-
# ಕೆ.ಶಿವು.ಲಕ್ಕಣ್ಣವರ
ಅಂದಾನಪ್ಪ ದೊಡ್ಡಮೇಟಿಯವರು ಇಂದಿನ ಗದಗ ಜಿಲ್ಲೆಯ ಗದಗ ತಾಲ್ಲೂಕಿನ ಜಕ್ಕಲಿ ಗ್ರಾಮದಲ್ಲಿ 1908 ಮಾರ್ಚ್ 8ರಂದು ಜನಿಸಿದರು. ಚಿಕ್ಕಂದಿನಲ್ಲಿ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದವರು. 22ನೆಯ ವಯಸ್ಸಿನಲ್ಲಿ ಅಸಹಕಾರ ಆಂದೋಲನ ಮತ್ತು ಸತ್ಯಾಗ್ರಹಗಳಲ್ಲಿ ಭಾಗವಹಿಸಿದವರು. 1933ರ ಕಾಯಿದೆ ಭಂಗ ಚಳವಳಿಯಲ್ಲಿ ಪಾಲ್ಗೊಂಡು ಸರ್ಕಾರದ ಆಗ್ರಹಕ್ಕೆ ಒಳಗಾಗಿ ಬಂದಿಸಲ್ಪಟ್ಟರು. ಇವರು ಅನೇಕ ಬಾರಿ ಕಾರಾಗೃಹ ವಾಸ ಅನುಭವಿಸಿದವರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ ದುಡಿದವರು.
ಶ್ರಿಮಂತ ಜಮೀನುದಾರರಾಗಿದ್ದ ಅಂದಾನಪ್ಪನವರು ಒಮ್ಮೆ ಊರಿಗೆ ಬರ ಬಂದಾಗ ತಮ್ಮಲ್ಲಿದ್ದ ಧಾನ್ಯವನ್ನು ಜನರಿಗೆ ಹಂಚಿದರಲ್ಲದೆ ನಿರುದ್ಯೋಗ ನಿವಾರಣೆಗಾಗಿ ಜನರಿಗೆ ಕೆಲಸ ಒದಗಿಸಿದರು. ಹಾವು ಸಾಕುವುದು ಇವರ ಒಂದು ಹವ್ಯಾಸವಾಗಿತ್ತು. ತಮ್ಮ ಪ್ರೀತಿ ಪಾತ್ರ ಹಾವೊಂದು ಸತ್ತಾಗ ಇವರು ಉಪವಾಸ ಮಾಡಿದರಂತೆ. ಅಂದಾನಪ್ಪವನರು ಕನ್ನಡ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿದ್ದವರು. ಕನ್ನಡ ಭುವನೇಶ್ವರಿಯನ್ನು ಸ್ತುತಿಸುವ ಕರ್ನಾಟಕ ಮಹಿಮಾಸ್ತೋತ್ರ ಎಂಬುದು ಇವರ ಕವನ ಸಂಗ್ರಹ.
ಇವರು ಪತ್ರಿಕೋದ್ಯಮಿಯಾಗಿದ್ದವರು. ‘ಕಲ್ಕಿ’ ಎಂಬ ಮಾಸಪತ್ರಿಕೆಯನ್ನು ಇವರು ಕೆಲವು ಕಾಲ ಗದಗಿನಿಂದ ಪ್ರಕಟಿಸುತ್ತಿದ್ದವರು. ಮುಂಬಯಿಯ ವಿಧಾನಸಭೆಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಕನ್ನಡ ದಲ್ಲಿ ಮಾತನಾಡಿದವರು. ಕರ್ನಾಟಕ ಏಕೀಕರಣ ಪ್ರಯತ್ನವನ್ನು ಬಲ ಪಡಿಸಿ, ಹೆಚ್ಚು ಕಾಲವನ್ನು ಅದಕ್ಕಾಗಿ ಮೀಸಲಿಟ್ಟು ಮುಂಬಯಿ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದವರು. ಏಕೀಕರಣಗೊಂಡ ವಿಶಾಲ ಮೈಸೂರು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲು ವಿಧಾನ ಸಭೆಯಲ್ಲಿ ಪದೇ ಪದೇ ವಾದಿಸುತ್ತಿದ್ದವರು.
1970-71ರಲ್ಲಿ ದೊಡ್ಡಮೇಟಿಯವರು ರಾಜ್ಯದ ನೀರಾವರಿ ಖಾತೆಯ ಸಹಾಯಕ ಮಂತ್ರಿಗಳಾಗಿದ್ದವರು. ಇಂತಹ ಅಂದಾನಪ್ಪ ದೊಡ್ಡಮೇಟಿಯವರು ಕರ್ನಾಟಕ ಏಕೀಕರಣಕ್ಕಾಗಿ ಈ ರೀತಿಯಲ್ಲಿ ಹೋರಾಟವನ್ನೇ ನಡೆಸಿದರು. ಬೆಳಗಾವಿಯಲ್ಲಿ ಕಾಂಗ್ರೆಸ್ ಸಮಾವೇಶ 1924ರಲ್ಲಿ ನಡೆಯಿತು. ಇಲ್ಲಿ ಕರ್ನಾಟಕದ ಏಕೀಕರಣದ ಕುರಿತಾದ ಗಂಭೀರ ಚಿಂತನೆಗಳು ನಡೆಯುತ್ತಿದ್ದಂತೆಯೇ ಬೆಳಗಾವಿಯಲ್ಲಿ ಸಿದ್ದಪ್ಪ ಕಾಂಬ್ಳಿ ಎನ್ನುವವರ ಅಧ್ಯಕ್ಷತೆಯಲ್ಲಿ ಮೊದಲ ಕರ್ನಾಟಕ ಏಕೀಕರಣ ಸಮಾವೇಶ ನಡೆಯಿತು.
ನಂತರ ಎಸ್. ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಏಕೀಕರಣ ಸಮಿತಿಯು ಕರ್ನಾಟಕದ ವಿವಿಧೆಡೆ ವರ್ಷಕ್ಕೆ ಎರಡು ಬಾರಿ ಸಭೆ ನಡೆಸಿತು. 1927ರಲ್ಲಿ ಮುಂಬಯಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕರ್ನಾಟಕ, ಆಂಧ್ರ ಮತ್ತು ಸಿಂಧ್ ಪ್ರಾಂತ್ಯಗಳ ಬಗ್ಗೆ ಕೆಲವು ವಿಶೇಷ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತೆಂದು ಹೇಳಲಾಗಿದೆ.
ಕರ್ನಾಟಕ ಏಕೀಕರಣ ಮಹಾ ಸಮಿತಿ: 1946ರಲ್ಲಿ ಏಕೀಕರಣ ಸಮಿತಿಯ ಹತ್ತನೇ ಸಮಾವೇಶ ನಡೆಯಿತು. ಅದನ್ನು ಉದ್ಘಾಟಿಸಿದ ವಲ್ಲಭಬಾಯಿ ಪಟೇಲರ ಮಾತುಗಳು ಇನ್ನಷ್ಟ ಆಶಾಕಿರಣವನ್ನು ಮೂಡಿಸಿತು. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದಾಕ್ಷಣವೇ ಚದುರಿಹೋದ ಕನ್ನಡ ನಾಡು ಒಂದಾಗುವುದೆಂಬ ಭರವಸೆಯನ್ನು ಪಟೇಲರು ನೀಡಿದ್ದರು. ನಿಜಲಿಂಗಪ್ಪನವರನ್ನು ಕನ್ನಡ ಏಕೀಕರಣ ಮಹಾಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.
ಜಂಟಿ ಕಾರ್ಯದರ್ಶಿಗಳಾಗಿದ್ದ ಅಂದಾನಪ್ಪ ದೊಡ್ಡಮೇಟಿ ಮತ್ತು ಮಂಗಳವೇದ ಶ್ರೀನಿವಾಸರಾವ್‌ರವರನ್ನೊಡಗೂಡಿ ಕರ್ನಾಟಕದ ಸ್ವಾತಂತ್ರ್ಯ ಮತ್ತು ಏಕೀಕರಣಕ್ಕಾಗಿ ಶ್ರಮಪಟ್ಟ ನಿಜಲಿಂಗಪ್ಪನವರ ಕೊಡುಗೆಗಳು ಅವಿಸ್ಮರಣೀಯವೆನ್ನುವುದೂ ಓದುಗರು ಗಮನಿಸಬೇಕಾಗುತ್ತದ. ನಂತರದ ದಿನಗಳಲ್ಲಿ ಕರ್ನಾಟಕ ಏಕೀಕರಣ ಮಹಾಸಮಿತಿಯು ಕರ್ನಾಟಕ ಏಕೀಕರಣ ಸಂಘವೆಂದು ಮರು ಹೆಸರು ಪಡೆಯಿತು.
1946ರಲ್ಲಿ ಮುಂಬಯಿಯಲ್ಲಿ ನಡೆದ ಸಮಾವೇಶದಲ್ಲಿ ಚದುರಿದ್ದ ಕನ್ನಡದ ಜನತೆಯನ್ನು ಒಗ್ಗೂಡಿಸುವದು ಮಾತ್ರವಲ್ಲ, ಹಲವಾರು ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳುವುದರ ಬಗ್ಗೆಯೂ ಚರ್ಚೆಗಳಾದವು. ಮುಂದೆ ಈ ಸಂಘವು ಹಲವು ಸಭೆಗಳನ್ನು ದಾವಣಗೆರೆ, ಕಾಸಗೋಡು ಮೊದಲಾದ ಪ್ರದೇಶಗಳಲ್ಲಿ ನಡೆಸಿತ್ತು. ಆಗ ಈ ಕರ್ನಾಟಕ ಏಕೀಕರಣಕ್ಕಾಗಿ ಅಂದಾನಪ್ಪ ದೊಡ್ಡಮೇಟಿಯವರು ಅವಿರತವಾಗಿ ದುಡಿದು ಕೊನೆಗೂ ಕರ್ನಾಟಕ ಏಕೀಕರಣದ ಆ ಫಲ ಕಂಡರು.
ಹೀಗೆ ಕರ್ನಾಟಕ ಏಕೀಕರಣಕ್ಕಾಗಿ ಅವಿರತವಾಗಿ ದುಡಿದ ಅಂದಾನಪ್ಪ ದೊಡ್ಡಮೇಟಿಯವರು 1972 ಫೆಬ್ರವರಿ 21ರಂದು ಇವರು ನಿಧನರಾದರು. ಇಂಥ ಏಕೀಕರಣ ರೂವಾರಿಯ ಪ್ರತಿಮೆ, ಸ್ಮಾರಕ ನಿರ್ಮಾಣವಾಗಿಲ್ಲ; ಸಮಾಧಿಗೂ ದುಸ್ಥಿತಿ
ಬಳ್ಳಾರಿಯನ್ನು ಕರ್ನಾಟಕದಲ್ಲಿ ಉಳಿಸಿಕೊಂಡ ದೊಡ್ಡಮೇಟಿ ‘ಕರುನಾಡು ಇಲ್ಲದೆ ಭಾರತವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ’ ಎಂದು ಹೇಳಿ, ಜೀವನದುದ್ದಕ್ಕೂ ಕರ್ನಾಟಕದ ಅಭಿವೃದ್ಧಿಯನ್ನೇ ಉಸಿರಾಗಿಸಿಕೊಂಡಿದ್ದವರು ಏಕೀಕರಣದ ರೂವಾರಿ ಅಂದಾನಪ್ಪ ದೊಡ್ಡಮೇಟಿಯವರು.
ತಮ್ಮ ಮನೆಯಲ್ಲಿರುವ ಕನ್ನಡಮ್ಮನಿಗೆ ಹಾಗೂ ಹಂಪಿಯಲ್ಲಿರುವ ಭುವನೇಶ್ವರಿ ದೇವಿಗೆ ಅಗ್ರಪೂಜೆ ಮಾಡಿಸುತ್ತಿದ್ದರು. ದೊಡ್ಡಮೇಟಿ ಮನೆತನದಲ್ಲಿ ಇಂದಿಗೂ ಈ ಪದ್ಧತಿಯ ಕಾಣಬಹುದು. ಅಂದಾನಪ್ಪನವರು ಮೊದಲ ರಾಜ್ಯೋತ್ಸವವನ್ನು ಹಂಪಿಯಲ್ಲೆ ಆಚರಣೆ ಮಾಡಿದ್ದರು. ಬಳ್ಳಾರಿಯನ್ನು ಆಂದ್ರಪ್ರದೇಶಕ್ಕೆ ಸೇರಿಸುವಾಗ ಬಳ್ಳಾರಿಯಲ್ಲಿಯೇ ಇದ್ದು ಎಲೆ ತಿಮ್ಮಪ್ಪನವರ ತೋಟದಲ್ಲಿ ಜನರನ್ನು ಸೇರಿಸಿ ಭುವನೇಶ್ವರಿ ಪೂಜೆ ನೆರವೇರಿಸಿದರು. ನಂತರ ಸರಣಿ ಸಭೆಗಳನ್ನು ಕೈಗೊಂಡು ಜಾಗೃತಿ ಮೂಡಿಸಿ ಬಳ್ಳಾರಿಯನ್ನು ಕರ್ನಾಟಕದಲ್ಲಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.
1940 ರಿಂದ 60ರ ದಶಕದಲ್ಲಿ ರಾಜ್ಯದ ಪ್ರಭಾವಿ ಮುಖಂಡರಾಗಿದ್ದ ಇವರು ರಾಷ್ಟ್ರ ನಾಯಕರೊಂದಿಗೆ ನೇರ ಸಂಪರ್ಕ ಹೊಂದಿದ್ದರು. ಸಮಗ್ರ ಜಿಲ್ಲೆಯ ಧಾರವಾಡ ಉತ್ತರ ಕ್ಷೇತ್ರದಿಂದ ಬಾಂಬೆ ವಿಧಾನಸಭೆಗೆ ಆಯ್ಕೆಯಾದ ಮೇಲೆ ಮುಂಬೈ ಅಸೆಂಬ್ಲಿಯಲ್ಲಿ ಕನ್ನಡದಲ್ಲಿ ಮಾತನಾಡಿ ಕನ್ನಡಿಗರಿಗಾಗಿ ಧ್ವನಿ ಎತ್ತಿದವರು.
ಕನ್ನಡಕ್ಕಾಗಿ ಜೀವನ ಮುಡಿಪಾಗಿಟ್ಟ ಅಂದಾನಪ್ಪ ದೊಡ್ಡಮೇಟಿಯವರ ಹೆಸರು ಜನ ಮಾನಸದಲ್ಲಿ ನೆಲೆ ನಿಲ್ಲುವಂತೆ ಎಲ್ಲಿಯೂ ಅವರ ಪ್ರತಿಮೆ, ಸ್ಮಾರಕ, ಸಮುದಾಯ ಭವನವನ್ನು ಸರ್ಕಾರ ನಿರ್ಮಿಸಿಲ್ಲ. ಗದಗ, ಗಜೇಂದ್ರಗಡ, ರೋಣ ತಾಲ್ಲೂಕನಲ್ಲಿ ಉದ್ಯಾನ, ವೃತ್ತ, ಗ್ರಂಥಾಲಯ, ಸಾಹಿತ್ಯ ಭವನಗಳಿಗೆ ಇವರ ಹೆಸರು ಇಲ್ಲದಿರುವುದು ದುರದೃಷ್ಟಕರ ಸಂಗತಿ. ಅಂದಾನಪ್ಪ ದೊಡ್ಡಮೇಟಿ ಹಾಗೂ ಸರಳ ಸಾತ್ವಿಕ ಜೀವನ ನಡೆಸಿ ಹೆಸರಾಗಿದ್ದ ಸಾಹಿತಿ, ರಾಜಕಾರಣಿ ಅಂದಾನಪ್ಪ ದೊಡ್ಡಮೇಟಿಯವರ ಸಮಾಧಿಗಳು ಸ್ಥಳೀಯ ಆಡಳಿತ, ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ದುಸ್ಥಿತಿಯಲ್ಲಿದ್ದು ಅನಾಥವಾಗಿವೆ ಇಂದು.