ಸುರಪುರ: ಕೊಲ್ಲಾಪುರದಲ್ಲಿ ಕನ್ನಡ ಧ್ವಜವನ್ನು ಸುಟ್ಟ ಘಟನೆಯನ್ನು ಖಂಡಿಸಿ ನಗರದ ತಹಸೀಲ್ ಕಚೇರಿ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಕುಮಾರ ಶೆಟ್ಟಿ ಬಣದ ಮುಖಂಡರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ಎಮ್‌ಇಎಸ್ ಮತ್ತು ಶಿವಸೇನೆ ಪದೆ ಪದೆ ಕನ್ನಡಕ್ಕೆ ಅವಹೇಳನಗೊಳಿಸುವ ಕೃತ್ಯವನ್ನು ಮಾಡುತ್ತಿವೆ,ಆದರೆ ಇಲ್ಲಿಯ ಸರಕಾರ ಕೂಡಲೇ ಈ ಸಂಘಟನೆಗಳಿಗೆ ರಾಜ್ಯದಲ್ಲಿ ಕಡಿವಾಣ ಹಾಕಬೇಕು ಮತ್ತು ಕನ್ನಡದ ಧ್ವಜವನ್ನು ಸುಟ್ಟಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು,ಈ ಸಂಘಟನೆಗಳ ಪುಂಡಾಟಕ್ಕೆ ಮಹಾರಾಷ್ಟ್ರ ಸರಕಾರದ ಕುಮಕ್ಕು ಇರುವುದರಿಂದ ಕಿಡಿಗೇಡಿತನ ಮೆರೆಯುತ್ತಿವೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸರಕಾರ ಎಚ್ಚೆತ್ತುಕೊಂಡು ಈ ಸಂಘಟನೆಗಳನ್ನು ರಾಜ್ಯದಲ್ಲಿ ರದ್ದುಗೊಳಿಸಬೇಕು ಮತ್ತು ಇಲ್ಲಿರುವ ಎಮ್‌ಇಎಸ್ ಮತ್ತು ಶಿವಸೇನೆಯ ಗೂಂಡಾಗಳನ್ನು ಗಡಿಪಾರು ಮಾಡಬೇಕು ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಿದೆ,ಮುಂದೆ ಆಗುವ ಎಲ್ಲಾ ಅನಾಹುತಗಳಿಗೆ ಸರಕಾರ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ನಾಗರಾಜ ಕಲಬುರ್ಗಿ,ಜಿಲ್ಲಾ ಉಪಾಧ್ಯಕ್ಷ ನಿಂಗಪ್ಪ ನಾಯಕ ಬಿಜಾಸಪುರ,ತಾಲೂಕು ಗೌರವಾಧ್ಯಕ್ಷ ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ,ಉಪಾಧ್ಯಕ್ಷ ವೀರೇಶಕುಮಾರ ಮಠ,ಮುಖಂಡರಾದ ವೆಂಕಟೇಶ ಬೇಟೆಗಾರ,ದೊಡ್ಡ ದೇಸಾಯಿ,ಮಾರ್ಥಂಡಪ್ಪ ದೇವರಗೋನಾಲ,ವೆಂಕಟೇಶ ದೇವರಗೋನಾಲ,ಹಣಮಂತ್ರಾಯ ಭಜಂತ್ರಿ,ಖಾಸಿಂಸಾಬ್ ಪಠಾಣ್,ಮರೆಪ್ಪ,ಮಹ್ಮದ್ ಹುಸೇನ್ ಸೇರಿದಂತೆ ಅನೇಕರಿದ್ದರು.