ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸಿ: ಡಾ.ಉಮೇಶ ಜಾಧವ

0
17

ಕಲಬುರಗಿ: ರಾಜ್ಯದಾದ್ಯಂತ ಕೋವಿಡ್ ಮೂರನೇ ಅಲೆ ತೀವ್ರವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಇದರ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಸಂಸದ ಡಾ. ಉಮೇಶ ಜಾಧವ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಕೋವಿಡ್-೧೯ಕ್ಕೆ ಸಂಬಂಧಿಸಿದಂತೆ ಮೂರನೇ ಅಲೆಯನ್ನು ನಿಯಂತ್ರಿಸುವ ಸಂಬಂಧವಾಗಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಕುರಿತು ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.

Contact Your\'s Advertisement; 9902492681

ಕೋವಿಡ್ ಮೊದಲನೇ ಮತ್ತು ಎರಡನೇ ಅಲೆಯಲ್ಲಿ ಜಿಲ್ಲಾಡಳಿತ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಮೂರನೇ ನಿಯಂತ್ರಣಕ್ಕು ಇದೇ ರೀತಿಯ ಸಾಂಘಿಕವಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು ಆಕ್ಸಿಜನ್ ಪ್ಲ್ಯಾಂಟ್ ಸರಿಯಾದ ಬಳಕೆ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಆಸ್ಪತ್ರೆಯಲ್ಲಿ ಹಾಸಿಗೆ ಮೀಸಲಿಡಬೇಕು. ಲಸಿಕಾಕರಣ ಕಾರ್ಯ ತೀವ್ರಗೊಳಿಸಬೇಕು. ೧೫-೧೮ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲು ಈಗಾಗಲೆ ಚಾಲನೆ ನೀಡಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಆದ್ಯತೆ ಮೇಲೆ ಲಸಿಕೆ ನೀಡಬೇಕೆಂದರು.

ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನ ಮಾತನಾಡಿ ಕೊರೋನಾ ಮೂರನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಜಿಮ್ಸ್, ಇ.ಎಸ್.ಐ.ಸಿ. ಹಾಗೂ ತಾಲೂಕಾ ಆಸ್ಪತ್ರೆಗಳು ಒಳಗೊಂಡಂತೆ ಜಿಲ್ಲೆಯ ಯಾವುದೇ ಆಸ್ಪತ್ರೆಯಲ್ಲಿ ಹಾಸಿಗೆ, ಆಕ್ಸಿಜನ್ ಅಭಾವ ಆಗದಂತೆ ನೋಡಿಕೊಳ್ಳಬೇಕು ಎಂದಲ್ಲದೆ ಅಗತ್ಯ ಔಷಧಿಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಬೇಕು. ಆಸ್ಪತ್ರೆಗಳಲ್ಲಿ ಸಣ್ಣ-ಪುಟ್ಟ ದುರಸ್ತಿಗಳಿದಲ್ಲಿ ಅದನ್ನು ಸರಿಪಡಿಸಿಕೊಳ್ಳುವಂತೆ ಆರೋಗ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಪ್ರತಿ ಸರ್ಕಾರಿ ಕಛೇರಿಗಳಲ್ಲಿ ಸಿಬ್ಬಂದಿಗಳು ಕಡ್ಡಾಯವಾಗಿ ೨ ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದರ ಬಗ್ಗೆ ಕಚೇರಿ ಮುಖ್ಯಸ್ಥರು ಖಾತ್ರಿಪಡಿಸಿಕೊಳ್ಳಬೇಕು. ಕೋವಿಡ್ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಬಳಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.

ಅಫಜಲಪುರ, ಆಳಂದ, ಚಿಂಚೋಳಿ ಹಾಗೂ ಸೇಡಂ ಚೆಕ್ ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಬೇಕೆಂದು ಸಹಾಯಕ ಆಯುಕ್ತರಿಗೆ ನಿರ್ದೇಶನ ನೀಡಿದರು. ಸಕ್ಕರೆ ಮತ್ತು ಸಿಮೆಂಟ್ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಸ್ಥಳಗಳಲ್ಲಿ ಬೇರೆ ಬೇರೆ ರಾಜ್ಯಗಳಿಂದ ವಾಹನ ಚಾಲಕರು ಬರುವ ಕಾರಣ ಅಲ್ಲಿ ಕೋವಿಡ್ ತಪಾಸಣೆ ಕೇಂದ್ರಗಳನ್ನು ಸ್ಥಾಪಿಸಿ, ಪ್ರತಿ ದಿನ ಕಾರ್ಖಾನೆಗಳಿಗೆ ಬಂದು ಹೋಗುವ ವಾಹನಗಳ ಚಾಲಕರನ್ನು ತಪಾಸಣೆಗೆ ಒಳಪಡಿಸಬೇಕು. ಕಾರ್ಖಾನೆಗಳಲ್ಲಿ ಲಸಿಕೆ ನೀಡಲು ಪ್ರತ್ಯೇಕ ತಂಡ ನಿಯೋಜಿಸಬೇಕು ಎಂದರು.

ಗ್ರಾಮಗಳಲ್ಲಿ ಕೋವಿಡ್ ಸೋಂಕಿನ ನಿಯಂತ್ರಣ ಕುರಿತು ಜಾಗೃತಿ ಮೂಡಿಸುವಂತಹ ಕೆಲಸಗಳನ್ನು ಪಿ.ಡಿ.ಓ.ಗಳು ಮಾಡಬೇಕು. ತಾಲ್ಲೂಕು ಮಟ್ಟದಲ್ಲಿ ತಲಾ ೩೦ ಜನ ಶಿಕ್ಷಕರು, ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವಂತೆ ವಿ.ವಿ.ಜ್ಯೋತ್ಸ್ನಾ ಸಲಹೆ ನೀಡಿದರು.

ಲಸಿಕೆ ನೀಡಲು ಒಂದು ವಾರ ಗಡುವು: ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಹಾಗೂ ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಬೇಕು ಮತ್ತು ಒಂದು ವಾರದೊಳಗೆ ಇದನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಗಡುವು ನೀಡಿದರು.

ರೈಲು, ಬಸ್ ನಿಲ್ದಾಣದಲ್ಲಿ ತಪಾಸಣಾ ತಂಡ: ಜಿಲ್ಲೆಯ ರೈಲು ನಿಲ್ದಾಣ, ಬಸ್ ನಿಲ್ದಾಣ, ಗಡಿಯಲ್ಲಿ ಸ್ಥಾಪಿಸಿರುವ ಚೆಕ್ ಪೋಸ್ಟ್‌ಗಳಲ್ಲಿ ಕಡ್ಡಾಯವಾಗಿ ತಪಾಸಣಾ ತಂಡ ನಿಯೋಜಿಸಬೇಕು. ಬೇರೆ ರಾಜ್ಯಗಳಿಂದ ಬರುವವರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಸಸಿ ಅವರು ಮಾತನಾಡಿ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಕೋವಿಡ್ ಸಹಾಯವಾಣಿ ಕೇಂದ್ರ ತೆರೆಯುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಸಹಾಯಕ ಆಯುಕ್ತರಾದ ಮೋನಾ ರೋಟ್, ಬಿ. ಅಶ್ವಿಜಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ್, ಜಿಮ್ಸ್ ನಿರ್ದೇಶಕಿ ಡಾ. ಕವಿತಾ ಪಾಟೀಲ, ಜಿಲ್ಲಾ ಶಸ್ತ್ರಜ್ಞ ಡಾ.ಅಂಬಾರಾಯ ಎಸ್. ರುದ್ರವಾಡಿ, ಆರ್.ಸಿ.ಹೆಚ್. ಅಧಿಕಾರಿ ಡಾ. ಪ್ರಭುಲಿಂಗ ಮಾನಕರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ ಸಂಗಾ, ಡಿಯುಡಿಸಿ ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಗಿರಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ.ಅಲ್ಲಾಭಕ್ಷ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು, ವೈದ್ಯಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here