ಸಂಚಾಲಕರು ಹಾಗು ಅನೇಕ ಜನ ಮಹಿಳೆಯರು ಭಾಗವಹಿಸಿದ್ದರು.