ಕುಡಿಯುವ ನೀರಿನ ಯೋಜನೆ ಶೀಘ್ರವಾಗಿ ಪೂರ್ಣಗೊಳಿಸಿ :‌ ಎಂ.ಟಿ.ರೇಜು

0
13

ಹಾವೇರಿ: ಫೆಬ್ರುವರಿ ಅಂತ್ಯಕ್ಕೆ ಒಳಚರಂಡಿ ಕಾಮಗಾರಿ ಮತ್ತು ಹಾವೇರಿ ನಗರದ 24×7 ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ (ಕೆಯುಐಡಿಎಫ್‌ಸಿ) ವ್ಯವಸ್ಥಾಪಕ ನಿರ್ದೇಶಕ ಎಂ.ಟಿ.ರೇಜು ತಾಕೀತು ಮಾಡಿದರು.

ನಗರಕ್ಕೆ ಶುಕ್ರವಾರ ಭೇಟಿ ನೀಡಿದ ರೇಜು, ನಗರಸಭೆ ಕಚೇರಿಯಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

Contact Your\'s Advertisement; 9902492681

ನಂತರ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ನಗರದ ಫಿಲ್ಟರ್ ಹೌಸ್‌ ಹಾಗೂ ಅಪೂರ್ಣಗೊಂಡಿರುವ ಎಸ್‌.ಟಿ.ಪಿ ವ್ಯಾಪ್ತಿಯಲ್ಲಿ ನಿರಂತರ ನೀರು ಸರಬರಾಜು ಮಾಡುವ ಕಾಮಗಾರಿಯನ್ನು ವೀಕ್ಷಿಸಿದರು.

ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರು, ಹಾವೇರಿ ನಗರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಆರು ವರ್ಷಗಳಿಂದ ಒಳಚರಂಡಿ ಕಾಮಗಾರಿ ಹಾಗೂ 24×7 ಕುಡಿಯುವ ನೀರಿನ ಕಾಮಗಾರಿ ನೆನೆಗುದಿಗೆ ಬಿದ್ದಿವೆ. ಜನರಿಗೆ ಸಮರ್ಪಕ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. 15 ದಿನಗಳಿಗೊಮ್ಮೆ ನೀರು ಪೂರೈಸುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಪದೇ ಪದೆ ಮನವಿ ಮಾಡಿದರೂ ಸಹ ಸ್ಪಂದಿಸುತ್ತಿಲ್ಲ. ಜನರು ಜನಪ್ರತಿನಿಧಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಮಸ್ಯೆಯನ್ನು ಬಿಚ್ಚಿಟ್ಟರು.

ಕೆಲವೆಡೆ ಕಳಪೆ ಕಾಮಗಾರಿಗಳು ನಡೆದ ಕಾರಣ ಎಲ್ಲೆಂದರಲ್ಲಿ ಪೈಪುಗಳು ಒಡೆಯುತ್ತಿವೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕಾಮಗಾರಿಗಳ ವಿಳಂಬದಿಂದ ಜನರ ತೆರಿಗೆ ಹಣ ಪೋಲಾಗುತ್ತಿದೆ ಹಾಗೂ ಜನರು ಕಿರಿಕಿರಿ ಅನುಭವಿಸುವಂತಾಗಿದೆ ಎಂದು ಬೇಸರ ತೋಡಿಕೊಂಡರು.

ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಮುಗಿಯದ ಕಾರಣ, ವರ್ಷದಿಂದ ವರ್ಷಕ್ಕೆ ಯೋಜನೆಗಳ ವೆಚ್ಚವೂ ಹೆಚ್ಚುತ್ತಿದೆ. ಅಧಿಕಾರಿಗಳ ಸಮನ್ವಯದ ಕೊರತೆ ಮತ್ತು ಭ್ರಷ್ಟಾಚಾರ ಕೂಡ ಯೋಜನೆಗಳ ವೈಫಲ್ಯಕ್ಕೆ ಕಾರಣವಾಗಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಯೋಜನೆಯ ಪ್ರಯೋಜನ ದೊರಕಿಸಿಕೊಡುವಂತೆ ಸಂಜೀವಕುಮಾರ ನೀರಲಗಿ ಮನವಿ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here