ಕಲಬುರಗಿ : ಕಲ್ಯಾಣ ಕರ್ನಾತಕ ಪ್ರದೇಶಕ್ಕೆ ೩೭೧ನೇ (ಜೆ) ಕಲಂ ಜಾರಿಯಾದ ನಂತರ ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಸರಕಾರಕ್ಕೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಜನಪ್ರತಿನಿಧಿಗಳಿಗೆ ನಿರಂತರ ಒತ್ತಾಯ ಹೋರಾಟಗಳು ನಡೆಸಿಕೊಂಡು ಬಂದಿದ್ದು, ಅದರಂತೆ ಶಾಸಕರುಗಳು ಸಹ ಸಮಿತಿಯ ಹೋರಾಟಕ್ಕೆ ಸ್ಪಂದಿಸಿ ಸರಕಾರದ ಮೇಲೆ ಅಧಿಕೃತ ಒತ್ತಡ ತಂದಿದ್ದರು.
ಇದಕ್ಕೆ ಪೂರಕವಾಗಿ ಹಿಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ೩೭೧ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಸೇರಿದಂತೆ ವಿಶೇಷ ಕೋಶ ಕಚೇರಿ, ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ, ಕಲಬುರಗಿಯಲ್ಲಿ ಸ್ಥಾಪನೆಯ ಬಗ್ಗೆ ೧೭.೦೯.೨೦೧೯ ರಲ್ಲಿ ಘೋಷಣೆ ಮಾಡಿದ್ದರು.
ಈ ಬೇಡಿಕೆಗೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಸಕಾರಾತ್ಮಕವಾಗಿ ಸ್ಪಂದಿಸಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಸಂದರ್ಭದಲ್ಲಿ ಘೋಷಣೆ ಮಾಡಿರುವಂತೆ ವಿಶೇಷ ಕೋಶ ಕಚೇರಿ ಕಲಬುರಗಿಯಲ್ಲಿ ಸ್ಥಾಪನೆ ಮಾಡುವ ಬಗ್ಗೆ ಆದೇಶಿಸಿರುವುದು ಅದರಂತೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಶಾಶ್ವತ ಕಾರ್ಯದರ್ಶಿಗಳನ್ನು ನೇಮಕ ಮಾಡಿರುವುದು ಸ್ವಾಗತಾರ್ಹವಾದ ಕ್ರಮವಾಗಿದೆ.
ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ಅಸ್ತಿತ್ವಕ್ಕೆ ಬರಲಿರುವ ವಿಶೇಷ ಕೋಶ ಕಚೇರಿಗೆ ಅಪರ ಕಾರ್ಯದರ್ಶಿ ಸ್ಥಾನಮಾನದ ಅಧಿಕಾರಿಗೆ ನೇಮಿಸಿ ಕೋಶ ಕಚೇರಿಗೆ ಬಲಿಷ್ಠ ಸ್ವರೂಪ ನೀಡಬೇಕೆಂದು ಸಮಿತಿ ಮಾನ್ಯ ಮುಖ್ಯಮಂತ್ರಿಗಳಲ್ಲಿ ಆಗ್ರಹಿಸುತ್ತದೆ.
ಅದರಂತೆ ಈ ಕೋಶ ಕಚೇರಿಯ ಮುಖಾಂತರ ೩೭೧ನೇ(ಜೆ) ಕಲಂ ಅಡಿ ನಮ್ಮ ಪಾಲಿನ ಎಲ್ಲಾ ಇಲಾಖೆಗಳ ನೇಮಕಾತಿಗಳು ಮತ್ತು ಮುಂಬಡ್ತಿಗಳು ಕಟ್ಟುನಿಟ್ಟಾಗಿ ಸುಸೂತ್ರವಾಗಿ ಸಹಜ ಪ್ರಕ್ರಿಯೆಯಂತೆ ಜರುಗಲು ಸೂಕ್ತ ಕ್ರಮಕ್ಕಾಗಿ ಮುಖ್ಯಮಂತ್ರಿಗಳಿಗೆ ಸಮಿತಿ ಮನವರಿಕೆ ಮಾಡುತ್ತದಲ್ಲದೆ ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಯ ಬಗ್ಗೆ ಮತ್ತು ೩೭೧ನೇ(ಜೆ) ಕಲಂ ನಿಯಮಗಳಲ್ಲಿರುವ ದೋಷಗಳ ನಿವಾರಣೆ ಬಗ್ಗೆ ಅವರು ಭರವಸೆ ನೀಡಿರುವಂತೆ ಆದಷ್ಟು ಶೀಘ್ರ ಅವರ ಅಧ್ಯಕ್ಷತೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಸಚಿವರ, ಶಾಸಕರ, ಪರಿಣಿತ ಹೋರಾಟಗಾರರ ಹಾಗೂ ಸಂಬಂಧಪಟ್ಟ ಉನ್ನತ ಅಧಿಕಾರಿಗಳ ಸಭೆಯನ್ನು ಕರೆಯಲು ಮತ್ತೊಮ್ಮೆ ಮುಖ್ಯಮಂತ್ರಿಗಳಲ್ಲಿ ಸಮಿತಿ ಆಗ್ರಹಿಸುತ್ತದೆ.