ಆಳಂದ: ಜಿಲ್ಲಾ ಹಾಗೂ ತಾಲೂಕು ಕೃಷಿಕ ಸಮಾಜದ ಆಶ್ರಯದಲ್ಲಿ ತಾಲೂಕಿನ ಧಂಗಾಪೂರ ಗ್ರಾಮದ ರೈತರಿಂದ ಕನಿಷ್ಠ ಒಂದು ಸಾವಿರ ಮರಗಳ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪೂರ ಅವರು ಇಂದಿಲ್ಲಿ ಹೇಳಿದರು.
ನಿಂಬರಗಾ ಮತ್ತು ಆಳಂದ ವಲಯದ ಕೃಷಿ ಪರಿಸ್ಥಿತಿಯ ಅಧ್ಯಯನ ಬಳಿಕ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ರೈತರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಈ ವಲಯದಲ್ಲಿ ಶೇ ೬೦ರಿಂದ೭೦ರಷ್ಟು ಬಿತ್ತನೆ ಆಗಿದೆ, ಇನ್ನೂ ಶೇ ೩೦ ರಷ್ಟು ಬಿತ್ತನೆಯಾದ ನಾಟಿಗೆ ಭೂಮಿಯ ತೇವಾಂಶದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದರು.
ಇಂದಿನ ರಾಜ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಯಾರ ಗೋಳ್ಳು ಯಾರು ಕೇಳದಂತಾಗಿದೆ. ಮಳೆ, ಬೆಳೆ, ಸಾಲವಿಲ್ಲದೆ ರೈತರು ಒದ್ದಾಡುತ್ತಿದ್ದಾರೆ. ಇದಕ್ಕೆ ಪರ್ಯಾವಾಗಿ ಕ್ರಮ ಕೈಗೊಳ್ಳಲು ಸರ್ಕಾರು ಎಚ್ಚೇತುಕೊಂಡು ಮುಂಜಾಗೃತ ಕ್ರಮವಾಗಿ ರೈತರಿಗೆ ಆರ್ಥಿಕ ನೆರವು ಒದಗಿಸಲು ಮುಂದಾಗಬೇಕು ಎಂದರು.
ಸುದೈವಕ್ಕೆ ಮಳೆ ಬಂದರೆ ರೈತರು ತಮ್ಮ ಹೊಲದ ಬದುಗಳಲ್ಲಿ ಗಿಡ, ಮರಗಳನ್ನು ನೆಡಲು ಮುಂದಾಗಬೇಕು. ಇದಕ್ಕಾಗಿ ಅರಣ್ಯ ಇಲಾಖೆಯಿಂದ ಉಚಿತವಾಗಿ ಸಸಿಗಳನ್ನು ನೆಡಲು ಗ್ರಾಪಂಗಳ ಅಭಿವೃದ್ಧಿ ಅಧಿಕಾರಿಗಳ ಮೂಲಕ ಉದ್ಯೋಗ ಖಾತ್ರಿ ಯೋಜನೆಯ ಸಾಹಾಯ ಪಡೆದು ಗಿಡ,ಮರ ಬೆಳೆಸಲು ಮುಂದಾಗಬೇಕು. ವಾರದಲ್ಲಿ ಸಾಂಕೇತಿಕವಾಗಿ ಧಂಗಾಪೂರ ಗ್ರಾಮದಲ್ಲಿ ರೈತರ ಮೂಲಕ ಒಂದು ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಎಲ್ಲಕಡೆ ರೈತರು ಸ್ವ ಇಚ್ಛೆಯಿಂದ ಮುಂದಾಗಬೇಕು ಎಂದು ಹೇಳಿದ ಪಾಟೀಲ ಅವರು, ರೈತರು ಬೆಳೆದ ಬೆಳಗಳ ಕುರಿತು ತೊಂದರೆ ಎದುರಾದರೆ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ಮತ್ತು ಕೃಷಿ ವಿಜ್ಞಾನಿಗಳ ಸಲಹೆ ಪಡೆಯಬೇಕು ಎಂದು ಅವರು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ, ಖಜೂರಿ ರೈತ ಸಂಪರ್ಕ ಅಧಿಕಾರಿ ಬಿ.ಎನ್. ಬಿರಾದಾರ, ಆಳಂದ ರೈತ ಸಂಪರ್ಕ ಅಧಿಕಾರಿ ಶೇಖಪ್ಪ ತಳವಾರ ಮತ್ತು ಯುವ ರೈತರು ಇದ್ದರು.