ಸುರಪುರ: ಕಳೆದ ದಿನಗಳ ಹಿಂದೆ ನಿಧನರಾದ ನಟ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥವಾಗಿ ರಂಗಂಪೇಟೆಯ ತಿಮ್ಮಾಪುರದಲ್ಲಿನ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮರಣೋತ್ಸವ ಹಾಗು ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ,ನಟ ಪುನೀತ್ ರಾಜಕುಮಾರ್ ಅವರು ಸುಮಾರು ಒಂದು ಸಾವಿರದ ಆರುನೂರಕ್ಕೂ ಅಧಿಕ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.ಎಂದು ಯಾರ ಮುಂದೆಯೂ ಹೇಳಿಕೊಳ್ಳದೆ ತಮ್ಮ ಸಮಾಜ ಸೇವೆಯನ್ನು ಮುಂದುವರೆಸಿದ್ದ ಮಹಾನ್ ವ್ಯಕ್ತಿ ನಟ ಪುನೀತ್ ರಾಜಕುಮಾರ್ ಆಗಿದ್ದರು.
ಅಂತಹ ಮೇರು ನಟನ ಅಗಲಿಕೆ ನಿಜಕ್ಕೂ ಈ ನಾಡಿಗೆ ಬಹುದೊಡ್ಡ ನಷ್ಟವಾಗಿದೆ.ಆದ್ದರಿಂದ ಅವರ ಸಮಾಜ ಸೇವೆಯನ್ನು ಸ್ಪೂರ್ತಿಯಾಗಿಸಿಕೊಂಡಿರುವ ನಾವೆಲ್ಲರು ಎಐಎಮ್‌ಐಎಮ್ ಸಂಘಟನೆ ನೇತೃತ್ವದಲ್ಲಿ ಇಲ್ಲಿಯ ಗಂಟೆಪ್ಪ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮೌಲಾನಾ ಅಹ್ದುಲ್ ಕಲಾಂ ಆಜಾದ್ ಶಾಲೆಯ ಮಕ್ಕಳಿಗೆ ಕಲಿಕಾ ಸಾiಗ್ರಿಗಳನ್ನು ವಿತರಣೆ ಮಾಡುವ ಮೂಲಕ ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸಲಾಗುತ್ತಿದೆ ಎಂದರು.
ನಂತರ ಸುಮಾರು ನೂರಕ್ಕೂ ಹೆಚ್ಚು ಮಕ್ಕಳಿಗೆ ಕಾಪಿ ಪೆನ್ನು ಸೇರಿದಂತೆ ವಿವಿಧ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಜಯಕರ್ನಾಟಕ ತಾಲೂಕು ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಕಬಾಡಗೇರಾ,ಕರವೇ ಜಿಲ್ಲಾ ಉಪಾಧ್ಯಕ್ಷ ಸಂಜೀವ ರಡ್ಡಿ ದರಬಾರಿ,ಡಿಎಸ್‌ಎಸ್ ಅಲ್ಪಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷ ಎಮ್.ಪಟೇಲ್,ಎಐಎಮ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಯ್ಯದ್ ಸಮೀರ್,ಮುಖಂಡರಾದ ಖಾಜಾ ಅಜ್ಮೀರ್,ಮುನೀರ್ ಬಾಷಾ,ಖಾಜಾ ಹುಸೇನ್ ಕಾಡಾದಾರಾ,ಪ್ರಧಾನಗುರು ಮುದ್ದಪ್ಪ ಅಪ್ಪಾಗೊಳ್,ಶಿಕ್ಷಕ ಶಕೀಲ್ ಅಹ್ಮದ್ ಸೇರಿದಂತೆ ಅನೇಕರಿದ್ದರು.