ಕಲಬುರಗಿ : ಲಾಕ್‌ಡೌನ್ ಪರಿಹಾರ ರೂ.೩ ಸಾವಿರವನ್ನು ಎಲ್ಲ ಕಾರ್ಮಿಕರಿಗೂ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಶನ್ ಸದಸ್ಯರು ಕಾರ್ಮಿಕ ಇಲಾಖೆ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ಕೋವಿಡ್‌ನಿಂದ ಮೃತಪಟ್ದ ನೋಂದಾಯಿತ ಕಾರ್ಮಿಕರಿಗೆ ಪರಿಹಾರ ನೀಡಬೇಕು ಮತ್ತು ಕೋವಿಡ್‌ನಿಂದ್ ಗುಣಮುಖರಾದ ಫಲಾನುಭವಿಗಳಿಗೆ ವೈದ್ಯಕೀಯ ವೆಚ್ಚ ಭರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಫಲಾನುಭವಿಗಳು ಸೌಲಭ್ಯಕ್ಕಾಗಿ, ಸಲ್ಲಿಸಿದ ಅರ್ಜಿಗಳು ತಿರಸ್ಕೃತಗೊಂಡಾಗ ಅವುಗಳನ್ನು ಪುನರ್ ಪರಿಶೀಲಿಸಲು ಮೇಲ್ಮನವಿ ಸಮಿತಿ ರಚಿಸುವ ಕುರಿತು ಮಂಡಳಿ ಸಭೆಯಲ್ಲಿ ತೀರ್ಮಾನ ಆಗಿದೆ. ಜಿಲ್ಲಾ ಮಟ್ಟದಲ್ಲಿ ಕಟ್ಟಡ ಕಾರ್ಮಿಕ ಸಂಘಗಳನ್ನು ಒಳಗೊಂಡ ಮೇಲ್ಮನವಿ ಸಮಿತಿಗಳನ್ನು ಕೂಡಲೇ ರಚಿಸಬೇಕು ಎಂದು ಒತ್ತಾಯಿಸಿದರು.
ವೈದ್ಯಕೀಯ ಸಹಾಯಧನ ಹೆಚ್ಚಿಸಿ ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥಪಡಿಸಬೇಕು. ಅಪಘಾತ ಮರಣಕ್ಕೆ ರೂ.೫.ಲಕ್ಷ ಪರಿಹಾರ ನೀಡಲಾಗುತ್ತಿದೆ. ಅದನ್ನು ರೂ.೧೦.ಲಕ್ಷಕ್ಕೆ ಹೆಚ್ಚಿಸಬೇಕು. ಅಕಾಲಿಕವಾಗಿ ಮರಣ ಹೊಂದಿದವರ ಅವಲಂಬಿತರ ಕುಟುಂಬಕ್ಕೆ ಪಿಂಚಿಣಿ ನೀಡಬೇಕು ಎಂದು ಮನವಿ ಮಾಡಿದರು.
ಸ್ಥಳೀಯವಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಪ್ರತಿ ತಿಂಗಳೂ ಕಾರ್ಮಿಕ ಸಂಘಗಳ ಸಭೆ ಕರೆಬೇಕು. ಜಿಲ್ಲೆಯಲ್ಲಿ ಸಕಾಲ ಅಧಿನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಪ್ರತಿ ತಾಲ್ಲೂಕಿಗೆ ಒಬ್ಬ ಕಾರ್ಮಿಕ ನಿರೀಕ್ಷಕರನ್ನು ನೇಮಿಸಬೇಕು. ಕಟ್ಟಡ ಕಾರ್ಮಿಕರಿಗೆ ಸೋಮವಾರ ವಾರದ ರಜೆ ನೀಡಬೇಕು ಎಂದು ಆಗ್ರಹಿಸಿದರು.
ಈ ಅನಿರ್ದಿಷ್ಟಾವಧಿ ಧರಣಿಯಲ್ಲಿ ಶ್ರೀಮಂತ ಬಿರಾದಾರ, ನಾಗಯ್ಯ ಹಣಮಂತ ಪೂಜಾರಿ, ಸ್ವಾಮಿ, ಬಾಬು ಹೂವಿನಹಳ್ಳಿ, ಮಾಲಿಪಾಟೀಲ, ಕೋಟನೂರ, ನಾಗಪ್ಪ ರಾಯಚೂರ್, ಕೆ.ನೀಲಾ, ಭೀಮಶೆಟ್ಟಿ ಯಂಪಳ್ಳಿ, ಸುಧಾಮ ಧನ್ನಿ, ಅಲ್ತಾಫ್ ಇನಾಂದಾರ್, ಜಾವೇದ್ ಹುಸೇನ್, ಶೆಕಮ್ಮ ಕುರಿ, ಸಾಯಬಣ್ಣ ಗುಡುರು, ದಿಲೀಪ್ ನಾಗೂರ ಇದ್ದರು.