ಮುಂದಿನ ಬಾರಿ ಕಾಂಗ್ರೆಸ್ ಗೆ 140 ಸ್ಥಾನ; ನಾನೇ ಸಿಎಂ ಆಗುತ್ತೇನೆ ಎಂದ ಶಾಮನೂರ ಶಿವಶಂಕರಪ್ಪ

0
11

ದಾವಣಗೆರೆ: ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಎದ್ದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯರ ನಡುವೆ ಮುಸುಕಿನ ಗುದ್ದಾಟ ಗುಟ್ಟಾಗಿ ಉಳಿದಿಲ್ಲ. ಹಲವು ಕಾರ್ಯಕ್ರಮಗಳಲ್ಲಿ ಕಾರ್ಯಕರ್ತರು ತಮ್ಮ ನಾಯಕರ ಪರ ಘೋಷಣೆ ಹಾಕಿದ್ದು ಹಳೆಯ ವಿಚಾರ. ಮುಂದಿನ ಸಿಎಂ ಯಾರಾಗಬೇಕೆಂಬುದು ಹೈಕಮಾಂಡ್ ನಿರ್ಧರಿಸುತ್ತದೆ ಎಂಬ ಮಾತನ್ನು ಈಗಾಗಲೇ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಹೇಳಿದ್ದರೂ, ಒಳಗೊಳಗೆ ಈ ಬಗ್ಗೆ ಕಾಂಗ್ರೆಸ್ ಆಂತರಿಕ ವಲಯದಲ್ಲಿ ಚರ್ಚೆಯಾಗುತ್ತಲೇ ಇದೆ.

ಇನ್ನು ಕಾಂಗ್ರೆಸ್‌ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ‌. ಪರಮೇಶ್ವರ್ ಸೇರಿದಂತೆ ಘಟಾನುಘಟಿ ನಾಯಕರೇ ಇದ್ದಾರೆ. ಇವರೂ ಸಹ ಜೀವನದಲ್ಲಿ ಒಮ್ಮೆಯಾದರೂ ಸಿಎಂ ಆಗಬೇಕೆಂಬ ಕನಸು ಕಂಡಿರುವವರೇ. ಆದರೆ ಈಗ ಮತ್ತೆ ಹೊಸದೊಂದು ಹೆಸರು ಕೇಳಿ ಬಂದಿದೆ. ಅಂದಹಾಗೆ, ಈಗ ನಾನು ಸಿಎಂ ಸ್ಥಾನದ ಆಕಾಂಕ್ಷಿ ಎಂದು ಹೇಳಿರುವುದು ಕಾಂಗ್ರೆಸ್‌ನ ಹಿರಿಯ ನಾಯಕರೂ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ.

Contact Your\'s Advertisement; 9902492681

ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್‌ನ ಹಿರಿಯ ನಾಯಕರು. ಜೊತೆಗೆ ಕೆಪಿಸಿಸಿ ಖಜಾಂಚಿಯೂ ಹೌದು. ಈ ಹಿನ್ನೆಲೆಯಲ್ಲಿ ನಾನು ಸಿಎಂ ಆಗುತ್ತೇನೆ, ಅದರಲ್ಲಿ ತಪ್ಪೇನಿದೆ. ನಾನೂ ಕೂಡ ಸಿಎಂ ಕುರ್ಚಿ ಆಕಾಂಕ್ಷಿಯೇ ಎಂದು ಹೇಳಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಶಾಮನೂರು ಶಿವಶಂಕರಪ್ಪ ಹೇಳಿದ್ದೇನು?: “ಮುಂದಿನ ಬಾರಿ ಸಿಎಂ ನಾನೇ ಆಗ್ತೇನೆ. ಅದರಲ್ಲಿ ಅದರಲ್ಲಿ ತಪ್ಪೇನಿದೆ. ಮುಂದಿನ ವಿಧಾನಸಭೆ ಚುನಾವಣೆ ಫಲಿತಾಂಶ ಬರಲಿ, ಆಗ ನಾನು ಹೇಳುತ್ತೇನೆ. ನಾನು ಸಿಎಂ ಸ್ಥಾನದ ಆಕಾಂಕ್ಷಿ, ಅದರಲ್ಲೇನಿದೆ,” ಎಂದಿದ್ದಾರೆ.

ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಗೆ ಸಿದ್ದರಾಮಯ್ಯ ಹಾಗೂ ಡಿ‌.ಕೆ. ಶಿವಕುಮಾರ್ ನಡುವೆ ಪೈಪೋಟಿ ಇದೆ‌. ಯಾರಾಗ್ತಾರೆ ಸಿಎಂ ಎಂಬ ಮಾಧ್ಯಮದವರ ಪ್ರಶ್ನೆಗೆ ಶಾಮನೂರು ಶಿವಶಂಕರಪ್ಪ ಅಚ್ಚರಿ ಹೇಳಿಕೆ ನೀಡುವ ಮೂಲಕ ಕುತೂಹಲ ಮೂಡಿಸಿದ್ದಾರೆ.

“ಕಾಂಗ್ರೆಸ್‌ಗೆ ಈಗ ಎಲ್ಲೆಡೆ ಒಳ್ಳೆಯ ವಾತಾವರಣ ಇದೆ. ಜನರು ಬಿಜೆಪಿ ಮೇಲೆ ಬೇಜಾರಾಗಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 140 ಸ್ಥಾನ ಗೆಲ್ಲುತ್ತೇವೆ. ವಿಧಾನಸಭೆ ಚುನಾವಣೆ ಆದ ಮೇಲೆ ಸಿದ್ದರಾಮಯ್ಯರೂ ಆಗಬಹುದು. ನಾನು ಆಗಬಹುದು. ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ. ವಿಧಾನ ಪರಿಷತ್ ಚುನಾವಣೆಯಲ್ಲೂ ಹೆಚ್ಚಿನ ಸ್ಥಾನ ಕಾಂಗ್ರೆಸ್ ಗೆಲ್ಲಲಿದೆ,” ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲಾ ಪಕ್ಷದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಶಾಮನೂರು ಶಿವಶಂಕರಪ್ಪನವರಿಗೆ ಈಗ 90ರ ಹರೆಯ. ಆದರೂ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುತ್ತಾರೆ, ಚಟುವಟಿಕೆಯಿಂದ ಓಡಾಡುತ್ತಾರೆ. ಈಗ ನೀಡಿರುವ ಒಂದು ಹೇಳಿಕೆ ಈಗ ಕಾಂಗ್ರೆಸ್ ವಲಯದಲ್ಲಿ ಬಿಸಿಬಿಸಿ ಚರ್ಚೆಗೂ ಕಾರಣವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here