ಸುರಪುರ: ಸರಕಾರ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ಮಾರ್ಚ್ ೧೭ರ ವರೆಗೆ ಹಿಂಗಾರು ಬೆಳೆಗೆ ನೀರು ಬಿಡುವ ಕುರಿತು ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ರೈತರು ಭತ್ತ ನಾಟಿ ಕಾರ್ಯ ಆರಂಭಿಸಿದ್ದಾರೆ.
ತಾಲೂಕಿನ ದೇವಾಪುರ,ತಿಂಥಣಿ,ಹಾವಿನಾಳ,ಶೆಳ್ಳಗಿ ಸೇರಿದಂತೆ ಅನೇಕ ಕಡೆಗಳಲ್ಲಿ ರೈತರು ಭತ್ತ ನಾಟಿ ಆರಂಭಿಸಿದ್ದಾರೆ.ದೇವಾಪುರ ಗ್ರಾಮದ ಪ್ರಗತಿಪರ ರೈತ ಚೆನ್ನಪ್ಪಗೌಡ ಜಕ್ಕನಗೌಡ್ರ ಈ ಕುರಿತು ಮಾತನಾಡಿ,ಸರಕಾರ ಮಾರ್ಚ್ ೧೭ರ ವರೆಗೆ ನೀರು ಬಿಡುವುದಾಗಿ ಹೇಳಿದೆ,ಆದರೆ ಎಲ್ಲಾ ರೈತರ ಬೆಳೆಗಳು ಕಟಾವಿಗೆ ಬರಲು ಕನಿಷ್ಠ ಏಪ್ರಿಲ್ ೧೦ ವರೆಗೆ ನೀರಿನ ಅವಶ್ಯಕವಿದೆ,ಆದರೆ ಸರಕಾರ ಮಾರ್ಚ್ ೧೭ರ ವರೆಗೆ ಎಂದಿದೆ ಏನಾದರು ಆಗಲಿ ಎಂದು ಸಾವಿರಾರು ರೂಪಾಯಿ ಖರ್ಚು ಮಾಡಿ ಗೊಬ್ಬರ ಬೀಜ ಮತ್ತು ನಾಟಿ ಮಾಡಲು ಕೂಲಿ ಕಾರ್ಮಿಕರನ್ನು ಕರೆತಂದು ಭತ್ತ ನಾಟಿಯನ್ನು ಮಾಡುತ್ತಿದ್ದೇವೆ.
ಈಗಾಗಲೇ ಮುಂಗಾರು ಬೆಳೆ ಆರಂಭದಲ್ಲಿ ನೆರೆ ಬಂದು ಹಾಳಾಗಿದೆ,ನಂತರ ಮತ್ತೆ ನಾಟಿ ಮಾಡಿದ್ದೇವೆ,ಆದರೆ ಲಕ್ಷಾಂತರ ರೂಪಾಯಿ ಸಾಲ ಮಾಡಿ ವ್ಯವಸಾಯ ಮಾಡುತ್ತೇವೆ,ಆದರೆ ನೆರೆಯಿಂದಾಗಿ ಬೆಳೆ ಹಾಳಾದರೆ ಸರಕಾರ ಸರಿಯಾದ ಪರಿಹಾರ ನೀಡದೆ ರೈತರಿಗೆ ನೆರವಾಗುವುದಿಲ್ಲ.ಆದರೂ ಅನಿವಾರ್ಯವಾಗಿ ಎಲ್ಲಾ ರೈತರು ಈಗ ಧೈರ್ಯಮಾಡಿ ಹಿಂಗಾರು ನಾಟಿ ಆರಂಭಿಸಿದ್ದೇವೆ ಸರಕಾರ ಹೇಳಿದಂತೆ ಮಾರ್ಚ್ ೧೭ರ ವರೆಗೆ ಬಿಟ್ಟರೆ ಎಲ್ಲಾ ರೈತರ ಬೆಳೆಗಳು ಬರುವುದಿಲ್ಲ,ಆದ್ದರಿಂದ ಏಪ್ರಿಲ್‌ವರೆಗೆ ನೀರು ಬಿಡುವಂತೆ ಒತ್ತಾಯಿಸುತ್ತೇವೆ ಎನ್ನುತ್ತಾರೆ.
ಇದರ ಮದ್ಯೆ ದೇವಾಪುರ ಗ್ರಾಮದ ಅನೇಕ ಜನ ಕೃಷ್ಣಾ ನದಿ ಪಾತ್ರದ ರೈತರು ಭತ್ತ ನಾಟಿಯನ್ನು ಆರಂಭಿಸುವ ಮೂಲಕ ಹಿಂಗಾರು ಬೆಳೆಯ ಬೇಸಾಯ ಆರಂಭಿಸಿದ್ದಾರೆ.