ಬಸವಣ್ಣನವರನ್ನು ಬಲ್ಲವರು ಬಹಳ. ಬಸವಣ್ಣನವರಂತೆ, ಬಸವತತ್ವದಂತೆ ಬದುಕುವವರು ತುಂಬಾ ವಿರಳ. ಬಸವತತ್ವದ ವಸಂತದ ತಂಗಾಳಿಯನ್ನು ಈ ಭವ್ಯ ಭಾರತದಲ್ಲಿ ಮತ್ತೊಮ್ಮೆ ಎಲ್ಲ ಕಡೆ ಚಲಿಸುವಂತೆ, ಸಾಂಗವಾಗಿ ಸಾಗುವಂತೆ ಮಾಡುವ, ನೋಡುವ ಕಾರ್ಯ ನಮ್ಮದಾಗಿದೆ. ಬಸವತತ್ವದ ಕ್ರಾಂತಿಯ ಕಹಳೆ ಮತ್ತೊಮ್ಮೆ “ಮತ್ತೆ ಕಲ್ಯಾಣ”ದ ಮೂಲಕ ಮುಟ್ಟಬೇಕಾಗಿರುವುದು ಇಂದಿನ ಅವಶ್ಯವಾಗಿದೆ.
ಬಸವಣ್ಣನವರು ತಮ್ಮ ಸಮೀಪವರ್ತಿಗಳಿಗೆ ಬಹಳ ಗೌರವದಿಂದ ಕಂಡಿದ್ದಾರೆ. ಈ ಜಗತ್ತಿನಲ್ಲಿ ಗೌರವ ಕೊಟ್ಟು ಗೌರವ ಪಡೆದುಕೊಳ್ಳುವುದು ಇಂದಿನ ಅಗತ್ಯವಾಗಿದೆ. ಬಸವಣ್ಣನವರು ಒಂದು ಬಾರಿ ಶರಣು ಎಂದಿದ್ದಕ್ಕೆ “ಶರಣು ಶರಣಾರ್ಥಿ” ಹರಳಯ್ಯ ಎಂದಿದ್ದಾರೆ. ಗೊನೆ ತುಂಬಿದ ಬಾಳೆ, ಫಲ ತುಂಬಿದ ಮಾವು ಬಾಗುತ್ತದೆ. ಬಾಗಿರುವುದು ಬಾಳುತ್ತದೆ. ದೊಡ್ಡವರು ನಿಜ ಬದುಕಿನ ಸೂತ್ರ ಹೇಳಿಕೊಟ್ಟಂತೆ ವಿನಯಶೀಲ, ಗುಣಶೀಲರಾಗಿ ನಾವು ಬದುಕಬೇಕಿದೆ. ನಮ್ಮ ಶರಣರು ಸತ್ಯರಿಗೆ ಸತ್ಯವಂತರಾಗಿ, ಒರಟು ಜನಕ್ಕೆ ಒರಟಾಗಿ ಶಿವಪಥ ಅರುಹಿದರು. ಅಂಥವರಲ್ಲಿ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯ ಮಡಿವಾಳ ಮಾಚಿದೇವರು ಒಬ್ಬರು.
ಅಣ್ಣ ಬಸವಣ್ಣನವರ ನೇತೃತ್ವದಲ್ಲಿ ಚೆನ್ನಬಸವಣ್ಣ, ಅಲ್ಲಮ, ಅಕ್ಕ, ಸಿದ್ಧರಾಮರಾದಿಯಾಗಿ ಕಲ್ಯಾಣದ ಅಂಗಳದಲ್ಲಿ ಆಗ ನಡೆದಿದ್ದ ವಚನಕ್ರಾಂತಿಯ ಸಮಾನತೆ, ಶಿವಯೋಗ, ಕಾಯಕ-ದಾಸೋಹ ಮುಂತಾದ ವಿಷಯಗಳನ್ನರಿತ ಮಡಿವಾಳ ಮಾಚಿದೇವರು, ಬಸವಣ್ಣನವರ ಆ ಕ್ರಾಂತಿಯಲ್ಲಿ ಒಳಗೊಳ್ಳುವ, ಸೇರುವ ತುಡಿತ ಮಿಡಿತದಿಂದಾಗಿ ರಾತೋರಾತ್ರಿ ಎದ್ದು ಭೀಮಾ ನದಿ ದಾಟಿ ಕಲ್ಯಾಣಕ್ಕೆ ಬಂದರು ಎಂದು ಹೇಳಲಾಗುತ್ತಿದೆ. ಬಟ್ಟೆಗಂಟಿದ ಕೊಳೆ ತೊಳೆಯುವ ಕಾಯಕ ಮಾಡುವುದರ ಜೊತೆಗೆ ಮನಕ್ಕೆ ಅಂಟಿದ ಮಲಿನತೆಯನ್ನು ಕಳೆಯುತ್ತಿದ್ದ ವೀರ ಗಣಾಚಾರಿಯಾಗಿದ್ದರು ಮಡಿವಾಳ ಮಚಿದೇವರು. “ಕಲಿದೇವರದೇವ ಅಂಕಿತ”ದಲ್ಲಿ ಇವರು ರಚಿಸಿರುವ ೪೦೦ಕ್ಕೂ ಹೆಚ್ಚು ವಚನಗಳು ದೊರಕಿವೆ.
ಬಟ್ಟೆಯನ್ನು ಬಂಡೆಗೆ ಜೋರಾಗಿ ಒಗೆಯುವ ಮಡಿವಾಳನಿಗೆ ಬಟ್ಟೆಗಂಟಿದ ಕೊಳೆಯ ಮೇಲೆ ಸಿಟ್ಟಿರುತ್ತದೆ ವಿನಃ ಬಂಡೆಯ ಮೇಲಲ್ಲ. ಹಾಗೆಯೇ ಮಡಿವಾಳ ಕಾಯಕ ಕೈಗೊಂಡಿದ್ದ ಇವರು ತಮ್ಮ ಬದುಕಿನಲ್ಲಿ ಮೂರು ನಿಯಮಗಳನ್ನು ಪಾಲಿಸಿಕೊಂಡು ಬರುತ್ತಿದ್ದರು. ೧). ಲಿಂಗಧಾರಿಗಳಲ್ಲದವರ ಬಟ್ಟೆ ತೊಳೆಯುವುದಿಲ್ಲ ೨). ತಾನು ಬಟ್ಟೆ ತೊಳೆದುಕೊಂಡು ಬರುವಾಗ ದಾರಿಯಲ್ಲಿ ವಿಭೂತಿ, ರುದ್ರಾಕ್ಷಿ, ಲಿಂಗ ಧರಿಸದವರು ಭೇಟಿಯಾಗಬಾರದೆಂದು ಜಾಗಟೆ ಬಾರಿಸುತ್ತ ಬರುತ್ತಿದ್ದ ೩). ಸುಳ್ಳು, ಮೋಸ, ವಂಚನೆ ಇವರಿಗೆ ಆಗಿ ಬರುತ್ತಿರಲಿಲ್ಲ. ತನ್ನ ಈ ಮೂರು ನಿಯಮಕ್ಕೆ ಹೊರಗಾದವರನ್ನು ಅವರು ಯಾರೇ ಆಗಿದ್ದರೂ ತೀವ್ರವಾಗಿ ಖಂಡಿಸುತ್ತಿದ್ದರು.
ಮಡಿವಾಳ ಮಾಚಿದೇವರನ್ನು ಬಸವಣ್ಣನವರು ಮಾಚಿತಂದೆ ಎಂದು ಕರೆದಿದ್ದರೆ, ಎನ್ನ ಹಡೆದ ತಂದೆ-ತಾಯಿ ನೀನಯ್ಯ ಎಂದು ಅಕ್ಕ ಕರೆದಿದ್ದಾರೆ. ಗುಹೇಶ್ವರಲಿಂಗದಲ್ಲಿ ಮಡಿವಾಳ ಮಾಚಿದೇವನ ಕಂಡೆ ಎಂದು ಪ್ರಭುದೇವರು ಹೇಳಿದ್ದಾರೆ. ಎನ್ನ ಚೇತನನಯ್ಯ ಎಂದು ಮಾದಾರ ಧೂಳಯ್ಯ ಕರೆದಿದ್ದಾರೆ. ಎನ್ನ ವೇಷಭೂಷಣದ ಸೂತ್ರದಾರ ನೀನಯ್ಯ ಎಂದು ಬಹುರೂಪಿ ಚೌಡಯ್ಯ ತಿಳಿಸಿದ್ದಾರೆ. ಇದು ಅವರ ಘನ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ.ನಂತರದ ಕವಿ, ಸಾಹಿತಿ, ಶೋಧಕರು ಈತನನ್ನು ಹರನ ಪರಮಾವತಾರ, ವೀರಭದ್ರನ ಅವತಾರ ಎಂದು ಕರೆದಿದ್ದಾರೆ. ಮಡಿವಾಳ ಮಾಚಿದೇವರು ಸಹ “ಎತ್ತೆತ್ತ ನೋಡಿದರೆ ಬಸವನೆಂಬ ಬಳ್ಳಿ, ಗುರುವಾದಡೂ ಬಸವಣ್ಣನಿಲ್ಲದೆ ಗುರುವಿಲ್ಲ, ಬಸವಣ್ಣ ಮಾಡಲಿಕ್ಕೆ ಗುರುವಾಯಿತ್ತು, ಬಸವಣ್ಣನಿಂದ ಬದುಕಿತ್ತೀಲೋಕ ಎಂದು ತಮ್ಮ ಅನೇಕ ವಚನಗಳಲ್ಲಿ ಬಸವಭಕ್ತಿ, ಬಸವ ಮಹಿಮೆಯನ್ನು ಭಾವಪೂರ್ಣವಾಗಿ ಕೊಂಡಾಡಿದ್ದಾರೆ.
ನಮಗೆ ಲಿಂಗವುಂಟು
ನಾವು ಲಿಂಗವಂತರೆಂದು ನುಡಿವರು
ಮತ್ತೆ ಮರಳಿ
ಭವಿಶೈವ ದೈವಂಗಳಿಗೆರಗುವ
ಈ ಮಂಗ ಮಾನವರನೇನೆಂಬೆನಯ್ಯ
ಕಲಿದೇವರ ದೇವ
ಲಿಂಗಾಯತ ಧರ್ಮದ “ಐಡೆಂಟಿಟಿ”ಯನ್ನು ಗುರುತಿಸುವಂತಿರುವ ಈ ವಚನ ಅದರ ಸರ್ವ ಸ್ವತಂತ್ರತೆಯನ್ನು ಸಾರುವಂತಿದೆ. ಮೇಲಾಗಿ ಲಿಂಗವಂತರ ನಡೆಯನ್ನು ಕಟುವಾಗಿ ಟೀಕಿಸುವ ಮೂಲಕ ನಿಮ್ಮ “ಓರಿಜಿನಾಲಿಟಿ”ಯನ್ನು ಕಳೆದುಕೊಳ್ಳಬೇಡಿ ಎಂದು ಅಂದೇ ಹೇಳುವಂತಿದೆ. ಕಲ್ಯಾಣದ ಕ್ರಾಂತಿಯ ನಂತರ ಎಲ್ಲ ಶರಣರನ್ನು ಉಳವಿಯವರೆಗೆ ಸುರಕ್ಷಿತವಾಗಿ ಮುಟ್ಟಿಸಿ ಇವರು ಲಿಂಗೈಕ್ಯರಾದರು ಎಂದು ಹೇಳಲಾಗುತ್ತಿದೆ.
(ಸ್ಥಳ: ಬಸವ ಸಮಿತಿಯ ಅನುಭವ ಮಂಟಪ, ಜಯನಗರ, ಕಲಬುರಗಿ)