ಕಲಬುರಗಿ: ರಾಜ್ಯದಲ್ಲಿ ಶಾಲಾ ಮಕ್ಕಳ ಅಪೌಷ್ಠಿಕತೆ ನಿವಾರಣೆಗಾಗಿ ಕಲ್ಯಾಣ ಕರ್ನಾಟಕದ ಕೊಪ್ಪಳ, ಬೀದರ್, ಯಾದಗಿರಿ, ಕಲಬುರಗಿ, ಬೀದರ್, ಬಳ್ಳಾರಿ, ರಾಯಚೂರು ಸೇರಿದಂತೆ ಬಿಜಾಪುರ ಜಿಲ್ಲೆಯಲ್ಲಿ ೧ ರಿಂದ ೮ನೇ ತರಗತಿವರೆಗೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಅಪೌಷ್ಠಿಕತೆ ಮತ್ತು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮೀಕ್ಷಾ ವರದಿಯ ಹಿನ್ನೆಲೆಯಲ್ಲಿ ಮಕ್ಕಳಿಗೆ ಅಪೌಷ್ಠಿಕತೆ ನಿವಾರಣೆಗಾಗಿ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದೊಂದಿಗೆ ವಾರದಲ್ಲಿ ೩ ದಿನಗಳ ಕಾಲ ಮೊಟ್ಟೆ ಮತ್ತು ಬಾಳೇಹಣ್ಣು ವಿತರಣೆ ಮಾಡುವ ರಾಜ್ಯ ಸರ್ಕಾರದ ಆದೇಶವನ್ನು ಸಾಮೂಹಿಕ ಸಂಘಟನೆಗಳ ವಿಭಾಗೀಯ ವೇದಿಕೆಯು ಸ್ವಾಗತಿಸುತದೆ.
ವಾರದಲ್ಲಿ ೩ ದಿನಗಳ ಕಾಲ ಮೊಟ್ಟೆ ಮತ್ತು ಬಾಳೇಹಣ್ಣು ವಿತರಣೆ ಮಾಡುವ ಬಗ್ಗೆ ಕೆಲವು ಮಠದ ಸ್ವಾಮೀಜಿಗಳು ಜಾತಿ ಮತ್ತು ಧಾರ್ಮೀಕತೆ ನಂಬಿಕೆಯ ಹೆಸರಿನಲ್ಲಿ ಸರ್ಕಾರದ ಆದೇಶವನ್ನು ವಾಪಸ್ಸು ಪಡೆಯಬೇಕೆಂದು ರಾಜ್ಯದ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕುತ್ತಿರುವುದು ಸರಿಯಲ್ಲ, ಮೊಟ್ಟೆಯನ್ನು ತಿನ್ನುವುದು ಹಾಗೂ ತಿನ್ನದಿರುವುದನ್ನು ಮಕ್ಕಳ ಆಯ್ಕೆಯಾಗಿರುತ್ತದೆ. ಇದನ್ನೇ ತಿನ್ನಬೇಕು, ಇದನ್ನೇ ತಿನ್ನಬಾರದೆಂದು ಆಹಾರದ ಹಕ್ಕಿನ ಮೇಲೆ ಸ್ವಾಮೀಜಿಗಳು ದಾಳಿ ಮಾಡುವುದನ್ನು ಸಾಮೂಹಿಕ ಸಂಘಟನೆಗಳ ವೇದಿಕೆ ತೀವ್ರವಾಗಿ ಖಂಡಿಸುತ್ತದೆ.
ರಾಜ್ಯದ ಅತೀ ಹಿಂದುಳಿದ ಪ್ರದೇಶವಾದ ಹೈದ್ರಾಬಾದ್ ಕರ್ನಾಟಕದ ಈಗೀನ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮಕ್ಕಳ ಅಪೌಷ್ಠಿಕತೆಯ ಪ್ರಮಾಣ ಯಾದಗಿರಿ- ಶೇ. ೭೪, ಕಲಬುರಗಿ- ಶೇ. ೭೨.೪, ಬಳ್ಳಾರಿ- ಶೇ. ೭೨.೩, ಕೊಪ್ಪಳ- ಶೇ. ೭೦.೭, ಶೇ. ೭೦.೬, ಬೀದರ್- ಶೇ. ೬೯.೧, ಬಿಜಾಪುರ- ಶೇ. ೬೮ರಷ್ಟು ಇದೆ. ಗಾಬರಿಗೊಳಿಸುವ ಮತ್ತು ಚಿಂತೆಯ ಸಂಗತಿ ಇದಾಗಿದೆ. ಅಪೌಷ್ಟಿಕತೆ ನಿವಾರಣೆ ಮಾಡುವ ದಿಕ್ಜಿನಲ್ಲಿ ಆಲೋಚನೆ ಮಾಡುವುದನ್ನು ಬಿಟ್ಟು ಮಕ್ಕಳ ತಟ್ಟೆಯಿಂದ ಅನ್ನ ಕಿತ್ತುಕೊಳ್ಳುವುದು ಕಾನೂನಾತ್ಮಕವಾಗಿಯೂ ಅಪರಾಧವಾಗಿದೆ. ದೇಹಕ್ಕೆ ಅಗತ್ಯವಿರುವಷ್ಟು ಕ್ಯಾಲೊರಿ ಆಹಾರ ಪಡೆವುದು ಎಲ್ಲರ ಹಕ್ಕಾಗಿದೆ. ಆಹಾರದ ಆಯ್ಕೆಯ ಹಕ್ಕು ಕಿತ್ತುಕೊಳ್ಳುವುದು ಎಂದರೆ ಅಸಾಂವಿಧಾನಿಕ ಕ್ರಮವೇ ಆಗಿದೆ. ಸರಕಾರವು ಅಸಾಮನವಿಧಾನಿಕ ನಡೆಯ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇವೆ.
ಅಲ್ಲದೇ, ಮೊಟ್ಟೆ ಮತ್ತು ಬಾಳೇಹಣ್ಣು ವಿತರಣೆ ನಂತರ ಇದೇ ತಿಂಗಳಲ್ಲಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯಲ್ಲಿ ಶೇ.೧೦ ರಿಂದ ೧೨ರಷ್ಟು ಏರಿಕೆ ಕಂಡು ಬಂದಿದೆ. ೮೦%ರಷ್ಟು ಮಕ್ಕಳು ಮೊಟ್ಟೆ ಬೇಕೆಂದು ಬೇಡಿಕೆ ಇಟ್ಟಿದ್ದಾರೆ ಸುಮಾರು ೧೪,೪೪,೦೦೦ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಮೊಟ್ಟೆ ಸಹಾಯವಾಗಲಿದೆ ಶೇಕಡ ೨೦ರಷ್ಟು ಮಕ್ಕಳಿಗೆ ಬಾಳೇಹಣ್ಣು ವಿತರಣೆ ಮಾಡುವುದರಿಂದ ಯಾವುದೇ ವಿದ್ಯಾರ್ಥಿಗಳಿಗೆ ಬೇಧಭಾವ ತಾರತಮ್ಯ ಮಾಡುವ ಅವಕಾಶವಿರುವುದಿಲ್ಲ ಇದನ್ನು ಸ್ವಾಮೀಜಿಗಳು ಅರ್ಥ ಮಾಡಿಕೊಳ್ಳಲಿ.
ಮೊಟ್ಟೆ ವಿತರಣೆ ತಡೆಯುವುದರ ಹಿಂದೆ ಬಲವಾದ ಕೋಮುಭಾವನೆ ಅಡಗಿದೆ. ಜನತೆಯನ್ನು ಕೋಮು ನೆಲೆಯಲ್ಲಿ ವಿಂಗಡಿಸಲು ಆಹಾರ, ಉಡುಪು, ಮೈಬಣ್ಣವನ್ನು ಬಳಸಿಕೊಳ್ಳಲಾಗುತ್ತಿದೆ. ಇದರ ಹಿಂದೆ ಸ್ಪಷ್ಟವಾಗಿ ಮತೀಯವಾದಿಗಳ ಹುನ್ನಾರವಿದೆ.
ಅಲ್ಲದೇ, ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ವಿವಿಧ ಜಾತಿ-ಧರ್ಮದ ತುಳಿತಕ್ಕೆ ಒಳಗಾದ ಸಮುದಾಯದ, ಬಡವರ, ಹಿಂದುಳಿದ ವರ್ಗ ಸಮುದಾಯದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ರಾಜ್ಯದ ಎಲ್ಲಾ ಶಾಲೆಗಳಿಗೂ ಅಪೌಷ್ಠಿಕತೆ ನಿವಾರಣೆಗಾಗಿ ಮೊಟ್ಟೆ ಮತ್ತು ಬಾಳೇಹಣ್ಣನ್ನು ಹೈಸ್ಕೂಲ್ ಮಟ್ಟದವರೆಗೂ ವಿತರಣೆ ಮಾಡಲು ಸರ್ಕಾರ ಮುಂದಾಗಬೇಕೆಂದು ವಿಭಾಗೀಯ ಮಟ್ಟದ ಎಲ್ಲ ಸಾಮೂಹಿಕ ಸಂಘಟನೆಗಳು ಆಗ್ರಹಿಸುತ್ತವೆ.
ಈ ಸಭೆಯಲ್ಲಿ ಚಿಂತಕರಾದ ಕೆ.ನೀಲಾ, ಚನ್ನಪ್ಪ ಆನೆಗುಂದಿ, ಪ್ರಭು ಖಾನಾಪುರೆ, ಶರಣಬಸಪ್ಪ ಮಮಶೇಟ್ಟಿ, ಎಸ್ ಎಂ ಸಾಗರ, ಗಂಗಮ್ಮ ಕಟ್ಟಿಮನಿ,ಮಲ್ಲಣ್ಣ ಬಿರಾದಾರ,ಗುಲಾಮಸಾಬ ಸೇರಿದಂತೆ ಇತರರು ಇದ್ದರು.