ಶಹಾಬಾದ: ನಗರದಲ್ಲಿ ಮುಖ್ಯ ರಸ್ತೆಗಳು ಸೇರಿದಂತೆ ಹಲವು ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಕೂಡಲೇ ಲೋಕೋಪಯೋಗಿ ಇಲಾಖೆ ಹಾಗೂ ನಗರಸಭೆಯ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಸ್ನೇಹಲ್ ಜಾಯಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಗರದ ವಾಡಿ ಕ್ರಾಸ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಹಾಗೂ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವರೆಗೆ, ಅಲ್ಲದೇ ಜೇವರ್ಗಿ ಹೋಗುವ ರಸ್ತೆ ಸೇರಿದಂತೆ ಹಲವು ರಸ್ತೆಗಳು ಮಳೆಯಿಂದ ಹಾಳಾಗಿವೆ.ಈ ರಸ್ತೆಗಳಲ್ಲಿ ಗುಂಡಿಗಳಾಗಿದ್ದು ಹಲವಾರು ವಾಹನಗಳು ಅಪಘಾತಕ್ಕೀಡಾಗಿವೆ.ಅನೇಕರಿಗೆ ಗಾಯಗಳಾಗಿವೆ.ಆದರೂ ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಗಳಲ್ಲಿ ನೀರು ಆವರಿಸುತ್ತದೆ.ಇದರಿಂದ ರಸ್ತೆಗಳು ಬಹುಬೇಗನೆ ಹಾಳಾಗುತ್ತದೆ.ಇ? ಅಲ್ಲದೆ ನಗರದ ಹಲವು ರಸ್ತೆಗಳು ಕಿತ್ತು ಹೋಗಿ ಧೂಳಿನಿಂದ ಕೂಡಿವೆ.ಜನರಿಗೆ ಉಸಿರಾಟದ ಸಮಸ್ಯೆ ಉಂಟಾಗುತ್ತಿದೆ.
ಸಾಕಷ್ಟು ಅನುದಾನ ಒದಗಿಸಿದ್ದರೂ ಕಳಪೆ ಮಟ್ಟದ ರಸ್ತೆ ನಿರ್ಮಾಣದಿಂದ ಗುಂಡಿಗಳು ಉಂಟಾಗಿವೆ. ನಗರದ ಜನರು ನಿತ್ಯ ಈ ರಸ್ತೆ ನೋಡಿ ಜನಪ್ರತಿನಿಧಿಗಳಿಗೆ ಹಾಗೂ ಇಲ್ಲಿನ ಮುಖಂಡರಿಗೆ ಶಪಿಸುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳು ಜಾಣ ಕುರುಡಾಗಿದ್ದಾರೆ. ಗುತ್ತಿಗೆದಾರರಿಂದ ಕೆಲಸ ಮಾಡಿಸಿಕೊಳ್ಳದೇ, ನಿರ್ಲಕ್ಷ್ಯಧೋರಣೆ ತೋರುತ್ತಿದ್ದಾರೆ.
ಪರ್ಸೆಂಟೇಜ್ ಸಂಸ್ಕೃತಿ ವ್ಯಾಪಕವಾಗಿ ಬೆಳೆಯುತ್ತಿರುವುದರಿಂದ ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವುದು ಅನುಮಾನ ಎಂಬಂತಾಗಿದೆ. ಕೂಡಲೇ ನಗರದ ಜನತೆಗೆ ಉತ್ತಮ ರಸ್ತೆ ಒದಗಿಸಬೇಕಾಗಿರುವುದು ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಕರ್ತವ್ಯ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವತ್ತ ಮುಂದಾಗಬೇಕು.ತಾತ್ಕಾಲಿವಾಗಿ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.