ಕಾಂಗ್ರೆಸ್ ನೆಡೆಗೆ ಕೃಷ್ಣೆಯ ಕಡೆಗೆ: 9 ವರ್ಷಗಳ ಹಿಂದೆ ಕೊಟ್ಟ ಮಾತು ಉಳಿಸಿಕೊಂಡಿದೆಯಾ Congress?

0
17

ಬಾಗಲಕೋಟೆ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ (Assembly Election) ಹತ್ತಿರವಾಗುತ್ತಿದ್ದಂತೆ ಮತ್ತೆ ಪಾದಯಾತ್ರೆ ಪೊಲಿಟಿಕ್ಸ್ (Padayatre Politics) ಜೋರಾಗಿದೆ. ಮೇಕೆದಾಟು ಯೋಜನೆ (Mekedatu Project) ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪಡೆ ಪಾದಯಾತ್ರೆ ಹಮ್ಮಿಕೊಂಡಿದೆ.

11 ದಿನಗಳ ಕಾಲ ನಡೆಯುವ ಪಾದಯಾತ್ರೆಗೆ ಇಂದು ಬೆಳಗ್ಗ ಚಾಲನೆ ನೀಡಲಾಗಿದೆ. ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ (Congress) ನಡೆಸುತ್ತಿರುವ ಪಾದಯಾತ್ರೆ, ಉತ್ತರ ಕರ್ನಾಟಕದ (North Karnataka)ಬೃಹತ್ ನೀರಾವರಿ ಯೋಜನೆಗಾಗಿ ಈ ಹಿಂದೆ ಕಾಂಗ್ರೆಸ್ ನಡೆಸಿದ ಹೋರಾಟವನ್ನ ನೆನಪಿಸುತ್ತಿದೆ. ಹೌದು, ಕಾಂಗ್ರೆಸ್‌ ನಡಿಗೆ ಕೃಷ್ಣೆಯ ಕಡೆಗೆ ಎಂಬ ಘೋಷವಾಕ್ಯದೊಂದಿಗೆ ಕೃಷ್ಣಾ ಮೇಲ್ದಂಡೆ ಯೋಜನೆ (Krishna Upper Project) ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸಿ ಇಂದಿಗೆ ಬರೋಬ್ಬರಿ 9 ವರ್ಷಗಳಾಯಿತು.

Contact Your\'s Advertisement; 9902492681

2013ರ ಜನವರಿ 7ರಂದು ಹೊಸಪೇಟೆಯಿಂದ ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಸಿದ ಹೋರಾಟ ಕಾಂಗ್ರೆಸ್ ಪಕ್ಷದಲ್ಲಿ ಹೊಸದೊಂದು ಸಂಚಲನ ಮೂಡಿಸಿತ್ತು. ಅಂದಿನ ಹೋರಾಟ ಉತ್ತರ ಕರ್ನಾಟಕ ಭಾಗದ ಜನರಿಗೆ ಬಹು ದಿನಗಳ ಕೊರಗು ದೂರವಾಗುವ ಭರವಸೆ ಮೂಡಿಸಿತ್ತು.

ಆಣೆ, ಪ್ರಮಾಣ ಪಾದಯಾತ್ರೆಗೆ ಸೀಮಿತವಾಯ್ತು 9 ವರ್ಷಗಳ ಹಿಂದಿನ ಹೋರಾಟ: ಪಾದಯಾತ್ರೆ ಮೂಲಕ ಕೃಷ್ಣೆಯ ಮಕ್ಕಳಿಗೆ ಹೊಸದೊಂದು ಭರವಸೆ ಮೂಡಿಸಿದ ಕಾಂಗ್ರೆಸ್ ಪಡೆ, ನಾವು ಅಧಿಕಾರಕ್ಕೆ ಬಂದರೆ ಪ್ರತೀ ವರ್ಷ ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟು ಐದು ವರ್ಷಗಳಲ್ಲಿ 50 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿ ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಘೋಷಣೆ ಮಾಡಿದ್ದರು.

ಕೂಡಲ ಸಂಗಮನಾಥನ ಮೇಲೆ ಆಣೆ ಪ್ರಮಾಣ ಮಾಡಲಾಗಿತ್ತು. ಆದರೆ ಅಂದಿನ ಪಾದಯಾತ್ರೆಯಲ್ಲಿ ಮೊಳಗಿದ ಘೋಷಣೆ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಯಿತು.

ಅಧಿಕಾರ ಹಿಡಿಯುತ್ತಿದ್ದಂತೆ ಕೃಷ್ಭೆಯನ್ನೇ ಮರೆತಿದ್ದರು, ಆಣೆ ಪ್ರಮಾಣ ಮಾಡಿಲ್ಲ ಅಂದ್ರು: ಪ್ರತೀ ವರ್ಷ ಹತ್ತು ಸಾವಿರ ಕೋಟಿ ರೂಪಾಯಿಗಳಂತೆ ಕೃಷ್ಣೆಗೆ ಐದು ವರ್ಷದ ಅವಧಿಯಲ್ಲಿ 50 ಸಾವಿರ ಕೋಟಿ ರೂಪಾಯಿಗಳನ್ನು ನೀಡುವುದಾಗಿ ಕೂಡಲಸಂಗಮದಲ್ಲಿ ಕಾಯಿಕಟ್ಟಿ ಪ್ರಮಾಣ ಮಾಡಿದ್ದ vಕಾಂಗ್ರೆಸ್ ನಾಯಕರು, ಅಧಿಕಾರ ಸಿಗುತ್ತಿದ್ದಂತೆ ಯೂಟರ್ನ್ ಹೊಡೆದಿದ್ದರು.

ಇಳಕಲ್ ನಗರಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಕೂಡ ಕೃಷ್ಣೆಗಾಗಿ 50 ಸಾವಿರ ಕೋಟಿ ವ್ಯಯ ಮಾಡುವ ಬದ್ಧತೆ ಪ್ರಕಟಿಸಿದ್ದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ರಾಜ್ಯದ ಎಲ್ಲ ನೀರಾವರಿ ಯೋಜನೆಗಳು ಸೇರಿ 50 ಸಾವಿರ ಕೋಟಿ ರೂ.ಗಳನ್ನು ನೀಡುವುದಾಗಿ ಹೇಳಿದ್ದೇವೆ ಎಂದರು. ಕೃಷ್ಣೆಗೆ ಮಾತ್ರ ಎಂದು ಘೋಷಿಸಿಯೇ ಇಲ್ಲ ಎಂದು ಯೂ ಟರ್ನ್ ಹೊಡೆದಿದ್ದರೆ, ಕೃಷ್ಣೆಗಾಗಿ ಪಾದಯಾತ್ರೆ ನಡೆಸಿದ್ದ ಅವರ ಅವಧಿಯಲ್ಲಿ ಒಂದೇ ಒಂದು ಪುನರ್ವಸತಿ ಯೋಜನೆಗೂ ಚಾಲನೆ ಸಿಗಲಿಲ್ಲ.

ಚುನಾವಣೆ ಪ್ರಚಾರಕ್ಕಾಗಿ ಮಾತ್ರ ಕೃಷ್ಣೆಯನ್ನ ಬಳಸಿಕೊಂಡ ಮೂರು ಪಕ್ಷಗಳು: ಇದು ಕಾಂಗ್ರೆಸ್ ಪಕ್ಷ ಒಂದರ ಕಥೆ ಅಲ್ಲ. ಕೃಷ್ಣೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಪರಿ ಇಲ್ಲಿನ ರಾಜಕಾರಣಿಗಳಿಗೆ ಕರಗತವಾಗಿದೆ. ಅದರಂತೆ ಈಗ ಮೇಕೆದಾಟಿಗೂ ಕೂಗು ಶುರುವಾಗಿದೆ.

2018 ರ ಚುನಾವಣೆ ಸಂಧರ್ಭದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಳಜಿ ತೋರಿದ್ದರು. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾದ ಬಳಿಕ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡಿಬಿಟ್ಟರು.

ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ಅಧಿಕಾರಕ್ಕೆ ಬಂದ ಬಿ.ಎಸ್ ಯಡಿಯೂರಪ್ಪ ಕೂಡ ಹೇಳಿಕೊಳ್ಳುವಂತಹ ಬದ್ಧತೆ ಪ್ರದರ್ಶಿಸಲಿಲ್ಲ. ಸದ್ಯ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಬಾಗಲಕೋಟೆ ಜಿಲ್ಲೆಯವರೇ ಆದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಬದ್ಧತೆ ಇದೆ ಎಂದು ಮೇಲಿಂದ ಮೇಲೆ ಹೇಳುತ್ತಿದ್ದಾರೆ.

ಆದರೆ ಇನ್ನುಳಿದ ಒಂದು ವರ್ಷದ ಅವಧಿಯಲ್ಲಿ ಯಾವ ಸಾಧನೆ ಮಾಡಲಿದ್ದಾರೆ ಎಂದು ಕೃಷ್ಣೆಯ ಮಕ್ಕಳು ಕುತೂಹಲದಿಂದ ಕಾಯುತ್ತಿದ್ದಾರೆ.

ಸದ್ಯ ಮೇಕೆದಾಟು ವಿಚಾರವಾಗಿ ಕಾಂಗ್ರೆಸ್ ಮತ್ತೆ ಮೈಗೊಡವಿ ನಿಂತಿದೆ. ಆದರೆ ಕೃಷ್ಣಗೆ ಬಂದ ಸ್ಥಿತಿ ಮೇಕದಾಟಿಗೆ ಬಾರದಿರಲಿ ಎಂಬುದು ಈ ಭಾಗದ ಜನರ ಮಾತಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here