ರಾಜೇಶ್ವರಿ ಮೇಡಂಗೆ ವಿದಾಯ

0
31

‘ ಒಳ್ಳೆ ಕಂಪನಿ ಕೊಟ್ಟೆ ಮಾರಾಯ್ತಿ ‘ ಅಂತ ಪೂರ್ಣಚಂದ್ರ‌ ತೇಜಸ್ವಿ ತಮ್ಮ ಜೀವನ ಯಾನದಲ್ಲಿ ಜೊತೆಯಾದ ಸಂಗಾತಿ ರಾಜೇಶ್ವರಿ
ಯವರಿಗೊಮ್ಮೆ ತಮ್ಮ ಕೊನೆಯ ದಿನಗಳಲ್ಲಿ ಹೇಳಿದ್ದರು. ತೇಜಸ್ವಿಯವರ ಬದುಕಿನ ಶೈಲಿಯ ಬಗ್ಗೆ ಅಭಿಮಾನವೋ ಅಥವಾ ಬರೀ ಕುತೂಹಲ ಇರುವವರು ಹೀಗೆ ಬಹು ದೀರ್ಘ ಕಾಲ ಅವರೊಂದಿಗೆ ಇರಲಾಗುತ್ತಿರಲಿಲ್ಲ ಅನಿಸುತ್ತೆ. ಬಹುಷ ರಾಜೇಶ್ವರಿಯವರದ್ದು ಬೇಷರತ್ ಪ್ರೀತಿಯ ಭಾವನೆ ಹಾಗೂ ಸ್ನೇಹಸಾಂಗತ್ಯ..

ಹಾಗಾಗಿ ತೇಜಸ್ವಿ ಓರ್ವ ಸೃಜನಶೀಲ ಬರಹಗಾರರಿಗೆ ಬೇಕಾಗುವ ಪೂರ್ಣ‌ ಬೆಂಬಲ ಮತ್ತು‌ ಸ್ವಾತಂತ್ರ ಪಡೆದಿದ್ದರು ಅನಿಸುತ್ತೆ. ರಾಜೇಶ್ವರಿಯವರು ತಮ್ಮ ತೇಜಸ್ವಿ ನೆನಪಿನ ಬರಹದಲ್ಲಿ ಅವರ ಕಾಲೇಜು ದಿನಗಳನ್ನು‌ ನೆನೆಯುತ್ತಾ ತೇಜಸ್ವಿ ಸೈಕಲಿನಲ್ಲಿ ಬರುವದು ಹೋಗುವುದೆಲ್ಲ ಅದು ಹೇಗೆ ಲೇಡಿಸ್ ರೂಂನಲ್ಲಿ ರೋಮಾಂಚನ ಹುಟ್ಟಿಸುತ್ತಿತ್ತೆಂದು ದಾಖಲಿಸಿದ್ದಾರೆ. ತೇಜಸ್ವಿ ಕಾಣಿಸಿಕೊಂಡರೆ ಸಾಕು ಅವರನ್ನು ನೋಡಲು ಹುಡುಗಿಯರು ಆ ಕಿಟಕಿ ಈ ಕಿಟಕಿ ಎಂದು ಇಣುಕುತ್ತಿದ್ದರಂತೆ.

Contact Your\'s Advertisement; 9902492681

ಆದರೆ ರಾಜೇಶ್ವರಿಯವರು

‘ ತೇಜಸ್ವಿ ಬಂದರೆ ನನಗೇನು ‘

ಅಂತ ತಾವು ಇರುವಲ್ಲೇ ಇರುತ್ತಿದ್ದರಂತೆ, ಆದರೂ ಅವರಿಗೆ ತೇಜಸ್ವಿ ಬಗ್ಗೆ ಕುತೂಹಲ..
ಅದು ಪರಿಚಯವಾಗಿ.. ಪ್ರೇಮವಾಗಿ ಹರಳುಗಟ್ಟಿ ಬಹು ದೀರ್ಘಕಾಲ ಬಾಳಿಕೆಬಂತು.

ತೊಂಬತ್ತರ ದಶಕದಲ್ಲಿ ನಾನು ಕನಕಪುರದಲ್ಲಿದ್ದಾಗ ಎನ್. ಸಿದ್ದೇಗೌಡ, ಎಂಸಿ ನಾಗರಾಜ್ ಜೊತೆ ಎಂಟತ್ತು ದಿನಗಳ ಕರ್ನಾಟಕ ಸೈಕಲ್ ಟೂರ್ ಮಾಡಿದ್ದೆವು. ಹಾಗೇ ಮೂಡಿಗೆರೆಗೆ ಹೋಗಿ ತೇಜಸ್ವಿ ಭೇಟಿಯಾಗಿ ಸಾಹಿತ್ಯ ರಾಜಕೀಯ ಹೋರಾಟಗಳ ವಿಚಾರ ಮಾತಾಡಿ ಬಂದಿದ್ದೆವು. ಅವತ್ತು ಮೇಡಂ ನಮಗೆಲ್ಲ ಟೀ ನೀಡಿದ್ದರು.

ನಾವಾಗ ಇನ್ನೂ ಎಳೆಯರು, ವಿಚಾರವಿದ್ದು ವಿವೇಚನೆಯಿರಲಿಲ್ಲ ವೇನೋ.. ಏಕೆಂದರೆ ಅದರ ಮರುವಾರ ಲಂಕೇಶ್ ನಲ್ಲಿ ತೇಜಸ್ವಿ ಬರೆಯುತ್ತಾ ‘ ಧರ್ಮಸ್ಥಳಕ್ಕೆ ಬರುವಂತೆ ನಮ್ಮನೆಗೆ ಜನ ಬರ್ತಿದಾರೆ, ಯುವಕರಲ್ಲಿ ಕ್ಷೋಬೆ ಬೆಳೀತಿದೆ ‘ ಅಂತೆಲ್ಲ ಹೇಳಿದ್ದರು. ನಂತರ ಅಗ್ನಿ ಪತ್ರಿಕೆಯಲ್ಲಿ ನಾನೊಮ್ಮೆ ತೇಜಸ್ವಿಯವರ‌ ಕೆಲವು ಉಡಾಫೆ ರಾಜಕೀಯ ಗ್ರಹಿಕೆಗಳನ್ನು ಕಟುವಾಗಿ ಟೀಕಿಸಿ ಬರೆದಿದ್ದೆ. ತೇಜಸ್ವಿಯವರು ನನ್ನ ಬಗ್ಗೆ ಮಂಜುನಾಥ ಅದ್ದೆ ಬಳಿ ಕೇಳಿ ತಿಳಿದು ಸುಮ್ಮನಾಗಿದ್ದರು, ನಾನವರನ್ನು ಮತ್ತೆ ಭೇಟಿಯಾದಾಗ ಸರಳ ಸ್ನೇಹದಿಂದ ನಡೆದುಕೊಂಡಿದ್ದರು.

ನಂತರ‌ ಲಂಕೇಶ್ ನಲ್ಲಿ ‘ ಮೂಡಿಗೆರೆ ಪೋಸ್ಟ್ ‘ ಅನ್ನುವ ತೇಜಸ್ವಿ ಕಾಲಂ ಶುರು ಮಾಡಿದೆವು. ಅದು ಪ್ರಶ್ನೋತ್ತರ ರೀತಿಯಿತ್ತು. ನಾನು,ಗೌರಿ, ಶಿವಸುಂದರ ಶಾಸ್ತ್ರಿ ಎಂಬುವರು ಆಗ ಮೂಡಿಗೆರೆಗೆ ಹೋಗಿ ಲಂಕೇಶ್ ಪತ್ರಿಕೆಗೆ ಮತ್ತೆ ತೇಜಸ್ವಿ ಬರೆಯವಂತೆ ಒಪ್ಪಿಸಿ ಬಂದಿದ್ದೆವು. ಗೌರಿಗೆ ಆಗ ರಾಜೇಶ್ವರಿ ಮೇಡಂ ಆತ್ಮೀಯರಾದರು, ನಮಗೆಲ್ಲ ಪರಿಚಯ ಒಡನಾಟ ಚೆನ್ನಾಗಿ ಬೆಳೆಯಿತು. ಅದೇ ವೇಳೆ ನಮ್ಮ ಪತ್ರಿಕೆಯಲ್ಲಿ ಬರೆಯುತ್ತಿದ್ದ ಜನಶಕ್ತಿ ಸಂಘದ ಒಬ್ಬರು , ಸ್ತ್ರೀ ವಿಚಾರವೊಂದರಲ್ಲಿ ಫಜೀತಿ ಮಾಡಿಕೊಂಡಿದ್ದರು.

ಅವರ ಬಗ್ಗೆ ಅಸಹನೆಯಿದ್ದ ಜನಶಕ್ತಿಯ ಗುಂಪಿನ‌ ಬೇರೆ ಕೆಲವರು ಆತ‌‌ ಬರೆಯದಂತೆ ನೋಡಿಕೊಂಡರು,( ಅವರಲ್ಲಿ ಬ್ರಾಹ್ಮಣ- ಶೂದ್ರರೆಂಬ‌ ಬಣಗಳಿವೆ‌) ಆದರೆ ತೇಜಸ್ವಿ ಮತ್ತೆ ಬರೆಯಲು ಶುರುವಾಗಿದ್ದರಿಂದ ನಮಗದು ತೊಡಕಾಗಲಿಲ್ಲ, ಆಮೇಲಿಂದ ಈಗಿನವರೆಗೂ ಜನಶಕ್ತಿ ಗುಂಪಿನಲ್ಲಿ ಮೂರು ಸೆಕ್ಸ್ ಹಗರಣಗಳಾಗಿವೆ, ಆದರೆ ಅವರದನ್ನು ನೀಟಾಗಿ ಸಾರಿಸಿ ಗುಡಿಸಿ ರಂಗೋಲಿ ಹಾಕಿ ಮುಗುಂಮಾಗಿದಾರೆ. ಅದಿರಲಿ. ನಿಂತುಹೋದ ಕಾಲಂ‌ ಜಾಗದಲ್ಲಿ ತೇಜಸ್ವಿಯವರ ಕಾಲಂ ಶುರುವಾಯಿತು.

ತೇಜಸ್ವಿ ತೀರಿಕೊಂಡ ಕೆಲಕಾಲದ ನಂತರ ನಮ್ಮ ಪತ್ರಿಕೆಯ‌ ತಂಡ ಮತ್ತೊಮ್ಮೆ ಮೂಡಿಗೆರೆಗೆ ಹೋಗಿ ರಾಜೇಶ್ವರಿಯವರಿಗೆ ಅವರ ನೆನಪುಗಳನ್ನು ಬರೆಯುವಂತೆ ಮಾತಾಡಿ ಬಂದೆವು. ಅವರ ಅಪೇಕ್ಷೆಯಂತೆ ನಾನೊಂದು ಸಿನಾಪ್ಸಿಸ್ ಬರೆದು ಕಳಿಸಿದೆ. ಕೆಲ ತಿಂಗಳ ನಂತರ ‘ ನನ್ನ ತೇಜಸ್ವಿ ‘ ಪುಸ್ತಕ‌ ಬಂತು. ಪುಸ್ತಕ ಮೂಡಿಬರಲು ನೆರವಾದ ಹಲವರನ್ನು ರಾಜೇಶ್ವರಿಯವರು ಸ್ಮರಿಸಿ , ಅದರಲ್ಲಿ ನನ್ನ ಹೆಸರು ಪ್ರಸ್ತಾಪಿಸಿ ‘ ಗೌರಿಯವರ ಸಹಾಯಕ ಪಾರ್ವತೀಶ್‌‌ಗೆ‌ ಧನ್ಯವಾದ ‘ ಅಂತೆಲ್ಲ ಹೇಳಿದ್ದರು.‌ ಆಗ ಅವರಿಗೆ‌ ನಾನೊಂದು ಪತ್ರ ಬರೆದು ‘ ನಾನು‌ ಗೌರಿಯವರ ಸಹೋದ್ಯೋಗಿ, ಸಹಾಯಕನಲ್ಲ ‘ ಎಂದು ತಿಳಿಸಬೇಕಾಯಿತು.

ಪತ್ರ ತಲುಪಿದ ಕೂಡಲೆ ನನಗೆ ಫೋನ್ ಮಾಡಿದ ರಾಜೇಶ್ವರಿಯವರು ಪೇಚಾಡಿಕೊಂಡರು, 2ನೇ ಮುದ್ರಣದಲ್ಲಿ ಸರಿಪಡಿಸುವುದಾಗಿ ತಿಳಿಸಿ ಅಂತೆಯೇ‌‌‌ ಬದಲಿಸಿದರು.

ಲಂಕೇಶ್ ನಲ್ಲಿದ್ದಾಗ ನಾನಿದನ್ನು ಬಹಳ ಅನುಭವಿಸಬೇಕಾಗಿ ‌ಬಂತು.‌ಅನೇಕರು‌‌ ನನಗೆ ಫೋನ್ ಮಾಡಿ ಗೌರಿಯವರ ಫೋನ್ ನಂಬರ್‌ ಕೇಳುವುದು , ಕಾರ್ಯಕ್ರಮಕ್ಕೆ‌ ‌ಅವರನ್ನು‌ ಆಹ್ವಾನಿಸುವ ಪ್ರಸ್ತಾಪ‌ ಮಾಡುವುದು ಇಂತದೆಲ್ಲ ಮಾಡುತ್ತಿದ್ದರು. ನಾನಾಗ ಹಿಂದೆ‌‌ ಸರಿದು‌ ನೇರ ಗೌರಿಯವರೇ‌‌ ಮಾತನಾಡುವಂತೆ ನೋಡಿಕೊಳ್ಳುತ್ತಿದ್ದೆ. ಇದನರಿಯದ ಕೆಲವರು ನಾನು ಇಡೀ‌‌ ಆಫೀಸನ್ನೇ‌ ವಶಪಡಿಸಿಕೊಂಡಿರುವುದಾಗಿ‌ ಕಲ್ಪಿಸಿಕೊಂಡರು.

ಗೌರಿ ಹೆಸರೇಳಿ ಇದುವರೆಗೂ 3 ಕೋಟಿ ರೂಪಾಯಿ‌ ಎತ್ತಿರುವ ಜನಶಕ್ತಿ‌ ಸಂಘದ‌‌ ಎರಡು ಬ್ರಾಮಣ ಕುಟುಂಬದವರೂ ಸಹ ಇದೇ‌‌ ಕುಯುಕ್ತಿ‌ ತೋರಿದ್ದರು. ‌ಬೆಣ್ಣೆ ಮುದ್ದೆ ಸಂಬಳದ‌( Fat Salary ) ‌ ನಮ್ಮ‌ಕೆಲ‌ ಬುದ್ದಿಜೀವಿಗಳಿಗೆ‌‌ ‌ಏನನ್ನಾದರೂ ಆಗಲಿ‌ ಸಹನೆಯಿಂದ ಪರಿಶೀಲಿಸುವ‌ ‌ವ್ಯವಧಾನವಿಲ್ಲ, ನಾನೊಬ್ಬ ಸ್ವತಂತ್ರ ಬರಹಗಾರ- ಪತ್ರಕರ್ತನಾಗಿದ್ದರೂ ಸಹ ‌ಕೆಲವರು ನನ್ನನ್ನು ಅಸಿಸ್ಟೆಂಟ್ ಆಗಿಸುತ್ತಿದ್ದರು. ಇಲ್ಲ‌ ಕಳಪೆ ಚಿತ್ರಣ ಕೊಡಲು ಮುಂದಾಗುತ್ತಿದ್ದರು. ರಾಜೇಶ್ವರಿಯವರೂ ಹಾಗೆಯೇ ಭಾವಿಸಿ , ಅಸಿಸ್ಟೆಂಟ್ ಅಂತ‌ ಬರೆದು ನಂತರ ತಿದ್ದಿಕೊಂಡು‌ ವಿನೀತ. ಸ್ಹೇಹಭಾವ ತೋರಿದ್ದರು.‌

ತಾವು‌ ಹೆಚ್ಚು ಬರೆಯದಿದ್ದರೂ ತಮ್ಮ ಬಗ್ಗೆ ಹೆಚ್ಚು ಜನ ಬರೆಯುವಂತೆ, ಮಾತಾಡುವಂತೆ ರಾಜೇಶ್ವರಿಯವರು ಬದುಕಿ ನಿರ್ಗಮಿಸಿದ್ದಾರೆ. ಅವರಿಗೆ ಗೌರವದ ವಿದಾಯ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here