ಶಹಾಬಾದ: ಎಳ್ಳು ಅಮಾವಾಸ್ಯೆ ಅಪ್ಪಟ ರೈತರ ಹಬ್ಬ. ಹೊಲದಲ್ಲಿ ಬೆಳೆದು ನಿಂತಿರುವ ಹಿಂಗಾರು ಪೈರುಗಳ ನಡುವೆ ಬನ್ನಿ ಮರ ಇಲ್ಲವೆ ಬನ್ನಿಕಂಟಿಯನ್ನು ಹುಡುಕಿ ಅದಕ್ಕೆ ಪೂಜೆ ಸಲ್ಲಿಸುವುದರೊಂದರಿಗೆ ಭೂಮಿತಾಯಿಗೆ ಚೆರಗ ಚೆಲ್ಲುವ ಮೂಲಕ ಎಳ್ಳು ಅಮವ್ಯಾಸೆ ಹಬ್ಬವನ್ನು ರವಿವಾರ ರೈತರು ಆಚರಿಸಿದರು.
ಎಳ್ಳು ಅಮವಾಸ್ಯೆ ೩-೪ದಿನ ಇರುವಾಗಲೇ ರೆತರ ಮನೆಗಳಲ್ಲಿ ಹಬ್ಬದ ತಯಾರಿ ನಡೆಯುತ್ತದೆ. ಎಳ್ಳು ಹಚ್ಚಿದ ಸಜ್ಜೆ, ಜೋಳದ ರೊಟ್ಟಿ ತಯಾರಿಸುವುದು, ನಾನಾ ಬಗೆಯ ಚಟ್ನಿ, ಕಾಳು, ಎಣ್ಣೆಗಾಯಿ, ಎಳ್ಳು ಹಾಗೂ ಸೇಂಗಾ ಹೋಳಿಗೆ ತಯಾರಿಸಲಾಗುತ್ತದೆ. ಅಮಾವಾಸ್ಯೆ ದಿನ ದೊಡ್ಡ ಬುತ್ತಿಯ ಗಂಟು ಕಟ್ಟಿಕೊಂಡು ಕುಟುಂಬದವರೆಲ್ಲರೂ ಎತ್ತಿನ ಬಂಡಿಯಲ್ಲಿ ಕುಳಿತು ಹೊಲಕ್ಕೆ ಹೋಗುವ ದೃಶ್ಯ ಮಾತ್ರ ದೊಡ್ಡ ಸಡಗರದಂತೆ ಕಾಣುತ್ತಿತ್ತು. ಜತೆಗೆ ತಮ್ಮ ಸಂಬಂಧಿಗಳು, ಊರಿನ ಇತರರು ಮತ್ತು ಹಿತೆಷಿಗಳನ್ನು ಹೊಲಕ್ಕೆ ಕರೆದೊಯ್ದು, ಚೆರಗ ಚೆಲ್ಲಿದ ನಂತರ ಸಾಮೂಹಿಕ ಊಟ ಸವಿದು ಆತ್ಮೀಯತೆಯನ್ನು ಮೆರೆದರು.
ಎತ್ತುಗಳಿಗೆ ಝೂಲ ಹಾಕಿ ಕೋಡಣಸು, ಗೊಂಡೆ, ಹಣೆಕಟ್ಟುಗಳಿಂದ ಶೃಂಗರಿಸಲಾಗಿತ್ತಿ.ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಎತ್ತುಗಳು ಕೊರಳ ಮತ್ತು ಹಣೆಗೆಜ್ಜೆಯನ್ನು ನುಡಿಸುತ್ತ ಹೊಲಗಳ ಕಡೆಗೆ ಬಂಡಿ ಎಳೆದುಕೊಂಡು ಸಾಗುವುದು ಗ್ರಾಮೀಣ ಸೊಗಡನ್ನು ಎತ್ತಿ ತೋರಿಸುತ್ತಿತ್ತು.
ಎಳ್ಳು ಅಮಾವಾಸ್ಯೆ ಹಬ್ಬ ರೈತರ ಹಬ್ಬವಾಗಿದ್ದು, ಜಾತಿ, ಮತ ಭೇದವಿಲ್ಲ. ಒಕ್ಕಲುತನ ಅವಲಂಬಿಸಿರುವ ಮುಸ್ಲಿಂ ಕುಟುಂಬಗಳೂ ಎಳ್ಳು ಅಮಾವಾಸ್ಯೆಯಂದು ಹೊಲಕ್ಕೆ ಹೋಗಿ ಚೆರಗ ಚೆಲ್ಲಿದರು.