ಸುರಪುರ: ತಾಲೂಕಿನ ಕಚಕನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಯೋಜನೆಯಡಿಯಲ್ಲಿ ಮಂಜೂರಾದ ಆಶ್ರಯ ಯೋಜನೆ ಮನೆಗಳನ್ನು ನಿರ್ಮಿಸಿಕೊಳ್ಳದೆ ಬೋಗಸ್ ಜಿ.ಪಿ.ಎಸ್ ಮೂಲಕ ಬೋಗಸ್ ಬಿಲ್ ಪಡೆಯುತ್ತಿದ್ದಾರೆ ಎಂದು ಕೆ.ತಳ್ಳಳ್ಳಿ ಗ್ರಾಮ ಮಾಜಿ ಗ್ರಾಮ ಪಂಚಾಯತಿ ಸದಸ್ಯ ದೇವಿಂದ್ರಪ್ಪ ದೊರಿ ಆರೋಪಿಸಿದ್ದಾರೆ.
ಈ ಕುರಿತು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸಿರುವ ಅವರು,ಕಚಕನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಅಲೆಮಾರಿ ಜನಾಂಗದವರಿಗೆ ಡಿ.ದೇವರಾಜ ಅರಸು ಸ್ಕೀಮ್ ಮತ್ತು ಪ್ರಧಾನ ಮಂತ್ರಿ ಆವಾಸ ಯೋಜನೆ ಅಡಿಯಲ್ಲಿ ಮಂಜೂರಾದ ಮನೆಗಳನ್ನು ಫಲಾನುಭವಿಗಳು ಮನೆ ಕಟ್ಟಿಕೊಳ್ಳದಿದ್ದರು ಅವರಿಗೆ ಬೇರೆಯವರ ಮನೆ ತೋರಿಸಿ ಜಿ.ಪಿ.ಎಸ್ ಮಾಡಿ ಬಿಲ್ ಮಾಡಲಾಗುತ್ತಿದೆ.ಆದರೆ ನಿಜವಾದ ಫಲಾನುಭವಿಗಳಿಗೆ ಬಿಲ್ ಮಾಡಿಕೊಡದೆ ಇಲ್ಲದ ಸಬೂಬು ಹೇಳಲಾಗುತ್ತಿದೆ.ಇದಕ್ಕೆ ಕಾರಣ ನಿಜವಾದ ಫಲಾನುಭವಿಗಳು ಲಂಚ ಕೊಡದಿದ್ದಕ್ಕೆ ಸುಳ್ಳು ನೆಪ ಹೇಳಲಾಗುತ್ತಿದೆ.
ಇದಕ್ಕೆ ಜಿ.ಪಿ.ಎಸ್ ಮಾಡುವ ನೌಕರ ಮತ್ತು ಪಂಚಾಯತಿ ಅಧ್ಯಕ್ಷರು ಶಾಮಿಲಾಗಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದು,ಇದಕ್ಕೆ ಕಾರಣರಾಗಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೂಡಲೇ ನಿಜವಾದ ಫಲಾನುಭವಿಗಳು ಮನೆ ಕಟ್ಟಿಕೊಂಡವರಿಗೆ ಬಿಲ್ ನೀಡಬೇಕೆಂದು ಆಗ್ರಹಿಸಿ ಇಒ ಅವರಿಗೆ ಮನವಿ ಮಾಡಿದ್ದಾರೆ.