ಕಲಬುರಗಿ: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಆಗ್ರಹಿಸಿ ನೂರಾರು ಜನ ನರೆಗಾ ಕೂಲಿ ಕಾರ್ಮಿಕರು ರೈತ ಕೃಷಿ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ಗುರುವಾರ ಲಾಡ್ಲಾಪುರ ಗ್ರಾಪಂ ಮುಂದೆ ಪ್ರತಿಭಟನೆ ನಡೆಸಿದರು.
ಬರಗಾಲ ಮತ್ತು ಕೊರೊನಾ ಕಾಲದಿಂದ ಬದುಕು ಬೀದಿಗೆ ಬಿದ್ದಿದೆ. ಕೆಲಸವಿಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಕೂಡಲೇ ನರೇಗಾ ಕೆಲಸಕ್ಕೆ ಚಾಲನೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್‌ಕೆಎಸ್) ಜಿಲ್ಲಾ ಕಾರ್ಯದರ್ಶಿ ಮಹೇಶ ಎಸ್.ಬಿ, ಗ್ರಾಮೀಣ ಜನರ ಬದುಕಿಗೆ ಆಸರೆಯಾಗಿದ್ದ ನರೇಗಾ ಯೋಜನೆ ಏಕಾಏಕಿ ಸ್ಥಗಿತಗೊಳಿಸಿರುವ ಜಿಲ್ಲಾಡಳಿತದ ಕ್ರಮ ಸರಿಯಲ್ಲ. ಕೆಲಸ ಕೇಳಿ ಬರುವ ಪ್ರತಿಯೊಬ್ಬರಿಗೂ ಜಾಬ್ ಕಾರ್ಡ್ ಸಿದ್ಧಪಡಿಸಿ ಕೆಲಸ ನೀಡಬೇಕು ಎಂಬುದು ಸರಕಾರದ ಆದೇಶವಿದೆ. ಕಾರಣವಿಲ್ಲದೆ ಇದನ್ನು ಸ್ಥಗಿತಗೊಳಿಸಿದ್ದರಿಂದ ಕಾರ್ಮಿಕರ ಬದುಕಿನ ಮೇಲೆ ದೊಡ್ಡ ಪೆಟ್ಟು ಬಿದ್ದಿದೆ.
ಕುಂಟು ನೆಪಗಳನ್ನು ಮುಂದೆಮಾಡಿ ಉದ್ಯೋಗ ಖಾತ್ರಿಪಡಿಸದೆ ಸರಕಾರ ಹಸಿದ ಹೊಟ್ಟೆಗಳ ಮೇಲೆ ಬರೆ ಎಳೆದಿದೆ. ಕೋವಿಡ್ ಮಹಾಮಾರಿ ಜೀವನದ ಸಂಕಷ್ಟ ಹೆಚ್ಚಿಸಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಬದುಕು ದಿವಾಳಿಗೊಳಿಸಿದೆ. ಯಾವ ಕ್ಷೇತ್ರದಲ್ಲೂ ದುಡಿಯುವ ಕೈಗಳಿಗೆ ಕೆಲಸ ಇಲ್ಲವಾಗಿದೆ. ಇಂಥಹ ಸಂದರ್ಭದಲ್ಲಿ ನರೇಗಾ ಯೋಜನೆ ನಿಲ್ಲಿಸಿರುವುದು ವಂಚನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಕಾರ್ಮಿಕರಿಗೆ ಕೆಲಸದಿಂದ ವಂಚಿಸುವುದು ಸರಕಾರದ ಆದೇಶ ಉಲ್ಲಂಘನೆಯಾಗುತ್ತದೆ. ಗ್ರಾಮದಲ್ಲಿ ಕೆಲಸ ಬಯಸಿ ನೂರಾರು ಕಾರ್ಮಿಕರು ಪಂಚಾಯತಿ ಕಚೇರಿಗೆ ಅಲೆಯುತ್ತಿದ್ದರೂ ಅಧಿಕಾರಿಗಳು ಜನರ ಗೋಳು ಕೇಳುತ್ತಿಲ್ಲ. ಅತಿವೃಷ್ಠಿಯಿಂದಾಗಿ ಬೆಳೆ ನಷ್ಟ ಉಂಟಾಗಿದ್ದರಿಂದ ಕೃಷಿ ಕೆಲಸವೂ ಸಿಗುತ್ತಿಲ್ಲ. ಕಾರ್ಮಿಕರು ಯಾವುದನ್ನು ನಂಬಿ ಬದುಕಬೇಕು ಎಂದು ಪ್ರಶ್ನಿಸಿದ ರೈತ ನಾಯಕ ಮಹೇಶ ಎಸ್.ಬಿ, ಜನಾಕ್ರೋಶ ಭುಗಿಲೇಳುವ ಮೊದಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಗೆ ಕೆಲಸ ನೀಡಬೇಕು. ತಕ್ಷಣವೇ ನಿರ್ಧಾರ ಪ್ರಕಟಿಸದಿದ್ದರೆ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರನ್ನು ಸಂಘಟಿಸಿ ಜಿಲ್ಲಾ ಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಆರ್‌ಕೆಎಸ್ ತಾಲೂಕು ಉಪಾಧ್ಯಕ್ಷ ಗುಂಡಣ್ಣ ಎಂ.ಕೆ, ಮುಖಂಡರಾದ ವಿಶ್ವನಾಥ ಭೀಮಳ್ಳಿ, ಶಿವುಕುಮಾರ ಆಂದೋಲಾ, ಮಲ್ಲಿಕಾರ್ಜುನ ಗಂದಿ, ಅಕ್ಕಮಹಾದೇವಿ ಗಂಜಿ, ಸಾಬಣ್ಣ ಚಿನ್ನ, ಅಂಬರೀಶ ಜಾಲಹಳ್ಳಿ, ಅಯ್ಯಪ್ಪ ಆನೇಮಿ ಸೇರಿದಂತೆ ನೂರಾರು ಜನ ನರೇಗಾ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ನರೇಗಾ ಯೋಜನೆಯ ತಾಲೂಕು ಸಹಾಯಕ ನಿರ್ದೇಶಕ ಪಂಡಿತ್ ಸಿಂಧೆ ಮನವಿ ಪತ್ರ ಸ್ವೀಕರಿಸಿದರು. ಯೋಜನೆಯಡಿ ಅನುದಾನದ ಕೊರತೆಯಿಲ್ಲ. ಕೂಡಲೇ ತಾಂತ್ರಿಕ ತೊಂದರೆಗಳನ್ನು ನಿವಾರಿಸಿಕೊಂಡು ಖಾತ್ರಿ ಕೆಲಸ ಮಾಡಿದವರ ಖಾತೆಗೆ ಹಣ ಜಮೆ ಮಾಡುತ್ತೇವೆ. ಕೆಲಸ ಬಯಸುವ ಕಾರ್ಮಿಕರಿಗೆ ಕೆಲಸ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು.