ಕಲಬುರಗಿ:ಕಳೆದ ನಾಲ್ಕು ದಶಕಗಳಿಂದ ರಾಜ್ಯದ ಯಾವ ಮೂಲೆಯಲ್ಲಿಯೇ ಅನ್ಯಾಯ, ಅತ್ಯಾಚಾರ, ಮೋಸ ನಡೆದಿದ್ದರೂ ಇವುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮಾರುತಿ ಮಾನ್ಪಡೆ ಕಲ್ಯಾಣ ಕರ್ನಾಟಕದ ಹೋರಾಟದ ಗಟ್ಟಿ ಧ್ವನಿಯಾಗಿದ್ದರು. ರೈತ, ಕೃಷಿ, ಕೂಲಿ, ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರತಿಭಟನೆ, ಹೋರಾಟ ಹಮ್ಮಿಕೊಳ್ಳುತ್ತಿದ್ದ ಇವರು ಒಬ್ಬ ಜನಪರ ಹೋರಾಟಗಾರರಾಗಿದ್ದರು ಎಂದು ಪತ್ರಕರ್ತ-ಲೇಖಕ ಡಾ. ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ಕಮಲಾಪುರ ತಾಲ್ಲೂಕಿನ ಅಂಬಲಗಾ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಮಾರುತಿ ಮಾನ್ಪಡೆ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಬಸವಣ್ಣ, ಕಾರ್ಲ್ ಮಾರ್ಕ್ಸ್, ಅಂಬೇಡ್ಕರ್ ಹೋರಾಟದ ಬಗ್ಗೆ ನಿಶ್ಚಿತ ಮಾರ್ಗ ಕಂಡುಕೊಂಡಿದ್ದರು ಎಂದು ತಿಳಿಸಿದರು.
ತೊಗರಿ, ಕಬ್ಬು, ಭತ್ತ, ಹೆಸರು- ಹೀಗೆ ಯಾವ ಬೆಳೆಗಾರರ ಸಮಸ್ಯೆಯೇ ಇರಲಿ, ಗ್ರಾಪಂ ನೌಕರರು, ದಿನಗೂಲಿ ಕಾರ್ಮಿಕರು, ಆಶಾ ಕಾರ್ಯಕರ್ತೆಯರು ಹೀಗೆ ಯಾರದೇ ಸಂಕಷ್ಟವೇ ಇರಲಿ- ಅವರ ಪರ ಹೋರಾಟಕ್ಕೆ ಮುಂದಾಗುತ್ತಿದ್ದರು. ಹೀಗೆ ಜನಪರ, ಜೀವಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಇವರು ತಾವು ನಂಬಿದ ತತ್ವ, ಸಿದ್ಧಾಂತಕ್ಕೆ ಸದಾ ಅಂಟಿಕೊಂಡಿರುತ್ತಿದ್ದರು. ಆ ತತ್ವ, ಸಿದ್ಧಾಂತಗಳಿಗೆ ಸ್ವಲ್ಪ ಕುಂದುಂಟಾದರೂ ಸಾಕು, ಕೆಂಡಾಮಂಡಲಾವಾಗುತ್ತಿದ್ದರು. ಅವರು ಎಷ್ಟೇ ದೊಡ್ಡವರಿರಲಿ, ಅವರು ಯಾರೇ ಆಗಿರಲಿ ಅವರ ವಿರುದ್ಧ ಸೆಟೆದು ನಿಲ್ಲುತ್ತಿದ್ದರು ಎಂದರು.
ಸಾನ್ನಿಧ್ಯ ವಹಿಸಿದ್ದ ಲಾಡಮುಗಳಿ ವಿರುಪಾಕ್ಷೇಶ್ವರ ಮಠದ ಅಭಿನವ ಬಸವಲಿಂಗ ಸ್ವಾಮಿಗಳು ಮಾತನಾಡಿ, ನೊಂದು, ಬೆಂದವರ ಬಾಳಿಗೆ ಬೆಳಕಾಗಿದ್ದ ಮಾನ್ಪಡೆಯವರು, ಸಮಾಜದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ಅವರ ಸರಳ, ಪ್ರಾಮಾಣಿಕ, ಕ್ರಿಯಾಶೀಲ ಬದುಕು ನಮ್ಮೆಲ್ಲರಿಗೆ ಆದರ್ಶವಾಗಬೇಕು ಎಂದು ಹೇಳಿದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಮಾತನಾಡಿ, ನಿಮ್ಮೆಲ್ಲರ ಸಹಕಾರದೊಂದಿಗೆ ಮುಂದಿನ ವರ್ಷದೊಳಗೆ ಅವರ ಸ್ಮರಣೆಯಲ್ಲಿ ಅಭಿನಂದನ ಗ್ರಂಥ ಹೊರ ತರಲಾಗುವುದು ಎಂದು ತಿಳಿಸಿದರು.
ಶರಣಬಸಪ್ಪ ಕೋಳಸೂರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ. ಅಧ್ಯಕ್ಣ ಭೂಷಣ ಬಿರಾದಾರ, ವಿಜಯಕುಮಾರ ಚವ್ಹಾಣ, ಕಲ್ಯಾಣ ಗಾಯಕವಾಡ, ಚಿದಂಬರರಾವ ಭಂಕೂರ, ಗುಂಡಪ್ಪ ಕಾಳಗಿ, ಸುರೇಶ ಲೇಂಗಟಿ, ಮಲ್ಲಿಕಾರ್ಜುನ ಮೂಲಗೆ, ವಿಠ್ಠಲ ಚಿಕಣಿ, ಕುಪೇಂದ್ರ, ಶಿವಶರಣಪ್ಪ ಧನ್ನೂರ, ಬಾಬುರಾವ ಹಾಗರಗಿ, ಗಣೇಶ, ಶಿವಕುಮಾರ ಪಾಟೀಲ, ರೇವಣಸಿದ್ದಪ್ಪ ಕಲ್ಬುರ್ಗಿ, ಬಿ. ಚಂದ್ರಶೇಖರ, ಶ್ಯಾಮಗೌಡ ಪಾಟೀಲ ಇತರರು ವೇದಿಕೆಯಲ್ಲಿದ್ದರು.
ಮಲ್ಲಿನಾಥ ಸ್ವಾಗತಿಸಿದರು. ಸುನಿಲ್ ಮಾನ್ಪಡೆ ಪ್ರಾಸ್ತಾವಿಕ ಮಾತನಾಡಿ ವಂದಿಸಿದರು.